ಮುಂಡರಗಿ: ಸ್ಥಳೀಯ ಪುರಸಭೆಯ ಚುನಾವಣೆಯಲ್ಲಿ ಬಿಜೆಪಿಯ 20 ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಬಿಜೆಪಿ ಕೈವಶವಾಗಲಿದೆ ಎಂದು ಶಾಸಕ ರಾಮಣ್ಣ ಲಮಾಣಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ 17ನೇ ವಾರ್ಡ್‌ನ ಹೆಸರೂರು ರಸ್ತೆಯ ಆಶ್ರಯ ಪ್ಲಾಟ್ದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಬುಧವಾರ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ಬಿಜೆಪಿಯ ಆಡಳಿತದ ಅವಧಿಯಲ್ಲಿ ಪುರಸಭೆಯು ಎಲ್ಲ ರೀತಿಯಿಂದ ಅಭಿವೃದ್ಧಿ ಹೊಂದಿರುವುದನ್ನು ಮತದಾರರು ಮರೆತಿಲ್ಲ. ಮತ್ತೆ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದಾಗಲಿದ್ದಾರೆ. ಪುರಸಭೆ ಆಡಳಿತವು ಬಿಜೆಪಿ ವಶಕ್ಕೆ ಬರಲಿದೆ. ಪಕ್ಷದ ಬಹುತೇಕ ಅಭ್ಯರ್ಥಿಗಳು ವಿದ್ಯಾವಂತರಾಗಿದ್ದು, ಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ ಮಾದರಿ ಪುರಸಭೆ ಆಗುವಂತೆ ಮಾಡಲಿದ್ದಾರೆ. ಕುಂದಗೋಳ ಹಾಗೂ ಚಿಂಚೋಳಿ ಉಪಚುನಾವಣೆಗಳು ಸೇರಿದಂತೆ ಲೋಕಸಭೆಯ ಫಲಿತಾಂಶಗಳು ಬಿಜೆಪಿ ಪರವಾಗಿ ಬರಲಿವೆ. ನರೇಂದ್ರ ಮೋದಿಯವರು ಮತ್ತೂಮ್ಮೆ ದೇಶದ ಪ್ರಧಾನ ಮಂತ್ರಿಯಾಗಿ ದೇಶ ಮುನ್ನಡೆಸುವರು. ರಾಷ್ಟ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವು ಮುಂದುವರಿಯಲಿದೆ ಎಂದರು.
ಕರಬಸಪ್ಪ ಹಂಚಿನಾಳ, ಶಿವಾನಂದ ಬಾರಕೇರ, ರಜನಿಕಾಂತ ದೇಸಾಯಿ, ರಂಗಪ್ಪ ಕೋಳಿ, ವೆಂಕಟೇಶ ತಳವಾರ, ಪ್ರಶಾಂತ ಗುಡದಪ್ಪನವರ, ಸದ್ದಾಂ ಶಿರಗುಪ್ಪ, ಕರಿಯಪ್ಪ ಸೀಮಣ್ಣ, ಬಸವರಾಜ ದೇಸಾಯಿ ಮತ್ತಿತರರು ಪಾಲ್ಗೊಂಡಿದ್ದರು. ನಂತರ ಶಾಸಕರು ಹಾಗೂ ಬಿಜೆಪಿ ಮುಖಂಡರು ಪಟ್ಟಣದ 14, 15ನೇ ವಾರ್ಡ್‌ಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು.