Advertisement

MUDA: ನ್ಯಾಯಾಲಯದ ಬಗ್ಗೆ ಅಪಾರ ಗೌರವವಿದೆ, ತೀರ್ಪಿಗೆ ತಲೆ ಬಾಗಿದ್ದೇವೆ ಎಂದ ಸಚಿವ ಜಮೀರ್‌

10:00 PM Sep 26, 2024 | Team Udayavani |

ಬೆಂಗಳೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಬಂಧಿಸಿದಂತೆ ಹೈಕೋರ್ಟ್‌ ತೀರ್ಪು ರಾಜಕೀಯ ಪ್ರೇರಿತ (ಪೊಲಿಟಿಕಲ್‌ ಜಡ್ಜ್ಮೆಂಟ್‌) ಎಂಬ ಅರ್ಥದಲ್ಲಿ ನಾನು ಹೇಳಿಲ್ಲ, ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವ ಇದೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಿದ್ದೇವೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಸ್ಪಷ್ಟನೆ ನೀಡಿದ್ದಾರೆ.

Advertisement

ಈ ಕುರಿತು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಸಚಿವ ಜಮೀರ್‌ ಮಾತನಾಡಿ  ಹೈಕೋರ್ಟ್ ತೀರ್ಪು ಬಂದ ನಂತರ ಪ್ರತಿಪಕ್ಷಗಳು ಇದನ್ನೇ ರಾಜಕೀಯ ಮಾಡುತ್ತಿವೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ನನ್ನ ಅಭಿಪ್ರಾಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತನಿಖೆ ನಡೆಯಲಿ. ಕಾನೂನು ಹೋರಾಟ ಎದುರಿಸುತ್ತೇನೆ ಎಂದು ಹೇಳಿದ್ದಾರೆ.

ನ್ಯಾಯಾಲಯದ ಬಗ್ಗೆ ಅತ್ಯಂತ ಗೌರವವಿದೆ: 
ಕಾಂಗ್ರೆಸ್ ಹೈಕಮಾಂಡ್, ಶಾಸಕರು, ಸಚಿವರು ಮುಖ್ಯಮಂತ್ರಿ ಜತೆ ಇದ್ದೇವೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದೆ ಎಂದಿದ್ದಾರೆ. ಇದನ್ನು ಹೊರತುಪಡಿಸಿ ನ್ಯಾಯಾಲಯದ ತೀರ್ಪು ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಲಿಲ್ಲ. ರಾಜಕೀಯ ಪ್ರೇರಿತ ಆರೋಪ ಇದಾಗಿದೆ ಎಂಬುದೇ ನನ್ನ ವಾದವಾಗಿದೆ. ನನಗೆ ಎಂದಿಗೂ ನ್ಯಾಯಾಲಯದ ಬಗ್ಗೆ ಅತ್ಯಂತ ಗೌರವ ಇದೆ. ಒಂದೊಮ್ಮೆ ಬಾಯಿ ತಪ್ಪಿ ಹೇಳಿದ್ದರೆ ಕ್ಷಮೆಯಾಚಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.

ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದು ಸರಿ ಇದೆ. ತನಿಖೆ ನಡೆಯಬೇಕು ಎಂದು ತೀರ್ಪು ಪ್ರಕಟವಾಗಿದೆ. ಈ ತೀರ್ಪಿನ ಬಗ್ಗೆ ಮಾತನಾಡುವಾಗ ವಸತಿ ಸಚಿವ ಜಮೀರ್‌ ಅವರ  ಪೊಲಿಟಿಕಲ್‌ ಜಡ್ಜ್‌ ಮೆಂಟ್‌  ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಜಮೀರ್‌ ವಿರುದ್ಧ ಬಿಜೆಪಿ ಮುಖಂಡ ಯತ್ನಾಳ್‌ ಕಿಡಿ: 
ಜಮೀರ್‌ ಅಹ್ಮದ್‌ ಖಾನ್‌ ಅವರ ಹೇಳಿಕೆ ಉಲ್ಲೇಖಿಸಿ, ಬಿಜೆಪಿ ಮುಖಂಡ ಬಸನಗೌಡ ಪಾಟೀಲ್‌ ಯತ್ನಾಳ ಕೂಡ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದ ಅವರು, ತಮಗೆ ಅರಿವಿಲ್ಲದ, ಅರ್ಥ ಆಗದ ವಿಚಾರಗಳ ಬಗ್ಗೆ ಮಾತನಾಡೋದು ಮೂರ್ಖತನ. ಇವರು (ಜಮೀರ್‌) ಮಾಡಿದ್ದು ಸಹ ಅದೇ ವಿಜ್ಞಾನ, ಸಮಾಜ, ಗಣಿತ, ಭೂಗೋಳ, ಕನಿಷ್ಠ ಕಾನೂನಿನ ಅರಿವು ಏಕೆ ಕಲಿಯಬೇಕು ಹಾಗೂ ಅಧ್ಯಯನ ಮಾಡಬೇಕು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next