Advertisement

ಹಸರೀಕರಣಕ್ಕೆ ಚಾಲನೆ: ಆಜೂರ

12:41 PM Jun 28, 2019 | Naveen |

ಮುದ್ದೇಬಿಹಾಳ: ತಾಲೂಕಿನ ಹಲವೆಡೆ ಸಾಮಾಜಿಕ ವಲಯ ಅರಣ್ಯ ಇಲಾಖೆ ಗಿಡಗಳನ್ನು ನೆಡುವ ಮೂಲಕ ಹಸಿರು ಪಸರಿಸುವ ಕೆಲಸ ಮಾಡುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಸಂತೋಷಕುಮಾರ ಅಜೂರ ತಿಳಿಸಿದರು.

Advertisement

ಬುಧವಾರ ಹಿರೇಮುರಾಳ ಗ್ರಾಪಂ ವ್ಯಾಪ್ತಿಯ ನೆರಬೆಂಚಿ ಗ್ರಾಮದ ಬಳಿ ನಡೆದಿರುವ ನೆಡುತೋಪು ಕಾಮಗಾರಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈಗಾಗಲೇ ಬಿದರಕುಂದಿ ಬಳಿ ಬೆಳೆಸಿರುವ ನೆಡುತೋಪು ನಿರಂತರ ಪೋಷಣೆಯಿಂದ ಸಾಕಷ್ಟು ಬೆಳವಣಿಗೆ ಹೊಂದುತ್ತಿದೆ. ಅದೇ ಮಾದರಿಲ್ಲಿ ನೆರಬೆಂಚಿ ಗ್ರಾಮದ ಬಳಿಯೂ ಅಂದಾಜು 20 ಎಕರೆ ಸರ್ಕಾರಿ ಜಮೀನಿನಲ್ಲಿ ಹಿರೇಮುರಾಳ ಗ್ರಾಪಂನ ಜಲಾಮೃತ ಯೋಜನೆ ಅಡಿ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರನ್ನು ಬಳಸಿಕೊಂಡು 1,800 ಸಸಿ ನೆಡಲು ಚಾಲನೆ ನೀಡಲಾಗಿದೆ. ಸದ್ಯ 1,200 ಗಿಡಗಳನ್ನು ನೆಡುವ ಕಾರ್ಯ ಪೂರ್ಣಗೊಂಡಿದ್ದು ಇನ್ನೊಂದು ವಾರದೊಳಗೆ ಉಳಿದ 600 ಗಿಡಗಳನ್ನೂ ನೆಡುವ ಮೂಲಕ ನೆರಬೆಂಚಿ ಬ್ಲಾಕ್‌ನಲ್ಲಿ ಹಸಿರಿನಿಂದ ಕಂಗೊಳಿಸುವ ನೆಡುತೋಪು ನಿರ್ಮಿಸುವ ಗುರಿ ಈಡೇರಿಸಲಾಗುತ್ತದೆ ಎಂದು ತಿಳಿಸಿದರು.

ನೆರಬೆಂಚಿ ಗ್ರಾಮದ ಬಳಿ ಕಂದಾಯ ಇಲಾಖೆ ವ್ಯಾಪ್ತಿಯ 28 ಎಕರೆ ಸರ್ಕಾರಿ ಜಮೀನು ಇತ್ತು. ಕಲ್ಲು, ಗುಡ್ಡೆಗಳಿಂದ ಕೂಡಿದ್ದ ಈ ಸ್ಥಳವನ್ನು ಇಲಾಖೆಗೆ ಪಡೆದುಕೊಂಡು ಅದನ್ನು ಸ್ವಚ್ಛಗೊಳಿಸಿ ಸಮತಟ್ಟು ಮಾಡಲಾಗಿದೆ. ಒಟ್ಟು ಜಾಗದಲ್ಲಿ ಸಾರ್ವಜನಿಕ ಉದ್ದೇಶಕ್ಕೆ 8 ಎಕರೆ ಬಿಟ್ಟು ಉಳಿದ 20 ಎಕರೆಯಲ್ಲಿ ನೆಡುತೋಪು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಇದಕ್ಕಾಗಿ ಒಟ್ಟು 3,000 ಮಾನವ ದಿನಗಳನ್ನು ಸೃಷ್ಟಿಸಲಾಗಿದ್ದು ಅಂದಾಜು 4.50 ಲಕ್ಷ ರೂ. ಅನುದಾನಕ್ಕೆ ಬಳಕೆ ಆಗುತ್ತದೆ.

ಸದ್ಯ ಜಮೀನು ಪಕ್ಕದಲ್ಲೇ ಇರುವ ಹಳ್ಳದಲ್ಲಿ ನಿಂತ ನೀರನ್ನು ಬಾಡಿಗೆ ಟ್ಯಾಂಕರ್‌ ಮೂಲಕ ಗಿಡಗಳಿಗೆ ನೀರುಣಿಸಲು ಬಳಸಿಕೊಳ್ಳಲಾಗುತ್ತಿದೆ. ಮಳೆ ಬಂದಲ್ಲಿ ಈ ಗಿಡಗಳು ಫಲವತ್ತಾಗಿ ಬೆಳೆದು ಹಸಿರಿನಿಂದ ಕಂಗೊಳಿಸುತ್ತವೆ. ಬೇವು, ಬಸರಿ, ಹುಣಸೆ, ಅರಳೆ, ಸಂಕೇಶ್ವರ, ತಪಸಿ ಮತ್ತಿತರ ಜಾತಿಯ ಗಿಡಗಳನ್ನು ಇಲ್ಲಿ ನೆಡಲಾಗಿದೆ ಎಂದು ಮಾಹಿತಿ ನೀಡಿದರು. ಆಲೂರು ಪಿಡಿಒ ಅಯ್ಯಪ್ಪ ಮಲಗಲದಿನ್ನಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಚ್.ಎಲ್. ಕರಡ್ಡಿ, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಮುದ್ದೇಬಿಹಾಳ ತಾಲೂಕು ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಡಿ.ಬಿ. ವಡವಡಗಿ, ಸಮಾಜ ಸೇವಕ ಬಸವರಾಜ ನಂದಿಕೇಶ್ವರಮಠ, ಹಿರೇಮುರಾಳದ ಅಯ್ಯಪ್ಪ ತಂಗಡಗಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next