Advertisement

ಸೈಕಲ್ ವಿತರಣೆಗೆ ಭರದ ಸಿದ್ಧತೆ

11:08 AM Aug 22, 2019 | Naveen |

ಮುದಗಲ್ಲ: 2019-20ನೇ ಸಾಲಿನ ಶೈಕ್ಷಣಿಕ ವರ್ಷದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಗಾಗಿ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಇಲ್ಲಿನ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಸೈಕಲ್ ಜೋಡಣೆ ಕಾರ್ಯ ಭರದಿಂದ ನಡೆದಿದೆ.

Advertisement

ಪ್ರೌಢಶಾಲೆಗಳಲ್ಲಿ ಓದುವ ಬಿಪಿಎಲ್ ಕುಟುಂಬಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸರಕಾರ ಉಚಿತ ಸೈಕಲ್ ವಿತರಿಸುವ ಯೋಜನೆ ಜಾರಿಗೆ ತಂದಿದೆ. ಆದರೆ ಪ್ರಸಕ್ತ ವರ್ಷ ಶಾಲೆಗಳು ಆರಂಭವಾಗಿ ಮೂರು ತಿಂಗಳಾಗುತ್ತ ಬಂದಿದೆ. ಹೀಗಾಗಿ ಅರ್ಹ ಪ್ರೌಢಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳು ಸೈಕಲ್ಗಾಗಿ ಕಾಯುತ್ತಿದ್ದಾರೆ. ಪಟ್ಟಣದ ಸರಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಸೈಕಲ್ ಬಿಡಿ ಭಾಗಗಳನ್ನು ತಂದಿರಿಸಿ ತಿಂಗಳು ಗತಿಸಿದೆ. ಉತ್ತರಪ್ರದೇಶ ಮೂಲದ ಕಂಪನಿಯೊಂದಕ್ಕೆ ಸರಕಾರ ಗುತ್ತಿಗೆ ನೀಡಿದ್ದು, ಕಳೆದ ಒಂದು ತಿಂಗಳಿಂದ ಕಾರ್ಮಿಕರು ಸೈಕಲ್ ಜೋಡಣೆಯಲ್ಲಿ ತೊಡಗಿದ್ದಾರೆ. ಸುಮಾರು 900 ಸೈಕಲ್ ಜೋಡಣೆ ಪೂರ್ಣಗೊಂಡಿವೆ. ಇನ್ನೂ 150ರಿಂದ 200 ಸೈಕಲ್ ಜೋಡಣೆ ಆಗಬೇಕಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ.

ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಪ್ರೌಢಶಾಲೆಗಳನ್ನು ತೆರೆಯಲಾಗಿದೆ. ಒಟ್ಟು 44 ಸರಕಾರಿ ಪ್ರೌಢಶಾಲೆ, 10 ಅನುದಾನಿತ ಪ್ರೌಢಶಾಲೆ, 32 ಅನುದಾನ ರಹಿತ ಪ್ರೌಢಶಾಲೆಗಳಿವೆ. ಅನುದಾನ ರಹಿತ ಶಾಲೆಗಳನ್ನು ಹೊರತುಪಡಿಸಿ ಸುಮಾರು 5,011 ವಿದ್ಯಾರ್ಥಿಗಳು 8ನೇ ತರಗತಿಯವರಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು 2537 ಇದ್ದರೆ, 2474 ವಿದ್ಯಾರ್ಥಿನಿಯರಿದ್ದಾರೆ.

ಈ ಭಾಗದಲ್ಲಿ ದೊಡ್ಡಿ, ತಾಂಡಾಗಳಲ್ಲಿ ಮತ್ತು ಸಣ್ಣಪುಟ್ಟ ಹಳ್ಳಿಗಳಲ್ಲಿ ಪ್ರೌಢಶಾಲೆಗಳಿಲ್ಲ. ಸರಿಯಾದ ರಸ್ತೆ ಸೌಲಭ್ಯ ಇಲ್ಲದ್ದಕ್ಕೆ ಸರಿಯಾಗಿ ಬಸ್‌, ವಾಹನ ಸೌಕರ್ಯವೂ ಇಲ್ಲ. ಇಂತಹ ಹಳ್ಳಿಗಳಲ್ಲಿ ಪ್ರೌಢಶಾಲೆ ಇರದ ವಿದ್ಯಾರ್ಥಿಗಳು ಸಮೀಪದ ಗ್ರಾಮ ಇಲ್ಲವೇ ಮುದಗಲ್ಲ ಪಟ್ಟಣದ ಪ್ರೌಢಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕೆಲವರು ಒಂದರಿಂದ ಮೂರ್‍ನಾಲ್ಕು ಕಿ.ಮೀ. ನಡೆದುಕೊಂಡೇ ಸಮೀಪದ ಪಟ್ಟಣ, ಗ್ರಾಮಗಳಿಗೆ ಶಾಲೆಗೆ ಹೋಗುತ್ತಾರೆ. ಇಂತಹ ವಿದ್ಯಾರ್ಥಿಗಳು ಸೈಕಲ್ಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಶಿಕ್ಷಣ ಇಲಾಖೆ ಆದಷ್ಟು ಬೇಗ ಸೈಕಲ್ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು, ಪಾಲಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next