Advertisement

ಮುಧೋಳ ಕೆರೆ ಹೂಳೆತ್ತಲು ಇಂದು ಚಾಲನೆ

12:05 PM May 26, 2019 | Suhan S |

ಯಲಬುರ್ಗಾ: ನಾಲ್ಕು ಗ್ರಾಮಗಳಿಗೆ ಅಂರ್ತಜಲ ಮೂಲವಾಗಿರುವ ತಾಲೂಕಿನ ಮುಧೋಳ ಗ್ರಾಮದ ಕೆರೆ ಹೂಳೆತ್ತುವ ಕಾರ್ಯ ಗ್ರಾಪಂ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮೇ 26ರಂದು ಆರಂಭವಾಗಲಿದೆ.

Advertisement

ಸಾರ್ವಜನಿಕರ ಸಹಭಾಗಿತ್ವದಲ್ಲಿ ಆರಂಭಗೊಳ್ಳಲಿರುವ ಕಾಮಗಾರಿಗೆ ಎರಡು ಜೆಸಿಬಿ ಯಂತ್ರಗಳನ್ನು ಬಳಸಲಾಗುತ್ತದೆ. ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಟಿಪ್ಪರ್‌, ಟ್ರ್ಯಾಕ್ಟರ್‌ಗಳನ್ನು ಕೆಲಸಕ್ಕೆ ಬಿಡಲು ಒಪ್ಪಿಕೊಂಡಿದ್ದಾರೆ. ಈ ಕಾಮಗಾರಿ 25 ದಿನಗಳವರೆಗೆ ನಡೆಯಲಿದೆ.

ನಾಲ್ಕು ಗ್ರಾಮಗಳಿಗೆ ಅನುಕೂಲ: ಈ ಕೆರೆ ಒಟ್ಟು 14 ಎಕರೆ ವ್ಯಾಪ್ತಿ ಹೊಂದಿದೆ. ಮುಧೋಳ ಕೆರೆಯು 4 ಗ್ರಾಮಗಳಿಗೆ ಅಂರ್ತಜಲ ಮೂಲವಾಗಿದೆ. ಮುಧೋಳ, ಕರಮುಡಿ, ಹಿರೇಮ್ಯಾಗೇರಿ ಮತ್ತು ಝಲಜೇರಿ ಸೇರಿದಂತೆ ಇನ್ನಿತರ ಗ್ರಾಮಗಳು ಕೆರೆಯ ಪ್ರಯೋಜನೆ ಪಡೆಯಲಿವೆ.

ಜಾಗೃತಿ: ಕೆರೆ ಹೂಳೆತ್ತುವ ಕಾರ್ಯ ನಿಮಿತ್ತ ಈಗಾಗಲೇ ಗ್ರಾಮಸ್ಥರು ಹಲವಾರು ಪೂರ್ವಭಾವಿ ಸಭೆಗಳನ್ನು ಮಾಡಿದ್ದಾರೆ. ಕೆರೆ ಪುನರುಜ್ಜೀವನ ನಮ್ಮ ಆಶಯ ಎಂಬ ಧ್ಯೇಯ ವಾಖ್ಯೆದೊಂದಿಗೆ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗಿದೆ. ಗ್ರಾಮದ ಶಾಲಾ ಶಿಕ್ಷಕರು, ಆರೋಗ್ಯ ಇಲಾಖೆ, ಸಿಬ್ಬಂದಿಗಳು, ಗ್ರಾಮದ ಸರಕಾರಿ ನೌಕರರು, ಗ್ರಾಪಂ ಸಿಬ್ಬಂದಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕೆರೆ ಅಭಿವೃದ್ಧಿಗೆ ದೇಣಿಗೆ ನೀಡುತ್ತಿದ್ದಾರೆ.

