ಮುದಗಲ್ಲ: ಸತತ ಬರದಿಂದ ಬಸವಳಿದ ಲಿಂಗಸುಗೂರು ತಾಲೂಕಿನ ರೈತರು ಈ ಬಾರಿ ತೊಗರಿ ಮತ್ತು ಸಜ್ಜೆ ಬೆಳೆ ಕೈಹಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಉತ್ತಮ ಮಳೆಯಿಂದ ಬೆಳೆದ ತೊಗರಿಯನ್ನು ಕೀಟದಿಂದ ರಕ್ಷಣೆ ಮಾಡಿಕೊಂಡ ರೈತರು ಬಂಪರ್ ಇಳುವರಿ ಬರಬಹುದೆಂಬ ಆಶಾಭಾವದಲ್ಲಿದ್ದಾರೆ.
ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರಿನಲ್ಲಿ ಅತೀವೃಷ್ಟಿ ಮತ್ತು ಅನಾವೃಷ್ಟಿ ಕಾಡಿದೆ. ಆದರೆ ಲಿಂಗಸುಗೂರು ತಾಲೂಕಿನಲ್ಲಿ ಮಾತ್ರ ತೊಗರಿಗೆ ಉತ್ತಮ ವಾತಾವರಣ ನಿರ್ಮಾಣವಾಗಿ ತೊಗರಿ ಹುಲುಸಾಗಿ ಬೆಳೆದು ಕಟಾವು ಹಂತಕ್ಕೆ ಬಂದಿದೆ. ಈಗಾಗಲೇ ಕೆಲ ರೈತರು ತೊಗರಿ ಕಟಾವು ಮಾಡಿ ರಾಶಿ ಮಾಡುತ್ತಿದ್ದಾರೆ. ತೊಗರಿಗೆ ಯೋಗ್ಯ ಬೆಲೆ ಸಿಗಲಿ ಎಂಬ ಆಶಯ ರೈತರದ್ದಾಗಿದೆ.
ಎರಡು-ಮೂರು ವರ್ಷದ ಹಿಂದೆ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕೆಜಿಗೆ 100 ರೂ.ಗಡಿ ದಾಟಿತ್ತು. ಹೀಗಾಗಿ ಬಹಳಷ್ಟು ರೈತರು ತೊಗರಿ ಬೆಳೆಯಲು ಮುಂದಾದರು. ಆಗ ಮಾರುಕಟ್ಟೆಗೆ ತೊಗರಿ ಆವಕ ಹೆಚ್ಚಳವಾಗಿದ್ದರಿಂದ ಬೆಲೆ ಕುಸಿತವಾಗಿತ್ತು. ಆಗ ಹೊಡೆತ ತಿಂದ ರೈತರು ತೊಗರಿ ಕಡೆ ಹೆಚ್ಚಿನ ಒಲವು ತೋರಿಸುತ್ತಿಲ್ಲ. ಇನ್ನು ಕೆಲ ರೈತರು ಬೇರೆ ಬೆಳೆಗಳನ್ನು ಬೆಳೆದು ಹಾನಿ ಅನುಭವಿಸುವುದಕ್ಕಿಂತ ತೊಗರಿ ಬೆಳೆಯುವುದು ಉತ್ತಮ ಎಂಬ ಅಭಿಪ್ರಾಯ ಹೊಂದಿದ್ದಾರೆ.
ತೊಗರಿಗೆ ಕಡಿಮೆ ಖರ್ಚು, ಮಾನವನ ಪರಿಶ್ರಮ ಕೂಡ ಕಡಿಮೆ ಬೇಕಾಗುತ್ತದೆ. ಹೀಗಾಗಿ ಈ ಬಾರಿ ತೊಗರಿ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ 41,805 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ ತೊಗರಿ 17,772 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೀಟ ಬಾಧೆಯಿಂದ ರಕ್ಷಣೆ: ತೊಗರಿ ಹೂವಾಡುವ ವೇಳೆಯಲ್ಲಿ ಮಳೆ ಮತ್ತು ಮಂಜಿನಿಂದ ತೇವಾಂಶ ಹೆಚ್ಚಾಗಿ ಬೆಳೆಯಲ್ಲಿ ಚುಕ್ಕೆ ರೋಗ ಹಾಗೂ ಹೂವು ಮತ್ತು ಕಾಯಿ ಕೊರಕ ಹುಳುಗಳು ಹಾವಳಿ ಇಟ್ಟಿದ್ದವು. ಅವುಗಳ ಹತೋಟಿಗೆ ಔಷಧಿ ಸಿಂಪಡಿಸಿ ರೈತರು ಬೆಳೆ ರಕ್ಷಿಸಿಕೊಂಡಿದ್ದಾರೆ. ಈಗ ಉತ್ತಮ ಇಳುವರಿ ನೀರಿಕ್ಷೆ ಮೂಡಿದೆ. ಎಕರೆಗೆ 5ರಿಂದ 6 ಕ್ವಿಂಟಲ್ ತೊಗರಿ ಬೆಳೆದಿದೆ ಎಂದು ಕಸ್ತೂರಿ ತಾಂಡಾದ ಶಂಕ್ರಪ್ಪ ಮತ್ತು ಪಾಂಡುರಂಗ ಪತ್ರಿಕೆಗೆ ತಿಳಿಸಿದ್ದಾರೆ.
ತೊಗರಿ ಜೊತೆಗೆ ಬಿಳಿಜೋಳ, ಕಡಲೆ ಬೆಳೆ ಚೆನ್ನಾಗಿವೆ. ತೊಗರಿ ಮಾರುಕಟ್ಟೆಗೆ ಬರುವ ಮುನ್ನ ಸರಕಾರ ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು. ಖರೀದಿ ಕೇಂದ್ರಗಳಿಗೆ ರೈತರು ತೊಗರಿ ಹಾಕಿದ ತಕ್ಷಣ ಅವರ ಬ್ಯಾಂಕ್ ಖಾತೆಗೆ ಸರಕಾರ ಹಣ ಜಮೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ತೊಗರಿ ಬೆಳೆಗಾರರು ಒತ್ತಾಯಿಸಿದ್ದಾರೆ. ಈಗಾಗಲೇ ತಾಲೂಕಿನ ಉಪ ವಿಭಾಗಾಧಿಕಾರಿಗಳು ರೈತರ ಸಭೆ ನಡೆಸಿದ್ದಾರೆ. ತೊಗರಿ ಖರೀದಿ ಕೇಂದ್ರ ತೆರೆಯುವುದರ ಜೊತೆಗೆ ಪ್ರತಿ ಕ್ವಿಂಟಲ್‌ಗೆ 6100ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ ಎಂದು ರೈತ ಹೋರಾಟಗಾರ ಅಮರಣ್ಣ ಗುಡಿಹಾಳ ತಿಳಿಸಿದ್ದಾರೆ.
ದೇವಪ್ಪ ರಾಠೊಡ