Advertisement

ಮುದ್ದೇಬಿಹಾಳ: ಗಾಳಿಗೆ ಮರ ಮುರಿದು ಬಿದ್ದು ಕಲಾವಿದ‌ರಾಗಿದ್ದ ಶಿಕ್ಷಕ ಮೃತ್ಯು

10:02 PM Apr 30, 2023 | Vishnudas Patil |

ಮುದ್ದೇಬಿಹಾಳ: ಮರ ಮೈಮೇಲೆ‌ ಮುರಿದು ಬಿದ್ದು ಕಲಾವಿದರೂ ಆಗಿದ್ದ ಶಿಕ್ಷಕ ಪ್ರಕಾಶ‌ ವೀರಭದ್ರಪ್ಪ ಛಲವಾದಿ (35) ದುರಂತ ಸಾವನ್ನಪ್ಪಿರುವ ಘಟನೆ‌ ಆಲಮಟ್ಟಿ ಮುಖ್ಯ ರಸ್ತೆಯ ಹುಲ್ಲೂರ ಗ್ರಾಮದ ಹಳ್ಳದ ಹತ್ತಿರ ರವಿವಾರ ಸಂಜೆ ನಡೆದಿದೆ.

Advertisement

ಬಾಗಲಕೋಟೆ ಜಮಖಂಡಿ ತಾಲೂಕು ಚಿಮ್ಮಡ ಗ್ರಾಮದವರಾಗಿದ್ದ ನಿಡಗುಂದಿಯಲ್ಲಿ ಮನೆ ಮಾಡಿ‌ ಕುಟುಂಬ ಸಮೇತ ವಾಸವಿದ್ದ ವೀರಭದ್ರಪ್ಪ ಅವರು ಮುದ್ದೇಬಿಹಾಳ ತಾಲೂಕು ಸಿದ್ದಾಪೂರ ಪಿಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದು ಪ್ರಭಾರಿ ಮುಖ್ಯಾಧ್ಯಾಪಕರಾಗಿಯೂ ಜವಾಬ್ಧಾರಿ ನಿರ್ವಹಿಸುತ್ತಿದ್ದರು.

ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ರವಿವಾರ ಬೆಳಗ್ಗೆ ಗ್ರಾಮದಲ್ಲಿ ನಡೆದ ನಮ್ಮ‌ ಮತ‌ ನಮ್ಮ ಹಕ್ಕು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಮುದ್ದೇಬಿಹಾಳದಲ್ಲಿ ನಡೆದ ಶಿಕ್ಷಕ ದಂಪತಿ ಬಿ.ವಿ.ಕೋರಿ ಮತ್ತು ಸರೋಜಾ‌ ಕಿತ್ತೂರ‌ ದಂಪತಿಯರ ಪುತ್ರಿಯ ಮದುವೆಯಲ್ಲಿ ಭಾಗವಹಿಸಿದ್ದರು. ಸಂಜೆ ಜೋರಾಗಿ ಗಾಳಿ ಬೀಸುತ್ತಿದ್ದರೂ ಲೆಕ್ಕಿಸದೆ ಬೈಕ್ ಮೇಲೆ ನಿಡಗುಂದಿಗೆ ಹೊರಟಾಗ ಜೋರಾದ ಗಾಳಿಗೆ ಬೇವಿನ‌ ಮರ ಮುರಿದು ಇವರ ಮೇಲೆ ಬಿದ್ದಿದೆ. ಅದರ ಕೆಳಗೆ ಸಿಕ್ಕ‌ ಇವರ ಪ್ರಾಣಪಕ್ಷಿ ಸ್ಥಳದಲ್ಲೇ ಹಾರಿಹೋಗಿದೆ.

ಜೋರಾದ ಗಾಳಿ ಮಳೆಯ ಕಾರಣ ಯಾರೂ ಈ ಘಟನೆ ಗಮನಿಸಿದ್ದಿಲ್ಲ. ಇವರ ದುರಂತ ಸಾವು ಇಡೀ ಶಿಕ್ಷಕ ವಲಯದಲ್ಲಿ ಅಪಾರ ಶೋಕದ ಮೂಡಿಸಿದೆ. ಕಲಾವಿದರೂ, ಗಾಯಕರು, ಸಾಹಿತಿ, ಕವಿ ಹೀಗೆ ಬಹುಮುಖ ವ್ಯಕ್ತಿತ್ವ ಹೊಂದಿದ್ದ ಇವರು ಹಲವು ಕಡೆಗಳಲ್ಲಿ ತಂಡದೊಂದಿಗೆ ವೇದಿಕೆ ಪ್ರದರ್ಶನವನ್ನೂ ನೀಡುತ್ತಿದ್ದರು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next