ಮುದ್ದೇಬಿಹಾಳ: ಪಟ್ಟಣದ ಪ್ರಮುಖ ರಸ್ತೆಗಳ ಫುಟಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ರವಿವಾರ ಎರಡನೇ ದಿನವೂ ಮುಂದುವರಿದಿದೆ. ಬಸ್ ನಿಲ್ದಾಣ ಮುಂಭಾಗ, ಬಸವೇಶ್ವರ ವೃತ್ತ ಸೇರಿ ಪ್ರಮುಖ ರಸ್ತೆಗಳ ಫುಟಪಾತ್ ಅತಿಕ್ರಮಣ ತೆರವಿನಿಂದಾಗಿ ರಸ್ತೆಗಳು ಸುಂದರವಾಗಿ ಕಾಣುತ್ತಿದ್ದು, ಇದೀಗ ಸಂಚಾರ ಸುಗಮವಾಗಿದೆ.
ಮುಖ್ಯರಸ್ತೆ ಪಕ್ಕದಲ್ಲಿ ಸರ್ಕಾರಿ ಶಾಲಾ-ಕಾಲೇಜು ಇವೆ. ಇಲ್ಲಿಗೆ ಗ್ರಾಮೀಣ ಭಾಗದಿಂದ ಬಸ್ ನಿಲ್ದಾಣ ಮೂಲಕ ಬರುವ ವಿದ್ಯಾರ್ಥಿಗಳು ಸಂಚಾರಕ್ಕೆ ಫುಟ್‌ಪಾತ್ ಬಳಸುತ್ತಿದ್ದು, ತೆರವು ಕಾರ್ಯಾಚರಣೆಯಿಂದ ನಿರ್ಭೀತವಾಗಿ ಸಂಚರಿಸುವಂತಾಗಿದ್ದು, ಜನಸಾಮಾನ್ಯರು, ವಿದ್ಯಾರ್ಥಿಗಳು ಪುರಸಭೆ ಮತ್ತು ಪೊಲೀಸರು ಲಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೂ-ಹಣ್ಣಿನ ಮಾರಾಟಕ್ಕೆ ವ್ಯವಸ್ಥೆ: ಬಸ್ ನಿಲ್ದಾಣ ಎದುರು, ಅಕ್ಕಪಕ್ಕ ಫುಟ್‌ಪಾತ್ ಅತಿಕ್ರಮಿಸಿ ಹೂ, ಹಣ್ಣಿನ ವ್ಯಾಪಾರ ಮಾಡುತ್ತಿದ್ದವರನ್ನೂ ತೆರವುಗೊಳಿಸಲಾಗಿದೆ. ಇವರಿಗೆ ವ್ಯಾಪಾರ ಮಾಡಲು ಹಳೇ ತಹಶೀಲ್ದಾರ್ ಕಚೇರಿ ಬಳಿ ಇರುವ ಸೈನಿಕ ಮೈದಾನ ಒದಗಿಸಲಾಗಿದೆ.
ಆದರೆ ಅಲ್ಲಿ ಕೈಪಂಪಿನ ನೀರು ಮಡುಗಟ್ಟಿ ನಿಂತು ಕೊಳಚೆ ಸೃಷ್ಟಿಯಾಗಿದೆ. ಹೀಗಾಗಿ ಅದೆಲ್ಲ ಸ್ವಚ್ಛಗೊಳಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲು ಪುರಸಭೆ ಮುಖ್ಯಾಧಿಕಾರಿ ಎಂ.ಬಿ. ಮಾಡಗಿ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ರವಿವಾರ ಜೆಸಿಬಿ ಬಳಸಿ ಸ್ವಚ್ಛತೆ ಹಾಗೂ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ಆದರೆ ಹೂ-ಹಣ್ಣಿನ ವ್ಯಾಪಾರಸ್ಥರು ಬಸ್ ನಿಲ್ದಾಣದಿಂದ ದೂರದಲ್ಲಿರುವ ಸೈನಿಕ ಮೈದಾನದಲ್ಲಿ ವ್ಯಾಪಾರವಾಗುವುದಿಲ್ಲ. ಹೀಗಾಗಿ ಬಸ್ ನಿಲ್ದಾಣದ ಬಳಿಯೇ ಎಲ್ಲಿಯಾದರೂ ಒಂದೆಡೆ ಅವಕಾಶ ಕಲ್ಪಿಸಿಕೊಡಬೇಕು. ಫುಟ್‌ಪಾತ್ ಅತಿಕ್ರಮಿಸದೇ ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ಮಾಡುವ ಬೇಡಿಕೆ ಇಟ್ಟಿದ್ದಾರೆ. ಆದರೆ ಇದಕ್ಕೆ ಪುರಸಭೆ-ಪೊಲೀಸ್ ಅಧಿಕಾರಿಗಳು ಸ್ಪಂದಿಸಿಲ್ಲ.
ತೆರವುಗೊಳಿಸಿರುವ ತರಕಾರಿ ವ್ಯಾಪಾರಸ್ಥರನ್ನು ಇಂದಿರಾ ವೃತ್ತದ ಬಳಿ ಇರುವ ಹೊಸ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಿಕೊಡಲು ಪುರಸಭೆ ಕ್ರಮ ಕೈಕೊಂಡಿದೆ. ಹೀಗಾಗಿ ಸೋಮವಾರದಿಂದ ಹೊಸ ಮಾರುಕಟ್ಟೆಯಲ್ಲೇ ತರಕಾರಿ ವ್ಯಾಪಾರ ನಡೆಸುವಂತೆ ಸೂಚನೆ ನೀಡಲಾಗಿದೆ.