Advertisement

ಮುದ್ದೇಬಿಹಾಳ: ಶಿಕ್ಷಕರ ಮೇಲೆ ವಿದ್ಯಾರ್ಥಿನಿಯ ಪೋಷಕರಿಂದ ಗಂಭೀರ ಹಲ್ಲೆ : ಪ್ರಕರಣ ದಾಖಲು

09:53 PM Jul 06, 2022 | Team Udayavani |

ಮುದ್ದೇಬಿಹಾಳ: ಹೋಮ್ ವರ್ಕ್ ಮಾಡಿಕೊಂಡು ಬಾರದ 7ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಕೆನ್ನೆಗೆ ಸೌಮ್ಯವಾಗಿ ಒಂದೇಟು ಹಾಕಿ ಗದರಿದ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರಿಗೆ ಆಕೆಯ ತಂದೆಯೇ ತೀವ್ರ ಹಲ್ಲೆ ನಡೆಸಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ನೇಬಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ.

Advertisement

ಶಿಕ್ಷಕ ಭೀಮಸಿಂಗ್ ರಾಠೋಡ ಹಲ್ಲೆಗೊಳಗಾದವರಾಗಿದ್ದು ವಿದ್ಯಾರ್ಥಿನಿಯ ತಂದೆ ರವಿಕುಮಾರ ಲಮಾಣಿ ಹಲ್ಲೆ ನಡೆಸಿದ ವ್ಯಕ್ತಿಯಾಗಿದ್ದಾನೆ.

ರವಿಕುಮಾರನು ಭೀಮಸಿಂಗನ ಸೊಂಟದ ಕಿಬ್ಬೊಟ್ಟೆಯ ಕೆಳಭಾಗಕ್ಕೆ ಮೊಣಕಾಲಿನಿಂದ ಗುದ್ದಿದ್ದರಿಂದ ಅವರು ತೀವ್ರ ಅಸ್ವಸ್ಥರಾಗಿದ್ದರು. ನರಳುತ್ತಲೇ ಇಲ್ಲಿನ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದರು. ಈ ವೇಳೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷ ಬಿ.ಎಚ್.ಮುದ್ನೂರ ಮತ್ತಿತರರು ಆಸ್ಪತ್ರೆಗೆ ಆಗಮಿಸಿ ಶಿಕ್ಷಕರ ಆರೋಗ್ಯ ವಿಚಾರಿಸಿ ಘಟನೆಯ ಮಾಹಿತಿ ಪಡೆದುಕೊಂಡರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹಲ್ಲೆಗೊಳಗಾದ ಶಿಕ್ಷಕ ಭೀಮಸಿಂಗ ಅವರು ಹೋಮ್ ವರ್ಕ್ ಏಕೆ ಮಾಡಿಲ್ಲ ಎಂದು ವಿದ್ಯಾರ್ಥಿನಿಗೆ ಒಂದೇಟು ಮೆತ್ತಗೆ ಹೊಡೆದಿದ್ದೆ. ಆಕೆ ಇದನ್ನೇ ದೊಡ್ಡದು ಮಾಡಿ ಮನೆಗೆ ಹೋಗಿ ತನ್ನ ತಂದೆಯನ್ನು ಕರೆತಂದಳು. ಈ ವೇಳೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ನನ್ನ ಜೊತೆ ಆಕೆಯ ತಂದೆ ರವಿಕುಮಾರ ಜಗಳಕ್ಕೆ ಬಿದ್ದ. ನನ್ನನ್ನು ಬಲವಾಗಿ ಹಿಡಿದುಕೊಂಡು ಕಿಬ್ಬೊಟ್ಟೆಯ ಕೆಳಭಾಗಕ್ಕೆ ಮೊಣಕಾಲಿನಿಂದ ಗುದ್ದಿದ. ನನಗೆ ತೀವ್ರ ಅಸ್ವಸ್ಥತೆ ಕಾಡುತ್ತಿದೆ. ಇಂಥ ಘಟನೆಗೆ ಕಡಿವಾಣ ಹಾಕಲು ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಎಂಎಲ್‍ಸಿ (ಮೆಡಿಕೋ ಲೀಗಲ್ ಕೇಸ್) ಪ್ರಕರಣ ದಾಖಲಿಸಿದ್ದೇನೆ ಎಂದರು.

ಅಧ್ಯಕ್ಷ ಬಿ.ಎಚ್.ಮುದ್ನೂರ ಮಾತನಾಡಿ ಶಿಕ್ಷಕರು ಹೋಮ್ ವರ್ಕ್ ಮಾಡಿಕೊಂಡು ಬಾರದ ಮಕ್ಕಳಿಗೆ ಒಂದೇಟು ಹೊಡೆದು ಬುದ್ದಿ ಹೇಳುವ ಹಕ್ಕೂ ಇಲ್ಲವೇ ಎಂದು ಪ್ರಶ್ನಿಸಿ ಹಲ್ಲೆಯ ಘಟನೆಯನ್ನು ಬಲವಾಗಿ ಖಂಡಿಸಿದರು. ಹಲ್ಲೆ ನಡೆಸಿದ ವ್ಯಕ್ತಿಯನ್ನು ಆತ ಮುಂದೆ ಹೀಗೆ ಮಾಡದಂತೆ ಬುದ್ದಿವಾದ ಹೇಳಿ ಶಿಕ್ಷಿಸುವಂತೆ ಪೊಲೀಸರನ್ನು ಆಗ್ರಹಿಸುವುದಾಗಿ ಹೇಳಿದರು.
ಅಸ್ವಸ್ಥನಾಗಿದ್ದ ಶಿಕ್ಷಕಗೆ ವೈದ್ಯಾಧಿಕಾರಿ ಡಾ| ಪರಶುರಾಮ ವಡ್ಡರ ಚಿಕಿತ್ಸೆ ನೀಡಿದ್ದು ಅವರು ಚೇತರಿಸಿಕೊಂಡಿದ್ದಾರೆ. ಎಂಎಲ್‍ಸಿ ಪ್ರಕರಣ ಇದಾಗಿರುವುದರಿಂದ ಸ್ಥಳೀಯ ಪೊಲೀಸ್ ಠಾಣೆಯ ಕರ್ತವ್ಯದಲ್ಲಿದ್ದ ಮುಖ್ಯ ಮಹಿಳಾ ಪೇದೆಯೊಬ್ಬರು ಆಸ್ಪತ್ರೆಗೇ ಆಗಮಿಸಿ ಶಿಕ್ಷಕರಿಂದ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next