ಮುದ್ದೇಬಿಹಾಳ: ಅಡುಗೆಯಲ್ಲಿ ಹಲ್ಲಿ ಬಿದ್ದದ್ದು ತಿಳಿಯದೆ ಅದೇ ಆಹಾರ ಸೇವಿಸಿದ 30 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಘಟನೆ ತಾಲೂಕಿನ ರಕ್ಕಸಗಿ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ಹಾಸ್ಟೆಲ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮಧ್ಯಾಹ್ನ ಶಾಲೆಯಿಂದ ಬಂದ ಮೇಲೆ ಊಟ ಮಾಡಿದ್ದರು. ಸಂಜೆ ಹಲ್ಲಿ ಬಿದ್ದ ವಿಷಯ ಹರಡಿ ಹಲವರು ಆತಂಕಕ್ಕೊಳಗಾದರು. ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಹಾಸ್ಟೆಲ್‌ಗೆ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿತ್ತು. ಕೆಲವರನ್ನು ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಗೂ ತಂದು ದಾಖಲಿಸಲಾಗಿದೆ. ಸದ್ಯ ಎಲ್ಲರ ಆರೋಗ್ಯ ಸ್ಥಿತಿ ನಿಯಂತ್ರಣದಲ್ಲಿದೆ ಎಂದು ವೈದ್ಯಾಧಿಕಾರಿ ಡಾ| ಅನಿಲಕುಮಾರ ಶೇಗುಣಸಿ ತಿಳಿಸಿದ್ದಾರೆ.
ಹಾಸ್ಟೆಲ್ ಅಡುಗೆ ಮನೆಯಲ್ಲಿ ಸ್ವಚ್ಛತೆ ಇಲ್ಲದಿರುವುದು, ಅಡುಗೆಯವರು ಕಾಳಜಿ ವಹಿಸಿ ಗುಣಮಟ್ಟದ ಅಡುಗೆ ಮಾಡದಿರುವುದು ಈ ರೀತಿಯ ಸಮಸ್ಯೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸದ್ಯ ಯಾವುದೇ ವಿದ್ಯಾರ್ಥಿನಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ರಾತ್ರಿಯೇ ಹಾಸ್ಟೆಲ್‌ಗೆ ಸಮೀಪದ ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿ ತಂಡ ಧಾವಿಸಿದ್ದು ಅಸ್ವಸ್ಥ ವಿದ್ಯಾರ್ಥಿನಿಯರಿಗೆ ಹೆಚ್ಚುವರಿ ಚಿಕಿತ್ಸೆ ನೀಡತೊಡಗಿದ್ದಾರೆ. ಗ್ರಾಮಸ್ಥರು ಹಾಸ್ಟೆಲ್‌ಗೆ ಹೋಗಿ ವಾರ್ಡನ್, ಅಡುಗೆ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದು ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.