ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆಯನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ಕ್ರಮವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮೀನಿನ ಮೂಲ ಮಾಲೀಕ ದೇವರಾಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಜನವರಿ 25ಕ್ಕೆ ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜರಿಯಾ ಮತ್ತು ನ್ಯಾ.ಅರವಿಂದ ಕಾಮತ್ ಅವರ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸೇರಿದಂತೆ ಪ್ರತಿವಾದಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.
ದೇವರಾಜು ಪರ ಹಿರಿಯ ವಕೀಲ ದುಷ್ಯಂತ ದವೆ ವಾದಿಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಏಕಸದಸ್ಯ ನ್ಯಾಯಪೀಠದ ಮುಂದೆ ಡಿಸೆಂಬರ್ 10ಕ್ಕೆ ಬರಲಿದೆ. ಈ ಅರ್ಜಿಗಳ ವಿಚಾರಣೆಯನ್ನು ಮುಂದೂಡುವಂತೆ ಏಕಸದಸ್ಯ ನ್ಯಾಯಪೀಠಕ್ಕೆ ಸೂಚನೆ ನೀಡಬೇಕು. ಇಲ್ಲವಾದರೆ ನಾನು ಅನಗತ್ಯವಾಗಿ ತೊಂದರೆಗೆ ಸಿಲುಕಿಕೊಳ್ಳಬೇಕಾಗುತ್ತದೆ ಎಂದು ಕೋರಿದರು. ಆದರೆ ನ್ಯಾಯಪೀಠ ಇಂತಹ ಸೂಚನೆ ನೀಡಲು ನಿರಾಕರಿಸಿತು.
80 ವರ್ಷದ ನನ್ನನ್ನು ರಾಜಕಾರಣದ ಕೆಸರೆರಚಾಟಕ್ಕೆ ಬಳಸಿಕೊಳ್ಳಲಾಗಿದೆ. ನನಗೂ ರಾಜಕಾರಣಕ್ಕೂ ಸಂಬಂಧವಿಲ್ಲ ಎಂದು ದೇವರಾಜು ಪರ ವಕೀಲರು ವಾದಿಸಿದರು.
ರಾಜ್ಯ ಸರ್ಕಾರದ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ರಾಜ್ಯಪಾಲರಿಗೆ ಅಭಿಯೋಜನೆಗೆ ಅನುಮತಿ ನೀಡುವ ಅಧಿಕಾರವಿಲ್ಲ. ಈ ಪ್ರಕರಣದಲ್ಲಿ ರಾಜ್ಯಪಾಲರ ಅಭಿಯೋಜನೆಗೆ ನೀಡುವ ಅಧಿಕಾರ ಸಾಂವಿಧಾನಿಕ ವಿಷಯವಾಗಿದೆ. ಈ ರೀತಿ ಮುಖ್ಯಮಂತ್ರಿ, ಸಚಿವರನ್ನು ಅಭಿಯೋಜನೆಗೆ ಒಳಪಡಿಸಿದರೆ ಗೊಂದಲದ ಗೂಡಗಲಿದೆ ಎಂದು ವಾದಿಸಿದರು.
ಸಿದ್ದರಾಮಯ್ಯ ಅವರ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಯನ್ನು ಉಲ್ಲಂಘಿಸಿದ್ದಾರೆ ಎಂದು ವಾದಿಸಿದರು.