Advertisement

Muddebihal: ಜಟ್ಟಗಿಯಲ್ಲಿ ಮನೆಗೆ ಬೆಂಕಿ: ಅಪಾರ ಪ್ರಮಾಣದ ಧನ, ಕನಕ, ಧಾನ್ಯ ಭಸ್ಮ

11:11 PM Nov 01, 2023 | Team Udayavani |

ಮುದ್ದೇಬಿಹಾಳ: ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ಬಡ ಕುಟುಂಬದ ತಿಪ್ಪಣ್ಣ ಮಾದರ ಎನ್ನುವವರ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ ಅಪಾರ ಪ್ರಮಾಣದ ಧನ, ಕನಕ, ಧಾನ್ಯ ಮತ್ತು ದಿನಬಳಕೆ ಸಾಮಗ್ರಿಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ. ಬೆಂಕಿ ನಂದಿಸಲು ಹೋಗಿದ್ದ ಕುಟುಂಬದ ಕೆಲ ಸದಸ್ಯರಿಗೆ ಬೆಂಕಿಯ ಝಳ ತಾಕಿದ್ದು ಗಂಭೀರ ಗಾಯಗಳಾಗಿಲ್ಲ.

Advertisement

ಮುದ್ದೇಬಿಹಾಳದಿಂದ 10 ಕಿಮಿ ಅಂತರದಲ್ಲಿರುವ ಗ್ರಾಮಕ್ಕೆ ಅಗ್ನಿಶಾಮಕ ದಳದವರು ತೆರಳಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಅವರು ಬರುವಷ್ಟರೊಳಗೆ ಸಾಕಷ್ಟು ಹಾನಿ ಸಂಭವಿಸಿತ್ತು. ತಿಪ್ಪಣ್ಣ ಅವರ ಪುತ್ರ ಸಿದ್ದಣ್ಣನಿಗೆ ವರ್ಷದ ಹಿಂದೆ ಮದುವೆಯಾಗಿದ್ದು ಮದುವೆಯಲ್ಲಿ ಬಂದ ಸಾಮಗ್ರಿಗಳೂ ಸೇರಿ ಮನೆಯಲ್ಲಿದ್ದ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿವೆ. ಬದುಕಿಗೆ ಆಧಾರವಾಗಿದ್ದ ಬಹುತೇಕ ಸಾಮಗ್ರಿ ನಾಶವಾಗಿದ್ದು ಆ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಮನೆಯಲ್ಲಿ ಇಟ್ಟಿದ್ದ 1.20 ಲಕ್ಷ ನಗದು, 30 ಗ್ರಾಂ ಚಿನ್ನದ ಆಭರಣ, ಅಂದಾಜು 1 ಲಕ್ಷದ ಸಾಮಗ್ರಿಗಳು, 2 ಚೀಲ ಜೋಳ, 2 ಚೀಲ ಸಜ್ಜೆ, 1 ಚೀಲ ಸೇಂಗಾ ಬೆಂಕಿಗಾಹುತಿಯಾಗಿವೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ (ಗ್ರಾಮ ಆಡಳಿತಾಧಿಕಾರಿ), ಹೆಸ್ಕಾಂ ಪ್ರತಿನಿಧಿ, ಹುಲ್ಲೂರ ಗ್ರಾಪಂನ ಪಿಡಿಓ ಮತ್ತಿತರರು ಭೇಟಿ ನೀಡಿ ಹಾನಿಯ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಅಗ್ನಿಶಾಮಕ ಠಾಣೆಯವರೂ ಸಹಿತ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿಪ್ಪಣ್ಣನಿಗೆ ಒಂದು ಎಕರೆ ಜಮೀನು ಇದೆ. ಬೇರೆಯವರ ಎರಡು ಎಕರೆ ಜಮೀನನ್ನು ಲಾವಣಿಗೆ ಹಾಕಿಕೊಂಡಿದ್ದಾರೆ. ಬಡ ದಲಿತ ಕುಟುಂಬಕ್ಕೆ ಸೇರಿದ ಇವರಿಗೆ ಕೂಡಲೇ ಪರಿಹಾರ ಒದಗಿಸಿಕೊಡಬೇಕು ಎನ್ನುವ ಆಗ್ರಹ ಗ್ರಾಮಸ್ಥರಿಂದ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next