Advertisement

ಕೋವಿಡ್ : ಬಸರಕೋಡ-ಕಾಳಗಿಯಲ್ಲಿ ಸೀಲ್‌ಡೌನ್‌

04:48 PM Jun 06, 2020 | Naveen |

ಮುದ್ದೇಬಿಹಾಳ: 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಮುಗಿಸಿ ಮನೆಗೆ ತೆರಳಿದ್ದ ನಾಲ್ವರಿಗೆ ಕೋವಿಡ್ ಸೋಂಕಿನ ಪಾಸಿಟಿವ್‌ ಕಂಡು ಬಂದಿದ್ದರಿಂದ ಅವರು ವಾಸವಿದ್ದ ಪ್ರದೇಶ, ಗ್ರಾಮವನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕಾಡಳಿತ ಶುಕ್ರವಾರ ಸೀಲ್‌ಡೌನ್‌ ಮಾಡಿದೆ.

Advertisement

ಮಹಾರಾಷ್ಟ್ರದ ಮುಂಬೈನಿಂದ ಮರಳಿ ಬಂದಿದ್ದ ಇವರೆಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಟ್ಟು 14ನೇ ದಿನ ಗಂಟಲುದ್ರವದ ಮಾದರಿ ಸಂಗ್ರಹಿಸಿ 7 ದಿನಗಳ ಹೋಮ್‌ ಕ್ವಾರಂಟೈನ್‌ ನಲ್ಲಿರುವಂತೆ ತಿಳಿಸಿ ಮನೆಗೆ ಕಳಿಸಲಾಗಿತ್ತು. ಇದೀಗ ಇವರ ಗಂಟಲು ದ್ರವದ ವರದಿ ಪಾಸಿಟಿವ್‌ ಬಂದಿದ್ದರಿಂದ ತಾಲೂಕಾಡಳಿತ ಈ ಕ್ರಮ ಕೈಗೊಂಡಿದೆ. ಬಸರಕೋಡದಲ್ಲಿ ಒಂದು ಪ್ರಕರಣ ವರದಿಯಾಗಿದ್ದರಿಂದ ಅದೇ ಗ್ರಾಮದವರಾಗಿರುವ ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಪಿಡಿಒ ಎಸ್‌.ಐ. ಹಿರೇಮಠ ಅವರು ಮುಂದೆ ನಿಂತು ಸೋಂಕು ವರದಿಯಾದ ವ್ಯಕ್ತಿ ವಾಸವಿದ್ದ ಪ್ರದೇಶವನ್ನು ಸೀಲ್‌ಡೌನ್‌ ಮಾಡಿಸಿ ಜನರಲ್ಲಿ ಮೂಡಿದ್ದ ಆತಂಕ ನಿವಾರಿಸಿದರು.

ಯರಝರಿ ಗ್ರಾಪಂ ವ್ಯಾಪ್ತಿಯ ಚಿರ್ಚನಕಲ್‌ ಗ್ರಾಮದಲ್ಲೂ ಒಂದು ಪ್ರಕರಣ ವರದಿಯಾದ ಹಿನ್ನೆಲೆ ಅಲ್ಲಿಯೂ ಭಾಗಶಃ ಸೀಲ್‌ ಡೌನ್‌ ಮಾಡಲಾಗಿದೆ. ಕಾಳಗಿಯಲ್ಲಿ ಎರಡು ಪ್ರಕರಣ ವರದಿಯಾದ ಹಿನ್ನೆಲೆ ಬಹುತೇಕ ಇಡಿ ಗ್ರಾಮವನ್ನೇ ಸೀಲ್‌ಡೌನ್‌ ಮಾಡಲಾಗಿದೆ. ಈ ಹಿಂದೆ ಸರೂರ ತಾಂಡಾದಲ್ಲಿ ಪಾಸಿಟಿವ್‌ ಪ್ರಕರಣ ಕಂಡುಬಂದಾಗ ಇಡಿ ತಾಂಡಾವನ್ನು ವಾರದವರೆಗೆ ಸೀಲ್‌ಡೌನ್‌ ಮಾಡಲಾಗಿತ್ತು. ಈಗ ಸೀಲ್‌ಡೌನ್‌ ಮಾಡಿರುವ ಗ್ರಾಮಗಳಲ್ಲಿ ಜಿಲ್ಲಾಧಿಕಾರಿಗಳ ಆದೇಶ ಬರುವವರೆಗೂ ಸೀಲ್‌ಡೌನ್‌ ಮುಂದುವರಿಯಲಿದೆ. ಸೀಲ್‌ ಡೌನ್‌ ಏರಿಯಾದಲ್ಲಿ ಇರುವ ಜನರ ನಿತ್ಯದ ಜೀವನಕ್ಕೆ ಆವಶ್ಯಕ ವಸ್ತು, ಸಾಮಗ್ರಿ ಪೂರೈಸಲು ಆಯಾ ಗ್ರಾಪಂ ಪಿಡಿಒಗಳಿಗೆ ಜವಾಬ್ದಾರಿ ವಹಿಸಲಾಗಿದೆ.

ತಹಶೀಲ್ದಾರ್‌ ಜಿ.ಎಸ್‌. ಮಳಗಿ, ಸಿಪಿಐ ಆನಂದ ವಾಗಮೋಡೆ, ಆಯಾ ಗ್ರಾಪಂ ಪಿಡಿಒಗಳು, ಪಂಚಾಯತ್‌ ಸಿಬ್ಬಂದಿ ಸೀಲ್‌ ಡೌನ್‌ಗೆ ಸಹಕರಿಸಿದರು. ಪಾಜಿಟಿವ್‌ ಪ್ರಕರಣ ಕಾಣಿಸಿಕೊಂಡಿರುವ ಎಲ್ಲರನ್ನೂ ವಿಜಯಪುರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next