ಮುದಗಲ್ಲ: ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಬಿಎಸ್‌ಎನ್‌ಎಲ್ ನೆಟ್ವರ್ಕ್ ಕೈಕೊಟ್ಟ ಪರಿಣಾಮ ಗ್ರಾಹಕರು, ವಿವಿಧ ಕಂಪ್ಯೂಟರ್ ಸೆಂಟರ್, ಗ್ರಾಪಂ ಕಚೇರಿಗಳಲ್ಲಿ ತೊಂದರೆ ಅನುಭವಿಸುವಂತಾಗಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ನೆಟ್ವರ್ಕ್ ಇಲ್ಲದ್ದರಿಂದ ಗ್ರಾಹಕರ ಮೊಬೈಲ್ ರಿಂಗಣಿಸುತ್ತಿಲ್ಲ. ಯಾವುದೇ ಬಿಎಸ್ಸೆನ್ನೆಲ್ ನಂಬರ್‌ಗೆ ಕರೆ ಮಾಡಿದರೂ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ, ಸ್ವಿಚ್ ಆಫ್ ಮಾಡಿದ್ದಾರೆ, ಫಾರ್ವ್‌ಡ್ ಮಾಡಿದ್ದಾರೆ ಎಂಬ ಸಂದೇಶಗಳು ಕೇಳಿಬರುತ್ತಿವೆ ಎಂದು ಗ್ರಾಹಕರು ದೂರಿದ್ದಾರೆ.
ಕೇವಲ ಮೊಬೈಲ್ ಮತ್ತು ಲ್ಯಾಂಡ್‌ಲೈನ್ ಮಾತ್ರವಲ್ಲದೇ ಬ್ರಾಡ್ ಬ್ಯಾಂಡ್ ಲೈನ್, ಬಿಎಸ್‌ಎನ್‌ಎಲ್ ಸರ್ವರ್, ಅಂತರ್ಜಾಲ ವ್ಯವಸ್ಥೆಯೂ ಸ್ಥಗಿತಗೊಂಡಿವೆ.
ಇಂಟರ್‌ನೆಟ್ ಸೆಂಟರ್‌ಗಳ ಪರದಾಟ: ಬಿಎಸ್ಸೆನ್ನೆಲ್ ನೆಟ್ವರ್ಕ್ ಕೈಕೊಟ್ಟಿದ್ದರಿಂದ ಇಂಟರ್‌ನೆಟ್ ಸೆಂಟರ್‌ಗಳವರೂ ತೊಂದರೆ ಅನುಭವಿಸುತ್ತಿದ್ದಾರೆ. ವಸತಿ ನಿಲಯಕ್ಕೆ ಅರ್ಜಿ, ಶಿಷ್ಯವೇತನಕ್ಕೆ ಅರ್ಜಿ, ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ, ಜಾತಿ ಆದಾಯ ಪ್ರಮಾಣಪತ್ರ, ಬೆಳೆವಿಮೆ, ಪಡಿತರ ಚೀಟಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಸಮಸ್ಯೆ ಆಗಿದೆ. ಗ್ರಾಹಕರು ಅಂಗಡಿಗಳಿಗೆ ಬಂದು ಮರಳಿ ಹೋಗುತ್ತಿದ್ದಾರೆ.
ಗ್ರಾಪಂಗೂ ತಟ್ಟಿದ ಬಿಸಿ: ಸಮೀಪದ ಹೂನೂರ, ಬನ್ನಿಗೋಳ, ಕನ್ನಾಳ, ತಲೇಖಾನ, ನಾಗಲಾಪುರ, ಆಮದಿಹಾಳ ಗ್ರಾಪಂಗಳಿಗೂ ಬಿಎಸ್‌ಎನ್‌ಎಲ್ ನೆಟ್ವರ್ಕ್ ಸ್ಥಗಿತದ ಬಿಸಿ ತಟ್ಟಿದೆ. ಗ್ರಾಮ ಪಂಚಾಯಿತಿಗಳಲ್ಲಿ ಮೂರು ದಿನಗಳಿಂದ ಗಣಕಯಂತ್ರಗಳು ಬಂದಾಗಿವೆ. ಗಣಕಯಂತ್ರ ನಿರ್ವಾಹಕರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಕೂಡಲೇ ಬಿಎಸ್ಸೆನ್ನೆಲ್ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸಬೇಕೆಂದು ಗ್ರಾಹಕರು ಆಗ್ರಹಿಸಿದ್ದಾರೆ.