Advertisement

ಮುಫತ್‌ ಗೈರಾಣ ಪ್ರದೇಶ ಅರಣ್ಯ ಇಲಾಖೆಗೆ ವಾಪಸ್‌

05:44 PM May 31, 2020 | Naveen |

ಮುದ್ದೇಬಿಹಾಳ: ಹಲವು ವರ್ಷಗಳಿಂದ ಖಾಸಗಿ ವ್ಯಕ್ತಿಗಳ ಪಾಲಾಗಿದ್ದ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮ ವ್ಯಾಪ್ತಿಯ 34 ಎಕರೆ ಮುಫತ್‌ ಗೈರಾಣ ಪ್ರದೇಶವನ್ನು ತಹಶೀಲ್ದಾರ್‌ ನೆರವಿನಿಂದ ಅರಣ್ಯ ಇಲಾಖೆ ವಾಪಸ್‌ ತನ್ನ ವಶಕ್ಕೆ ಪಡೆದುಕೊಂಡು, ಅಲ್ಲಿ 3800 ಗಿಡಗಳನ್ನು ಬೆಳೆಸಿ ಮಾದರಿ ನೆಡುತೋಪು ನಿರ್ಮಿಸಲು ಮುಂದಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.

Advertisement

ಶನಿವಾರ ಇಲ್ಲಿನ ಹಸಿರು ತೋರಣ ಗೆಳೆಯರ ಬಳಗದ ಪದಾಧಿಕಾರಿಗಳ ನಿಯೋಗ ಉಪ ವಲಯ ಅರಣ್ಯಾಧಿಕಾರಿ ಸುಭಾಷಚಂದ್ರ ಅವರ ಜತೆ ಆ ಪ್ರದೇಶಕ್ಕೆ ಭೇಟಿ ನೀಡಿ, ಎಲ್ಲೆಲ್ಲಿ ಗಿಡ ಬೆಳೆಸಬೇಕು ಎನ್ನುವ ಕುರಿತು ಚರ್ಚಿಸಿದ ವೇಳೆ ಈ ಪ್ರದೇಶ ವಶಪಡಿಸಿಕೊಂಡ ಯಶೋಗಾಥೆ ಹೇಳಿದರು.

ಈ ಪ್ರದೇಶವು ಕುಂಟೋಜಿಗೆ ಹೊಂದಿಕೊಂಡಿರುವ ಗುಡಿಹಾಳ ಗ್ರಾಮದ ಸೀಮೆಗೆ ಹತ್ತಿಕೊಂಡಿತ್ತು. ಇದರಲ್ಲಿ ಕೆಲವೊಂದಿಷ್ಟು ಎಕರೆ ಜಮೀನು ಖಾಸಗಿಯವರಿಂದ ಒತ್ತುವರಿ ಆಗಿತ್ತು. ಈ ಅತಿಕ್ರಮ ಗಮನಿಸಿದ್ದ ಕುಂಟೋಜಿ ಗ್ರಾಮ ಪಂಚಾಯಿತಿ ಪಿಡಿಒ ಪಿ.ಎಸ್‌ .ನಾಯ್ಕೋಡಿ ಅವರು ತಹಶೀಲ್ದಾರ್‌ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಖಾಸಗಿಯವರ ಅಡ್ಡಿ ಆತಂಕದ ನಡುವೆಯೂ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿ ಪ್ರಸ್ತುತ ಅಂದಾಜು 4 ಕೋಟಿ ರೂ ಮಾರುಕಟ್ಟೆ ಬೆಲೆ ಬಾಳುವ ಈ ಪ್ರದೇಶವನ್ನು ವಶಪಡಿಸಿಕೊಂಡಿದ್ದರು. ಅರಣ್ಯ ಇಲಾಖೆಯವರು 25 ದಿನಗಳವರೆಗೆ ಶ್ರಮಿಸಿ ಈ ಪ್ರದೇಶದಲ್ಲಿ ಬೆಳೆದಿದ್ದ ಮುಳ್ಳುಕಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿ ಹಳ್ಳಕೊಳ್ಳ ಸಮತಟ್ಟುಗೊಳಿಸಿದ್ದರು. ಅಲ್ಲಿ ಈಗ 3800 ಗಿಡಗಳನ್ನು ನೆಟ್ಟು ನೆಡು ತೋಪು ಮಾಡುವ ವಿಚಾರ ಇರುವುದನ್ನು ಸುಭಾಷಚಂದ್ರ ಅವರು ಚರ್ಚೆಯ ವೇಳೆ ಬಹಿರಂಗಪಡಿಸಿದರು. ಈ ಪ್ರದೇಶ ವಶಪಡಿಸಿಕೊಂಡು ಅಲ್ಲಿ ಅರಣ್ಯ ಬೆಳೆಸಲು ಸಹಕರಿಸಿದ ವಿಜಯಪುರ ಜಿಲ್ಲಾ ಡಿಸಿಎಫ್‌ ಸರೀನಾ ಸಿಕ್ಕಲಗಾರ, ಎಸಿಎಫ್‌ ಬಿ.ಪಿ.ಚವ್ಹಾಣ, ವಲಯ ಅರಣ್ಯಾಧಿಕಾರಿ ಡಿ.ಐ.ಬಿರಾದಾರ ಮತ್ತು ತಹಶೀಲ್ದಾರ್‌ ಜಿ.ಎಸ್‌.ಮಳಗಿ ಅವರ ಸಹಕಾರವನ್ನು ಇದೇ ವೇಳೆ ಸ್ಮರಿಸಲಾಯಿತು.

