Advertisement

ಮುದ್ದೇಬಿಹಾಳ: ದಾಖಲೆ ಇಲ್ಲದ 10 ಲಕ್ಷ ರೂ.ವಶಕ್ಕೆ

10:23 PM Mar 24, 2023 | Team Udayavani |

ಮುದ್ದೇಬಿಹಾಳ: ದಾಖಲೆ ಇಲ್ಲದೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಸಾಗಿಸುತ್ತಿದ್ದ 10 ಲಕ್ಷ ರೂ ನಗದವನ್ನು ಪೊಲೀಸರು ವಶಪಡಿಸಿಕೊಂಡು ಕೋರ್ಟ ವಶಕ್ಕೆ ಒಪ್ಪಿಸಿದ ಘಟನೆ ತಂಗಡಗಿ ಗ್ರಾಮದ ಹೊರವಲಯದಲ್ಲಿರುವ ಕೃಷ್ಣಾ ನದಿಯ ನೀಲಮ್ಮನ ಸೇತುವೆ ಹತ್ತಿರ ಹಾಕಲಾದ ಪೊಲೀಸ್ ಚಕ್ ಪೋಸ್ಟ್ ನಲ್ಲಿ ಶುಕ್ರವಾರ ನಡೆದಿದೆ.

Advertisement

ಗಜೇಂದ್ರಗಡ ಸಾರಿಗೆ ಘಟಕಕ್ಕೆ ಸೇರಿದ ಗಜೇಂದ್ರಗಡ- ಮುದ್ದೇಬಿಹಾಳ ಬಸ್ಸು ಮುದ್ದೇಬಿಹಾಳದಿಂದ ತಂಗಡಗಿ, ಧನ್ನೂರ, ಹುನಗುಂದ ಮಾರ್ಗವಾಗಿ ಗಜೇಂದ್ರಗಡಕ್ಕೆ ಹೋಗುತ್ತಿತ್ತು. ಚಕ್ ಪೋಸ್ಟ್ ನಲ್ಲಿದ್ದ ಪೊಲೀಸರು ಎಲ್ಲ ವಾಹನಗಳನ್ನು ತಪಾಸಣೆ ನಡೆಸಿದಂತೆ ಬಸ್ಸಿನಲ್ಲಿರುವ ಪ್ರಯಾಣಿಕರನ್ನೂ ಸಹಿತ ತಪಾಸಣೆ ನಡೆಸಿದ್ದಾರೆ. ಆಗ ಸ್ಟಾರ್ ಗುಟ್ಕಾ ಚೀಲದ ಬಟ್ಟೆಯ ಬ್ಯಾಗ್ನಲ್ಲಿ 500, 200 ಮತ್ತು 50 ಮುಖಬೆಲೆಯ 10 ಲಕ್ಷ ನಗದು ಇದ್ದದ್ದು ಪತ್ತೆ ಆಗಿದೆ.

ಈ ವೇಳೆ ಹಣ ಸಾಗಿಸುತ್ತಿದ್ದ ವ್ಯಕ್ತಿ ಮುದ್ದೇಬಿಹಾಳದ  ಸಹಕಾರಿ ಬ್ಯಾಂಕ್ ಮ್ಯಾನೇಜರ್ ಬಸಪ್ಪ ನಿಂಗಪ್ಪ ಹಡಗಲಿ ಅವರನ್ನು ವಿಚಾರಣೆ ನಡೆಸಿದಾಗ ಬ್ಯಾಂಕ್ನಿಂದ ಬ್ಯಾಂಕ್ ಗೆ ವರ್ಗಾವಣೆ ಮಾಡಲು ಒಯ್ಯುತ್ತಿರುವುದಾಗಿ ತಿಳಿಸಿದ್ದಾರೆ. ಹಣ ಸಾಗಿಸುತ್ತಿದ್ದ ವ್ಯಕ್ತಿ ಮುದ್ದೇಬಿಹಾಳದಿಂದ ಧನ್ನೂರವರೆಗೆ ಬಸ್ ಟಿಕೆಟ್ ತೆಗೆದುಕೊಂಡಿದ್ದರು. ಆದರೆ ಹಣಕ್ಕೆ ಇವರ ಹತ್ತಿರ ಯಾವುದೇ ದಾಖಲೆ ಇರಲಿಲ್ಲ. ಇದರಿಂದ ಸಂಶಯಗೊಂಡ ಪೊಲೀಸ್ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಹಣವನ್ನು ವಶಪಡಿಸಿಕೊಂಡು ಎಫ್ಐಆರ್ ಹಾಕಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ದಾಖಲೆ ಇಲ್ಲದೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಮ್ಯಾನೇಜರ್ ಹಡಗಲಿ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸೈ ಆರೀಫ ಮುಷಾಪುರಿ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಘಟನೆಯಿಂದ ಜಾಗೃತರಾಗಿರುವ ಪೊಲೀಸರು ತಾಲೂಕಿನ ಆಯಕಟ್ಟಿನ ಸ್ಥಳಗಳಲ್ಲಿ ಹಾಕಿರುವ ಚಕ್ಪೋಸ್ಟ್ಗಳಲ್ಲಿ ಜಾಗೃತರಾಗಿ ಪ್ರತಿಯೊಂದು ವಾಹನ, ಬಸ್ ಪರಿಶೀಲಿಸತೊಡಗಿದ್ದಾರೆ. ತಾಲೂಕಿನಲ್ಲಿ ಈ ರೀತಿ ನಗದು ಸಿಕ್ಕ ಮೊದಲ ಪ್ರಕರಣ ಇದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next