Advertisement

ಮೂಡಲಗಿ: ಲಿಂಗಾಯತ ಸಮಾಜದ ಹಿತ ಕಾಯುವ ಬಿಜೆಪಿ

03:05 PM Mar 18, 2023 | Team Udayavani |

ಮೂಡಲಗಿ: ವೀರಶೈವ ಲಿಂಗಾಯತ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವ ಪಕ್ಷ ಬಿಜೆಪಿ ಎಂದು ಶಾಸಕ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನುಡಿದರು.

Advertisement

ಶುಕ್ರವಾರ ತಾಲೂಕಿನ ನಾಗನೂರ ಪಟ್ಟಣದ ಹೊರವಲಯದ ಮಹಾಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಜರುಗಿದ ಅರಭಾವಿ ಮತಕ್ಷೇತ್ರದ ವೀರಶೈವ ಲಿಂಗಾಯತ ಸಮಾಜದ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜ ಬಾಂಧವರು ಒಗ್ಗಟ್ಟಿನಿಂದ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಆಶೀರ್ವಾದ ಮಾಡಬೇಕು. ಬಿಜೆಪಿ ಲಿಂಗಾಯತ ಸಮಾಜದ ಹಿತ ಕಾಯಲಿದೆ ಎಂದು ಅವರು ತಿಳಿಸಿದರು.

2004ರಲ್ಲಿ ಶಾಸಕನಾಗಲು ನನ್ನ ಜೊತೆ ಸಾಕಷ್ಟು ಜನ ಕೈಜೋಡಿಸಿದ್ದಾರೆ. ಕಷ್ಟ ಕಾಲದಲ್ಲಿ ನಿಂತಿದ್ದಾರೆ. ಕಾರಣಾಂತರಗಳಿಂದ ಈಗ ಕೆಲವರು ನನ್ನನ್ನು ಬಿಟ್ಟು ಬೇರೆ ಕಡೆ ಹೋಗಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ತೆಗಳುವುದಿಲ್ಲ. ದೇವರು ಅಂತಹವರಿಗೆ ಒಳ್ಳೆಯದನ್ನು ಮಾಡಲಿ ಎಂದು ವಿರೋಧಿಗಳ ಹೆಸರು ಪ್ರಸ್ತಾಪಿಸದೇ ಮಾತನಾಡಿದರು.

ಅರಭಾವಿ ದುರದುಂಡೀಶ್ವರ ಮಠದ ಸಿದ್ದಲಿಂಗ ಸ್ವಾಮಿಗಳು, ಗೋಕಾಕದ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮಿಗಳು, ಹುಣಶ್ಯಾಳ ಪಿ.ಜಿ.ಯ ನಿಜಗುಣ ದೇವರು, ಭಾಗೋಜಿಕೊಪ್ಪದ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಸುಣಧೋಳಿಯ ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಘಟಪ್ರಭಾ ಜೆಜಿಕೋ ಆಸ್ಪತ್ರೆಯ ಅಧ್ಯಕ್ಷ ಬಿ.ಆರ್‌.ಪಾಟೀಲ(ನಾಗನೂರ) ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಪ್ರಭಾ ಶುಗರ್‌ ಅಧ್ಯಕ್ಷ ಅಶೋಕ ಪಾಟೀಲ, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ.ಡಿ.ಪಾಟೀಲ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸುಭಾಷ ಢವಳೇಶ್ವರ, ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಬಸವಪ್ರಭು ನಿಡಗುಂದಿ, ಕೆಂಚನಗೌಡ ಪಾಟೀಲ, ಶಿವನಗೌಡ ಪಾಟೀಲ, ಸುಭಾಶ ಕುರಬೇಟ, ಶಿವಪ್ಪ ಹೊಸಮನಿ, ಎಸ್‌.ಎಲ್‌.ಹೊಸಮನಿ, ಬಸವನಗೌಡ ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Advertisement

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಮಾಜದ ಪ್ರಮುಖರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದರು. ನೀಲಪ್ಪ ಕೇವಟಿ ಸ್ವಾಗತಿಸಿದರು, ಸುಭಾಷ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು, ಶೈಲಾ ಕೊಕ್ಕರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next