Advertisement

ಮುಸ್ಲಿಂ ಪಿಎಸೈನಿಂದ ಠಾಣೆಯಲ್ಲಿ ವಿಶೇಷ ಪೂಜೆ: ದೇವಸ್ಥಾನದಂತೆ ಕಂಗೊಳಿಸಿದ ಪೊಲೀಸ್ ಠಾಣೆ

07:24 AM Oct 05, 2022 | Team Udayavani |

ಮುದ್ದೇಬಿಹಾಳ: ಇಲ್ಲಿನ ಪೊಲೀಸ್ ಠಾಣೆಯ ನೂತನ ಪಿಎಸೈ ಆರೀಫ ಮುಷಾಪುರಿ ಅವರು ವಿಜಯದಶಮಿಯ ಆಯುಧ ಪೂಜೆ ಹಿನ್ನೆಲೆ ಸ್ವತಹ ತಾವೇ ಶ್ವೇತ ವಸ್ತ್ರಧಾರಿಯಾಗಿ, ಹಣೆಗೆ ಕುಂಕುಮದ ತಿಲಕ ಇಟ್ಟುಕೊಂಡು, ಕುಂಬಳಕಾಯಿ ಒಡೆದು, ನಾಡದೇವಿಗೆ ಮಂಗಳಾರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಶೇಷತೆ ಮೆರೆದದ್ದು ಮಾತ್ರವಲ್ಲದೆ ಕೋಮು ಸೌಹಾರ್ದತೆಯ ಸಂದೇಶವನ್ನೂ ಸಾರಿ ಸಮಾಜದ ಗಮನ ಸೆಳೆದಿದ್ದಾರೆ.

Advertisement

ಈ ವೇಳೆ ಠಾಣೆಯ ಬಂದೂಕುಗಳು, ವೈರಲೆಸ್ ಯಂತ್ರಗಳು, ಸಿಸಿ ಕ್ಯಾಮರಾ ಸಲಕರಣೆ, ಪೊಲೀಸ್ ವಾಹನಗಳು ಮುಂತಾದವುಗಳನ್ನು ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದ್ದು ಹೆಚ್ಚು ಜನಾಕರ್ಷಕವಾಗಿತ್ತು. ಠಾಣೆಯ ಮುಂದೆ ಸುಂದರವಾದ ರಂಗೋಲಿ ಬಿಡಿಸಿ, ಬಲೂನುಗಳಿಂದ ಅಲಂಕರಿಸಿ ತಳಿರು ತೋರಣ ಕಟ್ಟಿ ದೇವಸ್ಥಾನದಂತೆ ಬಿಂಬಿಸಿ ನೋಡುಗರಿಗೆ ಪೂಜ್ಯನೀಯ, ಗೌರವದ ಭಾವನೆ ಬರುವಂತೆ ಮಾಡಲಾಗಿತ್ತು.

ಮುಸ್ಲಿಂ ಪಿಎಸೈ ಒಬ್ಬರ ಈ ವಿಶೇಷ ಕಾಳಜಿ, ಆಚರಣೆ ಸಾಕಷ್ಟು ಗಮನ ಸೆಳೆದು ಇಡೀ ಪಟ್ಟಣದಾದ್ಯಂತ ಚರ್ಚೆಯ ವಿಷಯವಾಗಿತ್ತು. ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಮವಸ್ತ್ರದಲ್ಲಿ, ಕರ್ತವ್ಯದಲ್ಲಿರದ ಸಿಬ್ಬಂದಿ ಶ್ವೇತವಸ್ತ್ರದಲ್ಲಿ, ಮಹಿಳಾ ಪೊಲೀಸ್, ಪುರುಷ ಪೊಲೀಸರ ಪತ್ನಿಯರು ಇಲಕಲ್ಲ ಸೀರೆ ತೊಟ್ಟು ಪಾಲ್ಗೊಂಡಿದ್ದು ವಿಶೇಷ ಮೆರುಗು ನೀಡಿತ್ತು. ಸಿಪಿಐ ಆನಂದ ವಾಘ್ಮೋಡೆ, ಎಸೈಗಳು ಎಲ್ಲ ರೀತಿಯ ಸಹಕಾರ ನೀಡಿ ಆಯುಧ ಪೂಜೆ ಸಂಪ್ರದಾಯಕ್ಕನುಗುಣವಾಗಿ ನಡೆಯುವಂತೆ ನೋಡಿಕೊಂಡರು. ಅಯುಧ ಪೂಜೆ ನಿಮಿತ್ತ ಸರ್ವರಿಗೂ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next