Advertisement

ಮುದಗಲ್ಲ ಮೊಹರಂ ಭಾವೈಕ್ಯ ಪ್ರತೀಕ

12:36 PM Sep 09, 2019 | Naveen |

ಮುದಗಲ್ಲ: ಮುದಗಲ್ಲ ಪಟ್ಟಣದ ಮೊಹರಂ ಭಾವೈಕ್ಯದ ಪ್ರತೀಕವಾಗಿದೆ. ಜೊತೆಗೆ ಮೊಹರಣ ಆಚರಣೆಗೆ ಐತಿಹಾಸಿಕ ಹಿನ್ನೆಲೆ ಇದೆ. ಇಲ್ಲಿ ನಡೆಯುವ ಮೊಹರಂ ಆಚರಣೆ ವೀಕ್ಷಣೆಗೆ ರಾಜ್ಯ, ನೆರೆ ರಾಜ್ಯಗಳ ಸಹಸ್ರಾರು ಭಕ್ತರು ಸೇರುವುದು ವಿಶೇಷವಾಗಿದೆ.

Advertisement

ವಿಜಯಪುರದ ಆದಿಲ್ಶಾಹಿ ಯುದ್ಧದಲ್ಲಿ ಮುದಗಲ್ಲ ಕೋಟೆ ವಶಪಡಿಸಿಕೊಂಡ ನಂತರ ತನ್ನೊಂದಿಗೆ ತಂದಿದ್ದ ಆಲಂ (ದೇವರು) ಗಳನ್ನು ಇಲ್ಲಿ ಸ್ಥಾಪಿಸಿ ಪೂಜಿಸಿದ್ದ ಎಂಬ ಪ್ರತೀತಿ ಇದೆ. ಅಂದಿನಿಂದ ಪಟ್ಟಣದಲ್ಲಿ ಮೊಹರಂ ಆಚರಿಸಲಾಗುತ್ತಿದೆ. ಶ್ರೀಮಂತ-ಬಡವ, ಮೇಲು-ಕೀಳು ಎಂಬ ಭೇದವಿಲ್ಲದೆ ಸರ್ವ ಧರ್ಮದವರು ಇದರಲ್ಲಿ ಭಾಗಿಯಾಗುವುದು ವಿಶೇಷ. ಇಲ್ಲಿರುವ ಆಲಂ ದೇವರುಗಳಿಗೆ ಕಲ್ಯಾಣದ ರಾಜ ದತ್ತಿಗಳನ್ನು ಕಳಿಸುತ್ತಿದ್ದ ಎಂದು ಇತಿಹಾಸದ ದಾಖಲೆಗಳಿಂದ ತಿಳಿದು ಬರುತ್ತದೆ. ಹುಸೇನಿ ಆಲಂ ದರ್ಗಾಕ್ಕೆ ಹೊಸ ಕಟ್ಟಡ ನಿರ್ಮಿಸಿದಾಗಿನಿಂದ ಹಬ್ಬದ ಕಳೆ ಹೆಚ್ಚಿದೆ.

ಮನಮೋಹಕ: ಕೋಟೆಯೊಳಗಿನ ದರ್ಗಾದ ಪೀರ್‌ಗಳ ಸವಾರಿ ವೈಭವದಿಂದ ನಡೆಯುತ್ತದೆ. ಇದನ್ನು ಸಾವಿರಾರು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ದರ್ಗಾದ ಮುಂದಿರುವ ಅಲಾವಿ ಕುಣಿ ಮುಂದೆ ಯುವಕರ ಹೆಜ್ಜೆ ಹಾಕುತ್ತಾರೆ. ಕರ್‌ಬಲಾ ಕಾಳಗ ಯುದ್ಧದ ಘೋರ ವರ್ಣನೆ, ಅನ್ಯಾಯ, ವಂಚನೆ, ಸಾವು-ನೋವು, ಶೌರ್ಯ-ಬಲಿದಾನಗಳ ಕಥನವನ್ನು ಹಾಡುಗಾರರು ಹಾಡಿ ವರ್ಣಿಸುತ್ತಾರೆ.

ಸಿಂಗಾರ: ಮೊಹರಂ ಅಂಗವಾಗಿ ಪಟ್ಟಣದ ಮುಸ್ಲಿಂ-ಹಿಂದೂ ಸಮುದಾಯದವರು ಮನೆಗೆ ಸುಣ್ಣ ಬಣ್ಣ ಬಳಿದು ಸಿಂಗರಿಸಿ ಹಬ್ಬ ಆಚರಿಸುತ್ತಾರೆ. ಹರಕೆ ಹೊತ್ತವರು ಆಲಂಗಳಿಗೆ ಮುಡಿಪು ಅರ್ಪಿಸುತ್ತಾರೆ. ಮುದಗಲ್ಲ ಮೊಹರಂ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಪಟ್ಟಣದ ಕೋಟೆ ಹೊರಭಾಗದಲ್ಲಿ ನಡೆಯುವ ಹಸನ್‌-ಹುಸೇನ್‌ ಸಹೋದರರ ಬೆಳ್ಳಿ ಪಾಂಜಾಗಳ ಮುಖಾಮುಖೀ ದೃಶ್ಯ ಕಣ್ತುಂಬಿಕೊಳ್ಳಲು ದೇಶ-ವಿದೇಶದ ಜನರು ಆಗಮಿಸುತ್ತಾರೆ. ಹಿಜರಿ ಸಂವತ್ಸರದ ಮೊದಲನೇ ತಿಂಗಳು ಹತ್ತು ದಿನಗಳ ಕಾಲ ಮೊಹರಂ ಆಚರಿಸಲಾಗುತ್ತದೆ.

10 ದಿನದ ವಿಶೇಷ: ಪಟ್ಟಣದಲ್ಲಿ ಸತತ 10 ದಿನಗಳ ಕಾಲ ಆಚರಿಸುವ ಮೊಹರಂದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. 1ರಿಂದ 5ನೇ ದಿನ ಮೊಹರಂ ಎಂದು ಆಚರಿಸಿದರೆ, 5ನೇ ದಿನ ಜಿಹಾಲ್ ಎಂದು, 7ನೇ ದಿನ ಖಾಸಿಂ ಪೀರಾ ಸವಾರಿ, 8ನೇ ದಿನ ಮೌಲಾಲಿ ಪೀರಾ ಸವಾರಿ, 9ನೇ ದಿನ ಹಸನ್‌-ಹುಸೇನ್‌ (ಖತಲ್ ರಾತ್ರಿ) ಸವಾರಿ ಎಂದು ಹಾಗೂ ಕೊನೆಯ 10ನೇ ದಿನ ದಫನ್‌ ಕಾರ್ಯಕ್ರಮ ನಡೆಯುತ್ತವೆ. ಆಲಂ(ದೇವರು)ಗಳ ಕೊನೆಯ ಭೇಟಿ ರೊಮಾಂಚನಕಾರಿಯಾಗಿರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next