Advertisement

Mudbidri: ಪುತ್ತಿಗೆ-ಮುರ್ಕೊತ್‌ ಪಲ್ಕೆ ರಸ್ತೆ ದುರವಸ್ಥೆ

01:22 PM Dec 13, 2024 | Team Udayavani |

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುಡ್ಡೆಯಂಗಡಿಯಿಂದ ಮುರ್ಕೊತ್‌ ಪಲ್ಕೆಯಾಗಿ ಕೆಸರ್‌ಗದ್ದೆಯತ್ತ ಸಾಗುವ ರಸ್ತೆ ತೀರಾ ನಾದುರಸ್ತಿಯಲ್ಲಿದೆ.

Advertisement

ಗುಡ್ಡೆಯಂಗಡಿಯಿಂದ ಆರಂಭವಾಗಿ ಸುಮಾರು 1.2 ಕಿ.ಮೀ. ಉದ್ದದ ರಸ್ತೆ ಎಷ್ಟು ದುರವಸ್ಥೆಗೀಡಾಗಿದೆ ಎಂದರೆ ಆಟೋರಿಕ್ಷಾದವರೂ ಈ ಹಾದಿಯಾಗಿ ಬರಲು ಹಿಂದೇಟು ಹಾಕುವ ಸ್ಥಿತಿಯಲ್ಲಿದೆ.

ಪೇಟೆಗೆ ಬರಲು ಬಲು ಕಷ್ಟ
ರಸ್ತೆಯ ನಡು ನಡುವೆ ಹೊಂಡಗಳು ವಾಹನ ಚಾಲಕರನ್ನು ಕಂಗೆಡಿಸುತ್ತಿವೆ. ರಸ್ತೆಯ ಬದಿಗಳಲ್ಲಿ ಚರಂಡಿಯೇ ಇಲ್ಲ. ಎಲ್ಲ ಸಮತಟ್ಟಾಗಿದೆ. ಹೀಗಾಗಿ ಪುಟ್ಟ ಮಳೆಗೂ ರಸ್ತೆ ಕರಗಿ ಹೋಗುವುದು ಸಾಮಾನ್ಯವಾಗಿದೆ. ಈ ಭಾಗದಲ್ಲಿ ಕೃಷಿಕರೇ ಹೆಚ್ಚಾಗಿದ್ದು ಅವರು ಪೇಟೆಗೆ ಬರಲು, ಕೃಷಿ ಉತ್ಪನ್ನಗಳನ್ನು ಸಾಗಿಸಲು ಈ ರಸ್ತೆ ತೀರಾ ಅಗತ್ಯವಾಗಿದೆ. ನೀರಿನ ಟ್ಯಾಂಕಿಯ ಸಮೀಪ ಇರುವ ತಿರುವು ತೀರಾ ಕೊಚ್ಚಿ ಹೋಗಿದೆ. ಇಲ್ಲಿ ರಾತ್ರಿ ಮಾತ್ರವಲ್ಲ ಹಗಲಲ್ಲೂ ವಾಹನದಲ್ಲಿ ಸಾಗುವುದು ತೀರಾ ಅಪಾಯಕಾರಿ. ನಡೆದುಕೊಂಡು ಹೋಗಲೂ ಗಮನವಿಟ್ಟು ಹೆಜ್ಜೆ ಹಾಕಬೇಕಾದ ಸ್ಥಿತಿ ಇದೆ.

ಇಲ್ಲಿರುವ ಟ್ಯಾಂಕಿಗೆ ಪೈಪ್‌ಲೈನ್‌ ಜೋಡಿಸುವ ಕಾರ್ಯ ನಡೆದಾಗ ಈ ರಸ್ತೆಯನ್ನು ಕಡಿದು ದಾರಿ ಮಾಡಬೇಕಾಗಿತ್ತು. ಆ ಕಾಮಗಾರಿ ನಡೆದ ಬಳಿಕ ಮಣ್ಣುಹಾಕಿ ಸಮತಟ್ಟು ಮಾಡಲಾಗಿತ್ತಾದರೂ ಹಾಳಾದ ರಸ್ತೆಯನ್ನು ಸಂಬಂಧಪಟ್ಟವರು ಮತ್ತೆ ಸುಸ್ಥಿತಿಗೆ ತರಲುಪ್ರಯತ್ನಿಸಲೇ ಇಲ್ಲ ಎಂದು ಸ್ಥಳೀಯರು ಖೇದ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿಗೆ ಸಾರ್ವಜನಿಕ ಸಾರಿಗೆಗಾಗಿ ಬಸ್‌ಗಳಿಲ್ಲ, ಆದರೆ ಈ ಮಾರ್ಗವಾಗಿ ಸುಮಾರು ಮೂಡುಬಿದಿರೆ, ಪಾಲಡ್ಕ ಪರಿಸರದ 6 ಶಾಲೆಗಳ ಬಸ್‌ಗಳು ಓಡಾಡುತ್ತಿದ್ದು ಬಹಳ ತ್ರಾಸದಿಂದ ವಾಹನ ಚಲಾಯಿಸಬೇಕಾಗಿದೆ. ಬಹಳ ಮಹತ್ವದ ವಿಷಯವೆಂದರೆ, ಕಾರ್ಕಳದಿಂದ ಕೆಸರ್‌ಗದ್ದೆಯಾಗಿ ಗುಡ್ಡೆಯಂಗಡಿಗೆ ಬಂದು ಕೊಡ್ಯಡ್ಕ ಕ್ಷೇತ್ರ ತಲುಪಲು ಇದು ಹತ್ತಿರದ ಹಾದಿಯಾಗಿದೆ. ಆ ನಿಟ್ಟಿನಲ್ಲೂ ಈ ರಸ್ತೆಯನ್ನು ದುರಸ್ತಿ ಮಾಡುವುದು ಇಲ್ಲವೇ ಪೂರ್ಣ ಕಾಂಕ್ರೀಟ್‌ ಹೊದೆಸುವುದು ಅಗತ್ಯವಾಗಿದೆ.

Advertisement

ಸಮಸ್ಯೆಯ ಬಗ್ಗೆ ತಿಳಿದಿದ್ದು, ಆದಷ್ಟು ಶೀಘ್ರವಾಗಿ ಪರಿಹಾರ ಕ್ರಮ ಜರಗಿಸಲಾಗುವುದು.
-ರಾಧಾ, ಅಧ್ಯಕ್ಷರು, ಪುತ್ತಿಗೆ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next