ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದಲ್ಲಿನ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಹತ್ತಿರ ಇರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ ಇಣಚಗಲ್(ನಂ.1)ನ 12-15 ವಯೋಮಾನದ ವಿದ್ಯಾರ್ಥಿನಿಯರು ಕಳೆದ ಎರಡು ದಿನಗಳಿಂದ ಇದ್ದಕ್ಕಿದ್ದಂತೆ ಅಸ್ವಸ್ಥರಾಗುತ್ತಿರುವ, ಉಸಿರಾಟದ ತೊಂದರೆ (ಬ್ರೆತ್‌ಲೆಸ್‌ನೆಸ್)ಯಿಂದ ಬಳಲುತ್ತಿರುವ, ಕೈಗಳು ಇದ್ದಕ್ಕಿದ್ದಂತೆ ಸೆಟೆದುಕೊಂಡು (ಸ್ಟಿಫ್‌ನೆಸ್) ಶಕ್ತಿ ಕಳೆದುಕೊಂಡಂತಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಘಟನೆ ಬುಧವಾರ ಸಂಜೆ ಬೆಳಕಿಗೆ ಬಂದಿದೆ.
ಮಂಗಳವಾರ 7 ವಿದ್ಯಾರ್ಥಿನಿಯರು ಶಿಕ್ಷಕ ಗುಲಾಮ್‌ಅಲಿ ಬಿಲಾವರ್ ಅವರೊಂದಿಗೆ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಆ ಪೈಕಿ ಒಬ್ಬ ವಿದ್ಯಾರ್ಥಿನಿ ಒಂದು ಗಂಟೆವರೆಗೂ ಆಸ್ಪತ್ರೆಯಲ್ಲೇ ಒಳರೋಗಿಯಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾಳೆ. ಬುಧವಾರ ಮೂವರು ವಿದ್ಯಾರ್ಥಿನಿಯರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಇವರಲ್ಲಿ ಸಾನಿಯಾ ಕೊರ್ಬು, ಲಕ್ಷ್ಮೀಬರಗಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಾಲೆಯ ವಾರ್ಡನ್ ನಿಂಗನಗೌಡ ಪಾಟೀಲ ಅವರು ಬಾಗಲಕೋಟೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನೀಲು ಚೌಧರಿ ಎಂಬಾಕೆಯನ್ನು ಆಕೆಯ ಪಾಲಕರು ವಿಜಯಪುರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವರ್ಷದ ಹಿಂದೆ ಈ ಶಾಲೆ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಗೊಂಡಿದೆ. ಸದ್ಯ ಇಲ್ಲಿ 6ರಿಂದ 9 ತರಗತಿಗಳು ನಡೆಯುತ್ತಿದ್ದು ತಾಲೂಕಿನ ವಿವಿಧೆಡೆಯ 118 ಬಾಲಕರು, 80 ಬಾಲಕಿಯರು ಅಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಬೋರ್ ವೆಲ್ ನೀರನ್ನು ಕುಡಿಯಲು ಬಳಸುತ್ತಿರುವುದು, ಶಾಲೆಯ ಪಕ್ಕದಲ್ಲಿರುವ ಅಂಗಡಿಯೊಂದರಲ್ಲಿ ಮಾರಾಟಕ್ಕೆ ಸಿಗುವ ಉಪ್ಪಿನಂಶ ಹೊಂದಿದ ಸೂರ್ಯಕಾಂತಿ ಬೀಜ (ಟೈಂಪಾಸ್ ಸನ್‌ಫ್ಲಾವರ್ ಸೀಡ್ಸ್)ಗಳನ್ನು ವಿದ್ಯಾರ್ಥಿನಿಯರು ಬಿಡುವಿನ ಅವಧಿಯಲ್ಲಿ ತಿನ್ನಲು ಬಳಸುತ್ತಿರುವುದು ಈ ಸಮಸ್ಯೆಗೆ ಕಾರಣವಾಗಿರಬಹುದು ಎಂದು ಮೇಲ್ನೋಟಕ್ಕೆ ಊಹಿಸಲಾಗಿದೆ. ಆದರೆ ಈ ಸಮಸ್ಯೆಗೆ ಖಚಿತ ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ.
ಸಂಜೆ ಶಾಲೆಗೆ ಭೇಟಿ ನೀಡಿದ್ದ ಉದಯವಾಣಿಯೊಂದಿಗೆ ಮಾತನಾಡಿದ ಮಕ್ಕಳು, ತಮಗೆ ಸರಿಯಾಗಿ ಊಟ ಕೊಡುವುದಿಲ್ಲ. ಚಪಾತಿಗಳ ಗುಣಮಟ್ಟ ಸರಿ ಇರುವುದಿಲ್ಲ. ಅಶುದ್ಧವಾಗಿರುವ ನೀರನ್ನೇ ಹಲವು ಬಾರಿ ಕುಡಿಯಲು ಕೊಟ್ಟಿದ್ದಾರೆ. ಬೆಳಗ್ಗೆ ಸ್ನಾನಕ್ಕೆ ಬಿಸಿನೀರಿನ ಬದಲು ತಣ್ಣೀರು ಕೊಡುತ್ತಾರೆ ಎಂದೆಲ್ಲ ಸಮಸ್ಯೆ ಹೇಳಿಕೊಂಡರು. ಈ ಕುರಿತು ಮಾತನಾಡಿದ ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡಿದ ವೈದ್ಯೆ ಡಾ| ಮಾನಸಾ, ವಿಟಮಿನ್ ಬಿ ಕೊರತೆಯಿಂದಾಗಿ ಮಕ್ಕಳಲ್ಲಿ ಸಮಸ್ಯೆ ಕಂಡು ಬರುತ್ತಿದೆ. ಅಸ್ವಸ್ಥರಾದವರೆಲ್ಲ 12ರಿಂದ 15 ವರ್ಷ ವಯೋಮಾನದ ಒಳಗಿನ ಬಾಲಕಿಯರಾಗಿದ್ದಾರೆ. ಮಂಗಳವಾರ ಓರ್ವ ವಿದ್ಯಾರ್ಥಿನಿಯನ್ನು ಒಳ ರೋಗಿಯನ್ನಾಗಿ ಇರಿಸಿಕೊಂಡು ಅರ್ಧ ಗಂಟೆಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿದ್ದೇನೆ. ಇನ್ನುಳಿದವರಿಗೆ ಸಂದರ್ಭಕ್ಕನುಸಾರ ಚಿಕಿತ್ಸೆ ನೀಡಿ ಕಳಿಸಿದ್ದೇನೆ.
ಅಸ್ವಸ್ಥರಾಗುತ್ತಿರುವ ವಿದ್ಯಾರ್ಥಿನಿಯರ ಪೈಕಿ ಒಬ್ಬಳು ಉಸಿರಾಟದ ತೊಂದರೆ ಇದೆ ಎಂದು ಹೇಳಿಕೊಂಡಿದ್ದಳು. ಎಲ್ಲರಿಗೂ ಬಿ ವಿಟಮಿನ್ ಔಷಧ, ಮಾತ್ರೆ ನೀಡಲಾಗಿದೆ. ಸದ್ಯ ಅವರ ಪರಿಸ್ಥಿತಿ ಸುಧಾರಿಸಿದ್ದು ಅವರೆಲ್ಲ ಆರೋಗ್ಯದಿಂದ ಇದ್ದಾರೆ ಎಂದು ತಿಳಿಸಿದರು.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಅನಿಲಕುಮಾರ ಶೇಗುಣಸಿ ಮಾತನಾಡಿ, ಹೆಚ್ಚು ಆಟೋಟಗಳಲ್ಲಿ ತೊಡಗಿಸಿಕೊಳ್ಳುವ ಬಾಲಕಿಯರಿಗೆ ಇಂಥ ಸಮಸ್ಯೆ ಕಂಡುಬರುವುದು ಸಾಮಾನ್ಯ. ಇದೇನು ಅಷ್ಟೊಂದು ಗಾಭರಿಪಡುವಂಥದ್ದಲ್ಲ. ಕುಡಿವ ನೀರು ಮತ್ತು ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಂಡರೆ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ. ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡವರಲ್ಲಿ ಒಬ್ಬ ವಿದ್ಯಾರ್ಥಿನಿಯನ್ನು ಹೊರತುಪಡಿಸಿ ಎಲ್ಲರೂ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಶಾಲೆ ಪ್ರಾಂಶುಪಾಲ ಎಸ್.ಡಿ. ಅಂಗಡಿ ಮಾತನಾಡಿ, ಬೋರ್‌ವೆಲ್ ನೀರನ್ನು ಫಿಲ್ಟರ್ ಮೂಲಕ ಮಕ್ಕಳಿಗೆ ಕೊಡುತ್ತೇವೆ. ಗುಣಮಟ್ಟದ ಊಟ ಕೊಡುತ್ತೇವೆ. ಶಾಲೆ ಪಕ್ಕದ ಅಂಗಡಿಯಲ್ಲಿನ ಸೂರ್ಯಕಾಂತಿ ಬೀಜದ ಪ್ಯಾಕೇಟುಗಳನ್ನು ಮಕ್ಕಳು ಬಳಸುವುದರಿಂದ ಸಮಸ್ಯೆ ಆಗಿರಬಹುದು. ಈ ಬಗ್ಗೆ ಅಂಗಡಿಯವರಿಗೆ ನೋಟಿಸ್ ಕೊಡುತ್ತೇನೆ. ಮಕ್ಕಳಿಗೆ ಕ್ಯಾಲ್ಸಿಯಂ, ವಿಟಮಿನ್ ಬಿ ಕೊರತೆ ಇದೆ ಎನ್ನಲಾಗುತ್ತಿದ್ದು ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ. ಎಲ್ಲರೂ ಗುಣಮುಖರಾಗಿದ್ದಾರೆ. ಇನ್ನು ಮುಂದೆ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತದೆ ಎಂದು ತಿಳಿಸಿದರು.