ಸಮಿತಿ ರಚನೆ: ಕೆರೆಯ ಅಭಿವೃದ್ಧಿಗೋಸ್ಕರವಾಗಿ ಗ್ರಾಮದಲ್ಲಿ ಕೆರೆ ಪುನರುಜ್ಜೀವನ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ 21 ಜನ ಪದಾಧಿಕಾರಿಗಳು ಇದ್ದಾರೆ. ಕೆರೆ ಅಭಿವೃದ್ಧಿಗೆ ಗ್ರಾಪಂ ನರೇಗಾ ಯೋಜನೆಯಡಿ 10 ಲಕ್ಷ ರೂ. ಹಾಗೂ 14ನೇ ಹಣಕಾಸು ಯೋಜನೆಯಡಿ 5 ಲಕ್ಷ ರೂ. ನೀಡಿದೆ.

Advertisement

ಮಾದರಿ ಕೆರೆ ನಿರ್ಮಾಣಕ್ಕೆ ಪಣ: ಕೆರೆಯನ್ನು ಸ್ವಚ್ಛಗೊಳಿಸಿ ಮುಳ್ಳು ಕಂಟಿಗಳನ್ನು ತೆರೆವುಗೊಳಿಸಿ ಕೆರೆ ಹೂಳೆತ್ತುವ ಕಾರ್ಯ ನಡೆಯಲಿದೆ. ನಂತರದಲ್ಲಿ ಕೆರೆಗೆ ಸಂಪೂರ್ಣ ಒಡ್ಡು ನಿರ್ಮಿಸಿ ಸುತ್ತಲೂ ತಂತಿಬೇಲಿ ಅಳವಡಿಸಿ ಸಸಿ ನೆಡುವ ಯೋಜನೆಯ ರೂಪರೇಷಗಳನ್ನು ಸಿದ್ಧಪಡಿಸಲಾಗಿದೆೆ.

ಇಂದು ಚಾಲನೆ: ನಿಡಗುಂದಿಕೊಪ್ಪದ ಸಿದ್ದರಾಮ ದೇವರು, ರೋಣದ ಗುಲಗಂಜಿಮಠದ ಗುರುಪಾದ ದೇವರು ಕೆರೆ ಹೂಳೆತ್ತುವ ಕಾರ್ಯಕ್ಕೆ ಮೇ 26ರಂದು ಚಾಲನೆ ನೀಡಲಿದ್ದಾರೆ. ಶಾಸಕ ಹಾಲಪ್ಪ ಆಚಾರ್‌, ಮಾಜಿ ಸಚಿವ ಬಸವರಾಜ ರಾಯರಡ್ಡಿ, ಚುನಾಯಿತ ಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕೆರೆ ಹೂಳೆತ್ತುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೆರೆ ಅಭಿವೃದ್ಧಿ ಪರ್ವ:

ತಾಲೂಕಿನಲ್ಲಿ ಈಗಾಗಲೇ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಕಲಭಾವಿ ಕೆರೆ ಹೂಳೆತ್ತುವ ಕಾರ್ಯ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಯಶಸ್ವಿ ಹಂತಕ್ಕೆ ತಲುಪಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಂಗನಾಳ ಕೆರೆ ಹೂಳೆತ್ತುವ ಕಾರ್ಯ ನಡೆದಿದೆ. ಕಲಭಾವಿ, ಸಂಗನಾಳ ನಂತರ ಇದೀಗ ಮುಧೋಳ ಕೆರೆ ಅಭಿವೃದ್ಧಿಗೊಳಿಸಲು ಸಿದ್ಧತೆ ನಡೆಸಲಾಗಿದೆ. ತಾಲೂಕಿನಲ್ಲಿ ಕೆರೆ ಕಾಯಕ ಮುಂದುವರಿದಿದ್ದು ತಾಲೂಕಿನಲ್ಲಿ ನಡೆಯುತ್ತಿರುವ ಜಲಜಾಗೃತಿ ಕಾರ್ಯ ಸ್ವಾಗತಾರ್ಹ.
•ಮಲ್ಲಪ್ಪ ಮಾಟರಂಗಿ
Advertisement

Udayavani is now on Telegram. Click here to join our channel and stay updated with the latest news.

Next