ಮುದ್ದೇಬಿಹಾಳ: ಪಟ್ಟಣದ ಎಪಿಎಂಸಿ ಪಕ್ಕದ ಮುರಾಳ ಅವರ ಕಟ್ಟಡದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ದೃಶ್ಯ ಮಾಧ್ಯಮದ ಯುವ ಪತ್ರಕರ್ತ ತಿಪ್ಪಣ್ಣ ಸಿದ್ದಪ್ಪ ಹೊಸಮನಿ (34) ಮತ್ತು ಆತನ ಪತ್ನಿ ಸುಜಾತಾ (30) ಅಕ್ಕಪಕ್ಕದ ಕೋಣೆಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ರಾತ್ರಿ 10-30 ಗಂಟೆಯ ಸುಮಾರು ಬೆಳಕಿಗೆ ಬಂದಿದೆ.
ತಿಪ್ಪಣ್ಣನು ಸುದ್ದಿ ವಾಹಿನಿಯೊಂದರಲ್ಲಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಕೊಣ್ಣೂರು ಗ್ರಾಮದ ತಿಪ್ಪಣ್ಣ ಕಳೆದ 4-5 ತಿಂಗಳ ಹಿಂದಷ್ಟೇ ಹಡಲಗೇರಿ ಹತ್ತಿರ ಇರುವ ಶ್ರೀ ಪದ್ಮಾವತಿ ದೇವಸ್ಥಾನದಲ್ಲಿ ತನ್ನದೇ ಸಮುದಾಯದ ಕೆಸಾಪೂರ ಗ್ರಾಮದ ಪ್ರೀತಿಸಿದ ಯುವತಿಯೊಂದಿಗೆ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ. ಗಂಡ, ಹೆಂಡತಿ ಇಬ್ಬರೂ ಇಲ್ಲೇ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.
ಘಟನೆ ಮಾಹಿತಿ ಪಡೆದು ಪಿಎಸೈ ಆರೀಫ ಮುಷಾಪುರಿ ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಗ ತಾನೆ ಮನೆಯಲ್ಲಿ ಅಡುಗೆ ಮಾಡಿದ್ದು ನೆಲದ ತುಂಬೆಲ್ಲ ಅನ್ನ ಚಲ್ಲಾಡಿರುವ ಕುರುಹು ಇದೆ. ಬಹುಶ: ಗಂಡ, ಹೆಂಡತಿ ಇಬ್ಬರೂ ಯಾವುದೋ ವಿಷಯಕ್ಕೆ ಜಗಳಾಡಿಕೊಂಡು ಹೀಗೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ. ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ಪ್ರಕರಣ ದಾಖಲಾಗಿದೆ.