ಹಾವೇರಿ: ಮುಡಾ ಭೂ ಹಗರಣದ ತನಿಖೆಯನ್ನು ಲೋಕಾಯುಕ್ತದವರು ಒತ್ತಡದಲ್ಲಿ ಮಾಡುತ್ತಿದ್ದಾರೆ. ಯಾವ ಪ್ರಶ್ನೆಗೆ ಏನು ಉತ್ತರ ಕೊಡಬೇಕು ಎನ್ನುವುದು ಮೊದಲೇ ಸಿದ್ದವಾಗಿದೆ. ಲೋಕಾಯುಕ್ತ ಕ್ಲೀನ್ ಚೀಟ್ ಕೊಟ್ಟರೂ ಸಿದ್ದರಾಮಯ್ಯ ಗಂಡಾಂತರದಿಂದ ಪಾರಾಗಲು ಸಾಧ್ಯವಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಬಂಕಾಪುರದಲ್ಲಿ ಬುಧವಾರ(ನ) ಸುದ್ದಿಗಾರರೊಂದಿಗೆ ಮಾತನಾಡಿ ‘ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಆರೋಪಿ ನಂಬರ್ 1. ಅವರ ಅಕ್ಕಪಕ್ಕದಲ್ಲಿ ಜಮೀರ್ ಇರಬೇಕು ಇಲ್ಲದಿದ್ದರೆ ಭ್ರಷ್ಟರು ಇರಬೇಕು. ಚುನಾವಣೆ ಸಂದರ್ಭದಲ್ಲಿ ಸಿಎಂ ಗೆ ನೋಟಿಸ್ ಕೊಟ್ಟಿದ್ದಾರೆ. ತತ್ ಕ್ಷಣ ಸಿಎಂ ವಿಚಾರಣೆಗೆ ಹೋಗಿ ಬಂದಿದ್ದಾರೆ. ಲೋಕಾಯುಕ್ತದವರಿಗೆ ಸಿಎಂ ಭಯ ಕಾಡುತ್ತಿದೆ. ಎಷ್ಟು ಬೇಗ ಸಿಎಂಗೆ ರಿಲೀಫ್ ಕೊಡಬೇಕು, ಬಿ ರಿಪೋರ್ಟ್ ಹಾಕಬೇಕು ಎಂದು ಲೋಕಾಯುಕ್ತ ತನಿಖೆ ಸಾಗುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದರು.
ಸಿದ್ದರಾಮಯ್ಯನವರು ಸಿಎಂ ಆಗಿ ಎರಡು ವರ್ಷ ಆಯಿತು. ಹಿಟ್ ಆ್ಯಂಡ್ ರನ್ ಮಾಡುವ ಅವಶ್ಯಕತೆ ಇಲ್ಲ, ಇಷ್ಟು ದಿನ ಏನು ಮಾಡುತ್ತಿದ್ದರು? ವಕ್ಪ್ ವಿಚಾರದಲ್ಲಿ ರೈತರ ಜಮೀನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿರುವವರು ನಿಮ್ಮ ಪಕ್ಷದಲ್ಲಿಯೆ ಇದ್ದಾರೆ. ಪ್ರಮಾಣಿಕತೆ ಇದ್ದರೆ ತನಿಖೆ ಮಾಡಿಸಿ, ದಾಖಲೆ ಇದ್ದರೆ ಬಿಡುಗಡೆ ಮಾಡಿ. ಸಿಎಂ ಸಿದ್ದರಾಮಯ್ಯ ಬಂಡರಿದ್ದು, ಅವರಿಗೆ ಆತಂಕ ಕಾಡುತ್ತಿದೆ, ಅವರ ಗೌರವ ಬಟಾ ಬಯಲಾಗಿದೆ. ಪ್ರಾಮಾಣಿಕರು ಎಂದು ಬಿಂಬಿಸಿಕೊಳ್ಳುತ್ತಿದ್ದರು. ಈಗ ವಿಚಲಿತರಾಗಿ ನಡೆದುಕೊಳ್ಳುತ್ತಿದ್ದಾರೆ. ಎಷ್ಟು ಬೇಗ ಕ್ಲೀನ್ ಚೀಟ್ ಸಿಗುತ್ತದೆ ಎಂದು ಕಾಯುತ್ತಿದಾರೆ” ಎಂದು ತೀವ್ರ ವಾಗ್ದಾಳಿ ನಡೆಸಿದರು.
‘ಭ್ರಷ್ಟ ಮುಖ್ಯಮಂತ್ರಿ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ಸಿಎಂ ಕೆಳಗಿಳಿಸಲು ಆಡಳಿತ ಪಕ್ಷದಲ್ಲೇ ಮುಹೂರ್ತ ಫಿಕ್ಸ್ ಆಗಿದೆ. ನಾನು ಹುಡುಗಾಟಿಕೆಗೆ ಈ ಮಾತಾಡುತ್ತಿಲ್ಲ. ಅವತ್ತೂ ಸವಾಲು ಹಾಕಿದ್ದೆ ಇವತ್ತೂ ಸವಾಲು ಹಾಕುತ್ತೇನೆ. ಸಿಎಂ ಐದು ವರ್ಷ ಅವಧಿ ಪೂರ್ಣ ಮಾಡುತ್ತೇನೆ ಎಂದು ಹೇಳಲಿ. ಅದು ಅಸಾಧ್ಯ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕಾಂಗ್ರೆಸ್ ಹೈಕಮಾಂಡ್ ಮುಹೂರ್ತ ಫಿಕ್ಸ್ ಮಾಡಿದೆ’ ಎಂದರು.
‘ಸಿದ್ದರಾಮಯ್ಯ ಹಿಂದೆ ಸಿಎಂ ಆಗಿದ್ದಾಗ ವಾಚ್ ಪ್ರಕರಣದಲ್ಲಿ ಏನಾಯ್ತು? ಲೋಕಾಯುಕ್ತ ತನಿಖೆಯಲ್ಲಿ ಪ್ರಾಮಾಣಿಕರು ಎಂದು ಕ್ಲೀನ್ ಚೀಟ್ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಿದಾರೆ. ಪ್ರಕರಣ ಇಷ್ಟೋತ್ತಿಗಾಗಲೇ ಸಿಬಿಐ ತನಿಖೆಗೆ ಕೊಡಬೇಕಿತ್ತು’ ಎಂದರು.