ಮುಂಡರಗಿ: ತಾಲೂಕಿನ ಶಿವಾಜಿನಗರ ಗ್ರಾಪಂ 2018-2019ನೇ ಸಾಲಿನ ಮಹಾತ್ಮಾ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ. ಗ್ರಾಮವನ್ನು ಸುವ್ಯವಸ್ಥೆಯಾಗಿಡಲು ಆಡಳಿತ ವರ್ಗ ಮತ್ತು ಗ್ರಾಪಂ ಸದಸ್ಯರ ಪರಿಶ್ರಮದ ಫಲವಾಗಿ ತ್ಯಾಜ್ಯ ವಿಲೇವಾರಿ ಸುವ್ಯವಸ್ಥೆತೆಯಿಂದ ವಿಲೇವಾರಿ ಮಾಡಲು ಕಳೆದ 5 ವರ್ಷಗಳಿಂದಲೂ ಪಂಚತಂತ್ರ ತಂತ್ರಾಂಶದಲ್ಲಿ ಅಫ್ಲೋಡ್ ಮಾಡುವುದರ ಮೂಲಕ ಕಸತ್ಯಾಜ್ಯದ ನಿರ್ವಹಣೆಯಲ್ಲಿ ಪಾರದರ್ಶಕವಾದ ಕಾರ್ಯ ಮಾಡಿ, ಗ್ರಾಮದಲ್ಲಿ ಗ್ರಾಮಸ್ಥರಿಗೆ ಸ್ವಚ್ಛವಾದ ಮತ್ತು ಉತ್ತಮ ವಾತಾವರಣ ನಿರ್ಮಾಣ ಮಾಡುವಲ್ಲಿ ಆಡಳಿತ ಮಂಡಳಿ ಸಫಲವಾಗಿರುವುದು ಕಾಣಬಹುದಾಗಿದೆ.
ಬಸವ ವಸತಿ ಯೋಜನೆ, ಇಂದಿರಾ ಗಾಂಧಿ ಅವಾಸ್, ಅಂಬೇಡ್ಕರ್ ಗ್ರಾಮೀಣ ನಿವಾಸ್ ಯೋಜನೆಗಳಲ್ಲಿ ಮನೆಗಳ ನಿರ್ಮಾಣ ಅಲ್ಲದೆ ಗ್ರಾಮ ಆರ್ಥಿಕವಾಗಿ ಬಲಹೀನರಾದ ಬಡ ಕುಟುಂಬಗಳು ಒಂದು ಉತ್ತಮ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದಾಗಿ 536 ಮನೆಗಳಲ್ಲಿ ಈಗಾಗಲೇ 350ಕ್ಕಿಂತಲೂ ಹೆಚ್ಚು ಮನೆಗಳ ನಿರ್ಮಾಣವಾಗಿದ್ದು, ಉಳಿದ ಮನೆಗಳ ನಿರ್ಮಾಣ ಕಾರ್ಯವು ಜಾರಿಯಲ್ಲಿದೆ.
ಸರಕಾರದ ಹಲವು ಯೋಜನೆಗಳ ಜಾರಿಗೆ ಸಹಕಾರಿಯಾಗಿದೆ. ಶಿವಾಜಿನಗರ ಗ್ರಾಪಂ ಸೇರಿದಂತೆ ಇದರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಶಿಂಗಟರಾಯನಕೇರಿ, ಅತ್ತಿಕಟ್ಟಿ, ದಿಂಡೂರ ಗ್ರಾಮಗಳ ಅಭಿವೃದ್ಧಿಗಾಗಿ ಸಿಸಿ ರಸ್ತೆಗಳ ನಿರ್ಮಾಣ, ನಾಲ್ಕು ಶುದ್ಧ ನೀರಿನ ಘಟಕಗಳ ನಿರ್ಮಾಣ, ಸಮುದಾಯ ಭವನ, ಬಯಲು ಬಹಿರ್ದೆಶೆ ಮುಕ್ತ ಗ್ರಾಮಗಳಾಗಿ ನಾಲ್ಕು ಗ್ರಾಮಗಳಲ್ಲಿ ಪ್ರತಿ ಮನೆಗಳಲ್ಲಿ ಶೌಚಾಲಯ ನಿರ್ಮಾಣ, ಸಾರ್ವಜನಿಕ ಸ್ಥಳಗಳಲ್ಲಿ ಸಮುದಾಯ ಶೌಚಾಲಯ ನಿರ್ವಹಣೆ, ಕಳೆದ ನಾಲ್ಕು ವರ್ಷಗಳಲ್ಲಿ ಚರಂಡಿ ನಿರ್ಮಾಣ ನಿರ್ವಹಣೆಯಲ್ಲಿ ಶೇ. 100 ಸಾಧನೆ ಮಾಡಲಾಗಿದೆ.
ವಾರ್ಡ್ ಸಭೆ, ಗ್ರಾಮಸಭೆ, ಮಹಿಳೆಯರ ಮಕ್ಕಳಿಗಾಗಿ ವಿಶೇಷ ಗ್ರಾಮಸಭೆ, ಕಾವಲು ಸಮಿತಿಯ ಸಭೆಗಳು ಮೂರು ತಿಂಗಳಿಗೋಮ್ಮೆ ನಡೆಯುತ್ತಿದ್ದು, ಯಾವುದೇ ಬಾಲ್ಯ ವಿವಾಹಗಳು ಗ್ರಾಮಗಳಲ್ಲಿ ನಡೆದಿಲ್ಲ. ಗ್ರಾಮದಲ್ಲಿ ಮಹಾತ್ಮಗಾಂಧೀ ಉದ್ಯೋಗ
ಖಾತ್ರಿ ಯೋಜನೆಯಡಿ ಶೇ. 82ರಷ್ಟು ಸಾಧನೆ ಮಾಡಿ ಉದ್ಯೋಗ ನೀಡಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರದ ನಿಯಮಾನುಸಾರ ಸಾಮಾಜಿಕ ಲೆಕ್ಕ ಪರಿಶೋಧನೆ ಒಳಪಡಿಸುವ ಗ್ರಾಮವಾಗಿ ಎಲ್ಲರ
ಜನಮಾನಸದಲ್ಲಿ ನೆಲೆನಿಂತ ಮೆಚ್ಚುಗೆಯನ್ನು ಪಡೆದ ಗ್ರಾಪಂ ಶಿವಾಜಿನಗರವಾಗಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ಹಾಮವ್ವ ನಾಯಕ, ಉಪಾಧ್ಯಕ್ಷ ಹಾಲಪ್ಪ , ಪಿಡಿಒ ಎಸ್.ಶಿಲ್ಪಾ ಮಹಾತ್ಮಾ ಗಾಂಧಿ ಪುರಸ್ಕಾರದ ಪ್ರಶಸ್ತಿ ಸ್ವೀಕರಿಸಿದ್ದಾರೆ.