Advertisement

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

12:58 AM Oct 19, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಕುಟುಂಬ ಸದಸ್ಯರು ಮತ್ತಿತರರ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಕೋರಿರುವ ಎಲ್ಲಾ ದಾಖಲೆಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (MUDA) ನೀಡಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh) ಶುಕ್ರವಾರ(ಅ18) ಹೇಳಿದ್ದಾರೆ.

Advertisement

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಶುಕ್ರವಾರ ಮೈಸೂರಿನ ಮುಡಾ ಕಚೇರಿ ಮತ್ತು ಇತರ ಕೆಲವು ಸ್ಥಳಗಳಲ್ಲಿ ಶೋಧ ನಡೆಸಿದ ಬೆನ್ನಲ್ಲೇ ಸಚಿವ ಸುರೇಶ್ ಸುದ್ದಿಗಾರರಿಗೆ  ಹೇಳಿಕೆ ನೀಡಿದ್ದಾರೆ.

“ಯಾವುದೇ ದಾಖಲೆಗಳನ್ನು ಕೋರಿದರೂ, ಮುಡಾ ನೀಡುತ್ತದೆ…ಇಸಿಐಆರ್ (Enforcement Case Information Report) ಬುಕ್ ಮಾಡಿದ ನಂತರ ಸಿಎಂ ವಿರುದ್ಧ ದಾಳಿ ಮಾಡಲು ಇಡಿ ಅಧಿಕಾರವನ್ನು ಪಡೆದಿದೆ ಎಂದು ಹೇಳಲಾಗುತ್ತದೆ, ಅವರು ಯಾವುದೇ ದಾಖಲೆಗಳನ್ನು ಕೇಳಿದರೂ ಮುಡಾ ನೀಡುತ್ತದೆ.  ನಾವು ಇದರಲ್ಲಿ ಭಾಗಿಯಾಗುವ ಪ್ರಶ್ನೆಯೇ ಇಲ್ಲ, ಅಧಿಕಾರಿಗಳು ದಾಖಲೆಗಳನ್ನು ಒದಗಿಸುತ್ತಾರೆ” ಎಂದು ಸುರೇಶ್ ಹೇಳಿಕೆ ನೀಡಿದ್ದಾರೆ.

”ಇದು ನಮ್ಮ ದೇಶದ ಕಾನೂನು, ಇದು ನಮ್ಮ ಇಡಿ, ಪೊಲೀಸ್ ಮತ್ತು ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯ ಮಿತಿಗಳನ್ನು ತಿಳಿದಿದ್ದಾರೆ. ಇಡಿ ತನಿಖೆ ಮಾಡಲಿ. ಇಂದು ಆಗಿರುವುದು ದಾಳಿಯಲ್ಲ, ದಾಖಲೆಗಳನ್ನು ಹುಡುಕುತ್ತಿದ್ದಾರೆ. ದಾಖಲೆಗಳನ್ನು ಹುಡುಕುವುದನ್ನು ನೀವು ಹೇಗೆ ದಾಳಿ ಎಂದು ಕರೆಯುತ್ತೀರಿ? . ಅಧಿಕಾರಿಗಳು ಕೇಳಿದಷ್ಟು ಕೊಡುತ್ತಾರೆ. 8 ಲಕ್ಷ ಪುಟಗಳ ದಾಖಲೆಗಳಿವೆ. ದೇಸಾಯಿ ಸಮಿತಿಗೆ 8 ಲಕ್ಷ ಪುಟ ನೀಡಿದ್ದು, ಕೇಳಿದರೆ ಇಡಿ ಗೂ ನೀಡಲಾಗುವುದು. 8 ಲಕ್ಷ ಪುಟಗಳ ಜೆರಾಕ್ಸ್ ತೆಗೆಯಲು ಒಂದು ವಾರ ಬೇಕಾಗಬಹುದಾದ್ದರಿಂದ ಒಂದೇ ದಿನದಲ್ಲಿ ನೀಡಲು ಸಾಧ್ಯವಾಗದೇ ಇರಬಹುದು” ಎಂದರು.

ಕಾಗದ ಚೂರು ತಂದಿದ್ದರೂ ದೇವರು ನನಗೆ ಕೊಡಬಾರದ ಶಿಕ್ಷೆ ಕೊಡಲಿ: ಬೈರತಿ ಸುರೇಶ್‌
ಬೆಂಗಳೂರು: ನಾನು ಬೇಕಾದರೆ ಚಾಮುಂಡೇಶ್ವರಿ ಸನ್ನಿಧಾನಕ್ಕೋ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಗೋ ಬರುತ್ತೇನೆ. ಒಂದೇ ಒಂದು ಸಣ್ಣ ಕಾಗದದ ಚೂರು ತೆಗೆದುಕೊಂಡು ಬಂದಿದ್ದರೂ ದೇವರು ನನಗೆ ಕೊಡಬಾರದ ಶಿಕ್ಷೆ ಕೊಡಲಿ. ಸುಳ್ಳು ಹೇಳಿದವರು ಹಾಳಾಗಿ ಹೋಗುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಕಿಡಿಕಾರಿದ್ದಾರೆ.

Advertisement

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಕಡತ ತಂದಿದ್ದರೆ ಶಿಕ್ಷೆಯಾಗಲಿ. ನಾನೂ ನಿಮ್ಮಂತೆ ದೇಶದ ಪ್ರಜೆ. ಇ.ಡಿ. ನನಗೆ ನೊಟೀಸ್‌ ಕೊಟ್ಟರೆ ಉತ್ತರ ಕೊಡುತ್ತೇನೆ ಎಂದರು.

ಜಾರಿ ನಿರ್ದೇಶನಾಲಯದವರು ಮುಡಾಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಕೇಳಿದ್ದಾರೆ. 8 ಲಕ್ಷ ದಾಖಲೆಗಳಿವೆ. ಅಷ್ಟನ್ನೂ ಕೊಡುತ್ತೇವೆ. ನಾನಂತೂ ಯಾವುದೇ ಕಡತ ತಂದಿಲ್ಲ. ಕುಮಾರಸ್ವಾಮಿಯವರ ಮನೆಯಲ್ಲೇ ಕಡತಗಳು ಇರಬಹುದು ಅಥವಾ ಛಲವಾದಿ ನಾರಾಯಣ ಸ್ವಾಮಿಯವರು ಕದ್ದಿರಬಹುದು ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next