ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಗಲ್ ಗ್ರಾಮದಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ದಿನಗೂಲಿ ಕಾರ್ಮಿಕ ದುರಂತ ಸಾವು ಕಂಡಿರುವ ದುರ್ಘಟನೆ ಸಂಭವಿಸಿದೆ.
ದುರ್ಘಟನೆಯಲ್ಲಿ ಮೃತ ಕಾರ್ಮಿಕನನ್ನು ಸಿದ್ದಪ್ಪ ದೊಡಮನಿ (55) ಎಂದು ಗುರುತಿಸಲಾಗಿದೆ. ಮುದ್ದೇಬಿಹಾಳ ತಾಲೂಕಿನ ಹಡಗಲಿ ಮೂಲದ ಸಿದ್ದಪ್ಪ ಸಕ್ಕರೆ ಕಾರ್ಖಾನೆಯಲ್ಲಿ ದಿನಗೂಲಿ ಕಾರ್ಮಿಕನಾಗಿದ್ದ. ಕೆಲಸದ ವೇಳೆ ಸೂಕ್ತ ಸುರಕ್ಷತಾ ಕ್ರಮ ಇಲ್ಲದೇ ಕೆಲಸದಲ್ಲಿ ತೊಡಗಿದ್ದರಿಂದ ದುರಂತಕ್ಕೆ ಕಾರಣವೆಂದು ಕಾರ್ಖಾನೆ ಕಾರ್ಮಿಕರು ಆರೋಪಿಸುತ್ತಿದ್ದಾರೆ.ಮೃತ ದಿನಗೂಲಿ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಸಿದ್ದಪ್ಪ ಅವರು ಕಾರ್ಖಾನೆಯ ಕಬ್ಬು ಅನಲೋಡ್ ಮಾಡಿ ಕ್ಯಾನಲ್ ಗೆ ಸುರಿದಾಗ ಅಕ್ಕಪಕ್ಕ ಚೆಲ್ಲಾಡುವ ಕಬ್ಬಿನ ಜಲ್ಲೆ ಆಯ್ದು ಕ್ರೇನಗೆ ಹಾಕುವ ಕೆಲಸ ಮಾಡುತ್ತಿದ್ದರು. ಹೀಗೆ ಹಾಕುವಾಗ ಕಾಲು ಜಾರಿ ಕ್ಯಾನಲ್ ನೊಳಗೆ ಬಿದ್ದಿದ್ದು ದೇಹ ಕಬ್ಬಿನ ಸಮೇತ ಯಂತ್ರದೊಳಗೆ ಎಳೆದೊಯ್ದು ಇನ್ನೊಂದು ಬದಿ ಛಿದ್ರವಾಗಿ ಹೊರಬಂದಿದೆ. ತಲೆ ಮಾತ್ರ ಇದ್ದು ದೇಹದ ಇತರೆ ಭಾಗ ಛಿದ್ರ ಆಗಿವೆ. ಈ ದೃಶ್ಯ ನೋಡಲು ಭೀಭತ್ಸವಾಗಿತ್ತು. ವಿಷಯ ಗೊತ್ತಾದ ಕೂಡಲೇ ಯಂತ್ರ ಬಂದ್ ಮಾಡಿ ಕಬ್ಬು ನುರಿಸುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ತಾಪ್ತಿ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ತೆರಳಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಉದಯವಾಣಿಗೆ ಪ್ರತಿಕ್ರಿಯೆ ನೀಡಿರುವ ಕಾರ್ಖಾನೆಯ ಎಂಡಿ ವೆಂಕಟೇಶ ಪಾಟೀಲ್ ಅವರು ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಈ ಕಾರ್ಮಿಕನಿಗೆ ಇನ್ಸೂರೆನ್ಸ್ ಇದ್ದು ಸೂಕ್ತ ಪರಿಹಾರ ಸಿಗಲಿದೆ ಎಂದು ತಿಳಿಸಿದ್ದಾರೆ.