Advertisement

Mudhol: ಸಂಸ್ಕಾರಯುತ ಬದುಕಿಗೆ ಶರಣರ ವಚನ ದಾರಿದೀಪ

04:39 PM Aug 19, 2023 | Team Udayavani |

ಮುಧೋಳ: ಪ್ರಸ್ತುತ ದಿನಮಾನದಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಶರಣರು ಜೀವನದಲ್ಲಿ ನಡೆ-ನುಡಿಯನ್ನು ಒಂದಾಗಿಸಿ ಕೊಂಡವರು. ಶರಣರ ನಡೆ-ನುಡಿ ಇಂದಿನ ಸಮಾಜದ ಜನತೆಗೆ ಆದರ್ಶಪ್ರಿಯವಾಗಿದ್ದು ಎಲ್ಲರ ಬದುಕನ್ನು ರೂಪಿಸಿಕೊಳ್ಳುವಲ್ಲಿ ಶರಣರ ವಚನಗಳು ದಾರಿದೀಪವಾಗಿವೆ ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಮುಧೋಳ ತಾಲೂಕಾ ಘಟಕದ ಅಧ್ಯಕ್ಷ ಡಾ| ಸಿದ್ದಣ್ಣ ಬಾಡಗಿ ಹೇಳಿದರು.

Advertisement

ನಗರದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ, ಕನ್ನಡ ಸಂಘ ಹಾಗೂ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಮುಧೋಳ ತಾಲೂಕು ಘಟಕದ ಸಹಯೋಗದೊಂದಿಗೆ ಕಾಲೇಜಿನ  ಸಭಾ ಭವನದಲ್ಲಿ ವಿದ್ಯಾರ್ಥಿನಿಯರಿಗಾಗಿ
ಆಯೋಜಿಸಲಾಗಿದ್ದ ವಚನ ಕಂಠಪಾಠ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ| ಮಲ್ಲಿಕಾರ್ಜುನ ಹಿರೇಮಠ, ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ಬಸವಾದಿ ಶರಣರ ವಚನಗಳಲ್ಲಿ ಜೀವನಕ್ಕೆ ಬೇಕಾಗುವ ಮೌಲ್ಯಗಳು ಇವೆ. ಇಂತಹ ವಚನಗಳನ್ನು
ಓದುವುದರ ಮೂಲಕ ಅವುಗಳ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಬದುಕು ಸಾರ್ಥಕಮಯವಾಗುತ್ತದೆ ಎಂದರು.

ವಚನ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಮುನವಳ್ಳಿ ಅತಿಥಿ ಸ್ಥಾನವಹಿಸಿ ಮಾತನಾಡಿ 12ನೇ ಶತಮಾನದ ವಚನ ಸಾಹಿತ್ಯ ಸಮಾಜದ ಏಳ್ಗೆಯನ್ನು, ಸರ್ವರ ಉದ್ಧಾರ ಬಯಸಿದ್ದು ಅವರ ವಚನಗಳು ಜೀವನೌಷಧಿ ಇದ್ದಂತೆ ಎಂದರು.

ನಿರ್ಣಾಯಕರಾಗಿದ್ದ ಪ್ರೊ| ವ್ಹಿ.ಎಂ. ಕಿತ್ತೂರ ಮಾತನಾಡಿ ವಚನಕಾರರ ವಚನಗಳ ತತ್ವ-ಸಿದ್ಧಾಂತದ ಸಾಧ್ಯತೆಗಳನ್ನು ತಿಳಿಸಿ, ವಚನ ಕಂಠಪಾಠ ಸ್ಪರ್ಧೆಯ ನಿರ್ಣಾಯಕ ತತ್ವಗಳನ್ನು ಹೇಳಿದರು. ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಮುಖ್ಯಸ್ಥ ಪ್ರೊ|ಎನ್‌.ಎನ್‌.ಬಾರಕೇರ ಮಾತನಾಡಿದರು. ವಿದ್ಯಾರ್ಥಿನಿಯರಿಂದ ವಚನ ಕಂಠಪಾಠ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Advertisement

ವಚನ ಕಂಠಪಾಠ ಸ್ಪರ್ಧೆಯಲ್ಲಿ ರಾಧಾ ಕೊಳ್ಳಣ್ಣವರ, ಶಿಲ್ಪಾ ಯಡಹಳ್ಳಿ, ನಿಂಗಮ್ಮ ಪರೀಟ ಈ ವಿದ್ಯಾರ್ಥಿನಿಯರು ಕ್ರಮವಾಗಿ
ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡರು. ಪ್ರೊ| ಬಿ.ಎನ್‌.ಬಾರಕೇರ ಸ್ವಾಗತಿಸಿದರು. ಪ್ರೊ| ಎಂ.ಎಸ್‌.ಕತ್ತಿ ವಂದಿಸಿದರು.

ಪ್ರೊ| ಕೆ.ಎಲ್‌.ಗುಡಿಮನಿ ನಿರೂಪಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಸ್ಪರ್ಧಾಳುಗಳು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next