Advertisement

ಮುಧೋಳ: ಅಂಗನವಾಡಿ ಮಕ್ಕಳಿಗೆ ಪಂಚಾಯಿತಿಯಲ್ಲಿ ಪಾಠ!

06:07 PM Mar 30, 2023 | Team Udayavani |

ಮುಧೋಳ: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಅಪೂರ್ಣವಾಗಿರುವ ಅಂಗನವಾಡಿ ಕೇಂದ್ರದಲ್ಲಿ ನೀರು ಸಂಗ್ರಹಗೊಳ್ಳುತ್ತಿದ್ದು, ಮಕ್ಕಳೆಲ್ಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಾಠ ಆಲಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಮಳಲಿ ಗ್ರಾಮದಲ್ಲಿನ ಮೂರನೇ ವಾರ್ಡ್ ನಲ್ಲಿನ ಅಂಗನವಾಡಿಯಲ್ಲಿ ನೀರು ನುಗ್ಗುತ್ತಿದ್ದು, ಮಕ್ಕಳಿಗೆ ಇನ್ನಿಲ್ಲದ ಕಿರಿಕಿರಿಯುಂಟಾಗುತ್ತಿದೆ. ಅ ಧಿಕಾರಿಗಳು ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸದ ಕಾರಣ ವಿಧಿ ಯಿಲ್ಲದೆ ಪಾಲಕರು ಬುಧವಾರ ತಮ್ಮ ಮಕ್ಕಳನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಪಂಚಾಯಿತಿ ಕಚೇರಿಯಲ್ಲಿಯೇ ಪಾಠ ಮಾಡಿ ಅಡುಗೆ ತಯಾರಿಸಿ ಊಟ ಮಾಡಿಸಿದ್ದಾರೆ.

ಅಂಗನವಾಡಿ ಎದುರಿಗಿರುವ ಟ್ಯಾಂಕ್‌ನಲ್ಲಿನ ನೀರು ಕೇಂದ್ರದೊಳಗೆ ಸಂಗ್ರಹಗೊಳ್ಳುತ್ತಿರುವ ಪರಿಣಾಮ ಮಕ್ಕಳಿಗೆ ಇನ್ನಿಲ್ಲದ ಕಿರಿಕಿರಿಯುಂಟಾಗುತ್ತಿದೆ. ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಚಿಕ್ಕಚಿಕ್ಕ ಮಕ್ಕಳ ಸಮಸ್ಯೆ ಅರಿಯದ ಅಧಿ ಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದಕ್ಕೆ ಗ್ರಾಮಸ್ಥರು ಹಾಗೂ ಮಕ್ಕಳ ಪಾಲಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪೂರ್ಣಗೊಂಡ ದುರಸ್ತಿ ಕಾರ್ಯ: ಮೂರನೇ ವಾರ್ಡ್‌ನಲ್ಲಿನ ಅಂಗನವಾಡಿಯನ್ನು ಪಂಚಾಯತ್‌ ರಾಜ್‌ ಇಲಾಖೆಯಿಂದ ದುರಸ್ತಿ ಮಾಡಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳಿಸದ ಕಟ್ಟಡದಲ್ಲಿ ಮಕ್ಕಳಿಗೆ ಹೇಗೆ ಪಾಠ ಮಾಡುತ್ತಿದ್ದರೂ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ದುರಸ್ತಿ ಮೇಲ್ವಿಚಾರಣೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದ ಕಾರಣ ಇಂದು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಅದನ್ನು ಅರಿಯದೆ ಅಂಗನವಾಡಿ ನಡೆಸುವುದಕ್ಕೆ ಅನುಮತಿ ನೀಡಿದ್ದರಿಂದ ಇದೀಗ ಅಲ್ಲಿನ ಮುಗ್ಧ ಮಕ್ಕಳು ತೊಂದರೆಪಡುವಂತಾಗಿದೆ. ಕೂಡಲೇ ಅಂಗನವಾಡಿ ಕೇಂದ್ರವನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ ಮಕ್ಕಳ ಕಲಿಕೆಗೆ ಅನುಕೂಲ ಕಲ್ಪಿಸಬೇಕು ಎಂಬುದ ಗ್ರಾಮಸ್ಥರ ಒತ್ತಾಯವಾಗಿದೆ.

ನನಗೇನೂ ಗೊತ್ತಿಲ್ಲ
ಗ್ರಾಮದ ಅಂಗನವಾಡಿ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿ ಓಲೇಕಾರ ಅವರನ್ನು ಸಂಪರ್ಕಿಸಿದರೆ ನಾನು ಮಳಲಿ ಪಂಚಾಯಿತಿಗೆ ಬಂದು ಅಧಿಕಾರ
ವಹಿಸಿಕೊಂಡು ಕೆಲವೇ ದಿನಗಳಾಗಿವೆ. ಅಂಗನವಾಡಿ ಸಮಸ್ಯೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹಾರಿಕೆ ಉತ್ತರ ನೀಡಿದರು.

Advertisement

ಮಳಲಿ ಗ್ರಾಮದ ಮೂರನೇ ವಾರ್ಡ್‌ನ ಅಂಗನವಾಡಿ ದುರಸ್ತಿ ಕಾರ್ಯ ಬಾಕಿಯಿದ್ದು ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು.
ತಮ್ಮಣ್ಣ ಮೀಸಿ, ಪಂಚಾಯತ್‌ ರಾಜ್‌ ಇಲಾಖೆ
ಇಂಜಿನಿಯರ್‌ ಮುಧೋಳ

ಮಳಲಿ ಅಂಗನವಾಡಿ ಕೇಂದ್ರದಲ್ಲಿ ನೀರು ನಿಲ್ಲುತ್ತಿರುವುದು ಸ್ಥಳೀಯರಿಂದ ನನಗೆ ತಿಳಿದುಬಂದಿದೆ. ನಾನು ಅಂಗನವಾಡಿ ಕೇಂದ್ರಕ್ಕೆ ಭೇಟಿ ಕೊಟ್ಟು ಪರಿಶೀಲಿಸುತ್ತೇನೆ. ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೂ ಮಕ್ಕಳಿಗೆ ಪ್ರಾಥಮಿಕ ಶಾಲೆಯ ಒಂದು ಕೊಠಡಿಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಹೇಳಿಕೊಡಲಾಗುವುದು.
ಎ.ಬಿ. ಕುಬಕಡ್ಡಿ,
ಸಿಡಿಪಿಒ ಮುಧೋಳ

ನಮ್ಮ ಊರಿನಲ್ಲಿ 7-8 ಅಂಗನವಾಡಿ ಕೇಂದ್ರಗಳಿರುವುದರಿಂದ ಮೂರನೇ ವಾರ್ಡ್ ನ ಅಂಗನವಾಡಿ ಸಮಸ್ಯೆ ಬಗ್ಗೆ ನನಗೆ ತಿಳಿದಿಲ್ಲ. ಅಲ್ಲಿನ ಪಾಲಕರು ಏಕಾಏಕಿ ಮಕ್ಕಳನ್ನು ಕರೆದುಕೊಂಡು ಪಂಚಾಯಿತಿಗೆ ಬಂದಿದ್ದಾರೆ. ಕೂಡಲೇ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತೇವೆ ಅಂಗನವಾಡಿ ಮಕ್ಕಳಿಗೆ ತಾತ್ಕಾಲಿಕ ಪರಿಹಾರವಾಗುವವರೆಗೂ ರಜೆ ನೀಡುತ್ತೇವೆ.
ರಾಮಪ್ಪ ಪರಸಪ್ಪಗೋಳ
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಳಲಿ

ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next