ಬಳಗದ ಅಧ್ಯಕ್ಷ ಅಶೋಕ ರೇವಡಿ, ಪದಾಧಿಕಾರಿಗಳಾದ ಎಲ್‌. ಎಂ.ಚಲವಾದಿ, ರಾಜಶೇಖರ ಕಲ್ಯಾಣಮಠ, ಮಹಾಬಲೇಶ್ವರ ಗಡೇದ, ನಾಗಭೂಷಣ ನಾವದಗಿ ವಕೀಲರು, ಜೇಸಿ ಸಂಸ್ಥೆ ಅಧ್ಯಕ್ಷ ರವಿ ಗೂಳಿ, ಬಿ.ಎಸ್‌.ಮೇಟಿ, ವರ್ತಕರ ಸಂಘದ ಅಧ್ಯಕ್ಷ ವಾಸುದೇವ ಶಾಸ್ತ್ರಿ, ಡಾ| ವೀರೇಶ ಇಟಗಿ, ಅಮರೇಶ ಗೂಳಿ, ಎಂ.ಎಸ್‌.ಬಾಗೇವಾಡಿ, ಸುರೇಶ ಕಲಾಲ, ರವಿ ತಡಸದ, ಬಿ.ಎಚ್‌.ಬಳಬಟ್ಟಿ, ಕಿರಣ ಕಡಿ, ಬಿಆರ್‌ಸಿ ಸಂಗಮೇಶ ನವಲಿ, ಅರಣ್ಯ ಇಲಾಖೆಯ ಯಲ್ಲಪ್ಪ ಹಿರೇಕುರುಬರ, ಮಲ್ಲಪ್ಪ ಇಂಗಳಗೇರಿ ಮುಂತಾದವರು ಇದ್ದರು.

Advertisement

ಪ್ರತಿ ಹಳ್ಳಿಯಲ್ಲಿ ಮುಫತ್‌ ಗೈರಾಣು ಪ್ರದೇಶ ಇದೆ. ಸರ್ಕಾರದ ವಿವಿಧ ಕೆಲಸಗಳಿಗೆ ಇದನ್ನು ಮೀಸಲಿಡಲಾಗಿದೆ. ಈ ಪ್ರದೇಶವನ್ನು ಮರಳಿ ವಶಕ್ಕೆ ಪಡೆದು ಅಲ್ಲಿ ಅರಣ್ಯ ಬೆಳೆಸುವ ಕೆಲಸ ನಡೆಯಬೇಕು. ತಹಸೀಲ್ದಾರ್‌, ಅರಣ್ಯಾಧಿ ಕಾರಿಗಳು ಜಂಟಿಯಾಗಿ ಈ ಅಭಿಯಾನ ಹಮ್ಮಿಕೊಂಡಲ್ಲಿ ಪರಿಸರ ಪ್ರೇಮಿಗಳು ಸಹಕಾರ ನೀಡುತ್ತಾರೆ.
ಅಶೋಕ ರೇವಡಿ,
ಅಧ್ಯಕ್ಷ, ಹಸಿರು ತೋರಣ ಗೆಳೆಯರ ಬಳಗ

ಈಗ ವಶಪಡಿಸಿಕೊಂಡಿರುವ ಪ್ರದೇಶದಲ್ಲಿ ಈಗಾಗಲೇ ತಗ್ಗು ತೆಗೆಯಲಾಗಿದ್ದು, ಮಳೆ ಪ್ರಾರಂಭಗೊಂಡ ಕೂಡಲೇ 3800 ಗಿಡ ನೆಟ್ಟು ನೆಡುತೋಪು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇದೊಂದು ಮಾದರಿ ಅರಣ್ಯ ಪ್ರದೇಶವಾಗಲಿದೆ.
ಸುಭಾಷಚಂದ್ರ ಬಿ.ಕೆ.,
ಉಪ ವಲಯ ಅರಣ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next