ಮುದ್ದೇಬಿಹಾಳ: ಇಣಚಗಲ್ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಸೂಚನೆ ಮೇರೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಆರೋಗ್ಯ ತಪಾಸಣಾ ತಂಡದ ಮುಖ್ಯಸ್ಥ ಡಾ.ಪ್ರವೀಣ ಸುಣಕಲ್ಲ, ಡಾ.ಭಾಗ್ಯಶ್ರೀ ಬಿರಾದಾರ ಅವರು ಶಾಲೆಯಲ್ಲೇ ಬೀಡುಬಿಟ್ಟು ಪ್ರತಿ ವಿದ್ಯಾರ್ಥಿನಿಯನ್ನು ವೈಯುಕ್ತಿಕವಾಗಿ ತಪಾಸಣೆ ನಡೆಸಿ ಸೂಕ್ತ ಔಷಧೋಪಚಾರ ಮಾಡುವುದನ್ನು ಮುಂದುವರಿಸಿದ್ದಾರೆ. ಶಾಲೆಯಲ್ಲಿ ಕಲಿಯುತ್ತಿರುವ 6-9ನೇ ತರಗತಿಯ ವಿದ್ಯಾರ್ಥಿನಿಯರಲ್ಲಿ ಮಾತ್ರ ಈ ಸಮಸ್ಯೆ ಕಂಡು ಬರತೊಡಗಿದೆ. ವಿದ್ಯಾರ್ಥಿಗಳಲ್ಲಿ ಯಾರೊಬ್ಬರಿಗೂ ಈ ಸಮಸ್ಯೆ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ಗುರುವಾರ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ತಕ್ಷಣವೇ ಜಾಗೃತರಾದ ತಾಲೂಕು ಆರೋಗ್ಯಾಧಿಕಾರಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಧಾವಿಸಿ ಸಮಸ್ಯೆಗೆ ಕಾರಣ ಏನು ಅನ್ನೋದನ್ನು ಪತ್ತೆಹಚ್ಚುವಲ್ಲಿ ನಿರತರಾದರು.
ಆರೋಗ್ಯ ಇಲಾಖೆಯ ವೈದ್ಯರು ಆರೋಗ್ಯ ಸಿಬ್ಬಂದಿ ಸಮೇತ ಶಾಲೆಗೆ ಆಗಮಿಸಿ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ನಡೆಸಿದರು. ತಪಾಸಣೆ ವೇಳೆ ಮೂವರು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡದ್ದರಿಂದ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ವಿಷಯ ತಿಳಿದ ಪಾಲಕರು ಶಾಲೆಗೆ ಆಗಮಿಸುತ್ತಿದ್ದು ಮಕ್ಕಳ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.
ಆರೋಗ್ಯಾಧಿಕಾರಿಗಳು ಶಾಲೆಯ ಅಡುಗೆ ಕೋಣೆ ಪರಿಶೀಲಿಸಿ ಅಲ್ಲಿನ ಅವ್ಯವಸ್ಥೆಗೆ ಸಿಡಿಮಿಡಿಗೊಂಡು ಸುಧಾರಿಸಿಕೊಳ್ಳುವಂತೆ ತಿಳಿಸಿ ಮಕ್ಕಳಿಗೆ ಹಸಿರು, ಖನಿಜಾಂಶ, ವಿಟಿಮಿನ್‌ಯುಕ್ತ ಆಹಾರ ಕೊಡುವಂತೆ ಅಡುಗೆ ಸಿಬ್ಬಂದಿಗೆ ಸಲಹೆ ನೀಡಿದರು. “ಉದಯವಾಣಿ’ ಯೊಂದಿಗೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ವಿದ್ಯಾರ್ಥಿನಿಯರಲ್ಲಿ ಮಾತ್ರ ಈ ಸಮಸ್ಯೆ ಹೆಚ್ಚಾಗಿದೆ. ಅವರ ರಕ್ತ ತಪಾಸಣೆಯಲ್ಲಿ ಹಿಮೋಗ್ಲೋಬಿನ್ ಅಂಶದ ಕೊರತೆ ಕಂಡುಬಂದಿದೆ. ಆಯಾಸ, ಕೈ ಸೆಟೆಯುವುದು, ಉಸಿರಾಟದ ತೊಂದರೆ ಇವರಲ್ಲಿ ಹೆಚ್ಚಾಗಿದೆ. ಸತ್ವಯುತ ಆಹಾರದ ಅವಶ್ಯಕತೆ ಇರುವುದರಿಂದ ಶಾಲೆಯವರು ಆಹಾರ ಪದ್ಧತಿ ಮಾರ್ಪಡಿಸಿಕೊಳ್ಳುವುದು ಒಳಿತು. ಡಾ.ಪ್ರವೀಣ ಸುಣಕಲ್, ಡಾ.ಭಾಗ್ಯಶ್ರೀ ಬಿರಾದಾರ ಅವರ ತಂಡ, ಹಿರಿಯ ಆರೋಗ್ಯ ಸಹಾಯಕ ಎಂ.ಎಸ್. ಮನಹಳ್ಳಿ ಮಕ್ಕಳ ಆರೋಗ್ಯದ ಕಡೆ ಗಮನ ವಹಿಸಿದ್ದಾರೆ.
ಅಧಿಕಾರಿಗಳ ಭೇಟಿ: ಮಕ್ಕಳು ಅಸ್ವಸ್ಥರಾಗುತ್ತಿರುವ ವಿಷಯ ತಿಳಿದ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುರೇಶ ಕೋಕರೆ ಶಾಲೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಮಕ್ಕಳೊಂದಿಗೆ ಸಂವಹನ ನಡೆಸಿ ಅವರ ಸಮಸ್ಯೆ ಆಲಿಸಿದರು. ಶಾಲೆಯಲ್ಲಿ ಅವ್ಯವಸ್ಥೆ ಇರುವುದನ್ನು ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಉದಯವಾಣಿಯೊಂದಿಗೆ ಮಾತನಾಡಿದ ಅವರು, ಇಲ್ಲಿರುವ ವಾರ್ಡನ್‌ಗೆ ಇತರೆ ಮೂರು ಕಡೆ ಬೇರೆ ಬೇರೆ ಚಾರ್ಜ್ ಇವೆ. ಹೀಗಾಗಿ ಇಲ್ಲಿನ ಮಕ್ಕಳಿಗೆ ವೈಯುಕ್ತಿಕ ಕಾಳಜಿ ವಹಿಸುವುದು ಸಾಧ್ಯವಾಗುತ್ತಿಲ್ಲ. ಕೂಡಲೇ ಅವರನ್ನು ಬದಲಾಯಿಸಿ ಈ ಶಾಲೆಗೆ ಬೇರೊಬ್ಬರನ್ನು ನಿಯೋಜಿಸಲು ಕ್ರಮ ಕೈಕೊಳ್ಳಲಾಗುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಡಿ. ಗಾಂಜಿ ಅವರು ಸಹ ಶಾಲೆಗೆ ಭೇಟಿ ನೀಡಿ ಮಕ್ಕಳು ಆರೋಗ್ಯ ವಿಚಾರಿಸಿದರು. ಬೇಜವಾಬ್ದಾರಿ ಪ್ರದರ್ಶಿಸಿದ ಪ್ರಾಂಶುಪಾಲ, ಶಿಕ್ಷಕರ ಮೇಲೆ ಹರಿಹಾಯ್ದರು. ಮಕ್ಕಳನ್ನು ವೈಯುಕ್ತಿಕವಾಗಿ ಮಾತನಾಡಿಸಿ ಅವರ ಸಮಸ್ಯೆ ಕೇಳಿ ತಿಳಿದುಕೊಂಡು ಪರಿಹಾರಕ್ಕೆ ಸೂಚಿಸಿದರು.
ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಕೂಡ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ.