ಬೆಂಗಳೂರು: ಮುಡಾ ಪ್ರಕರಣದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ನೀಡಿರುವ ಅನುಮತಿ ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಸೋಮವಾರ (ಸೆ.02) ದೂರುದಾರರ ಪರ ವಕೀಲರ ವಾದವನ್ನು ಆಲಿಸಿ, ಮತ್ತೆ ಸೆಪ್ಟೆಂಬರ್ 9ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯಗೆ ಸೆ.9ರವರೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ರಾಜ್ಯಪಾಲರ ನಿರ್ಧಾರ ಸರಿ ಇದೆ: ವಕೀಲ ಕೆಜಿ ರಾಘವನ್
ಮುಡಾ ಪ್ರಕರಣದ ಕುರಿತು ಇಂದು ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರಾದ ಕೆಜಿ ರಾಘವನ್, 1998ರಲ್ಲಿ ಮುಡಾ ಭೂಸ್ವಾಧೀನವಾಗಿದ್ದು, 2017ರಲ್ಲಿ 50:50 ಅನುಪಾತದಲ್ಲಿ ಭೂಮಿ ಹಂಚಿಕೆಗೆ ಸರ್ಕಾರ ಸಮ್ಮತಿ ನೀಡಲು ನಿರ್ಣಯ ಅಂಗೀಕರಿಸಿತ್ತು. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು. 2022ರಲ್ಲಿ 50:50ರ ಅನುಪಾತದಲ್ಲಿ ಸಿಎಂ ಪತ್ನಿಗೆ 14 ಸೈಟ್ ಹಂಚಿಕೆ ಮಾಡಲಾಗಿದೆ. ಸಿಎಂ ಪತ್ನಿಗೆ ಬೇಕಾದಂತೆ ನಿಯಮ ಬದಲಾವಣೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಸಿಎಂಗೆ ಏನಾದರು ಸಂಬಂಧ ಇದೆಯಾ ಎಂಬ ಜಡ್ಜ್ ನಾಗಪ್ರಸನ್ನ ಅವರ ಪ್ರಶ್ನೆಗೆ, ಹೌದು ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದು ಸ್ಷಷ್ಟವಾಗಿದೆ. 1998ರ ಭೂಸ್ವಾಧೀನಕ್ಕೆ 2015ರ ಡಿನೋಟಿಫಿಕೇಶನ್ ಅನ್ವಯಿಸಲಾಗಿದೆ. ಮಾಲೀಕರೇ ಅಲ್ಲದವರಿಗೆ ಡಿನೋಟಿಫಿಕೇಶನ್ ಮಾಡಿಕೊಡಲಾಗಿದೆ. ತನಿಖೆ ನಡೆಸಲು ಇನ್ನೆಷ್ಟು ಸಂಗತಿ ಬೇಕು.. ಮುಡಾ ಹಗರಣ ಸಂಬಂಧ ಸರ್ಕಾರ ಆಯೋಗ ರಚನೆ ಮಾಡಿದೆ. ಆದರೆ ಸಿಎಂ ಪತ್ನಿಯ ವಿಚಾರಣೆ ನಡೆಸಿಲ್ಲ. ಹೀಗಾಗಿ ರಾಜ್ಯಪಾಲರು ಅನುಮತಿ ನೀಡಿರುವುದು ಸರಿಯಾಗಿದೆ. ತನಿಖೆಯ ಅವಶ್ಯಕತೆ ಇದೆ ಎಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಾದ ಮಂಡಿಸಿದರು.
ಎಜಿ ಮನವಿ ಮೇರೆಗೆ ವಿಚಾರಣೆ ಮುಂಡೂಡಿಕೆ:
ವಾರಾಂತ್ಯದಲ್ಲಿ ಸಾಲು, ಸಾಲು ರಜೆ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲಾವಕಾಶ ನೀಡಬೇಕೆಂದು ಎಜಿ ಶಶಿಕಿರಣ್ ಶೆಟ್ಟಿ ಹೈಕೋರ್ಟ್ ಪೀಠದಲ್ಲಿ ಮನವಿ ಮಾಡಿಕೊಂಡರು.
ವಿಚಾರಣಾ ನ್ಯಾಯಾಲಯದ ಕಲಾಪ ದೀರ್ಘಕಾಲ ಮುಂಡೂಡುವುದು ಸೂಕ್ತವಲ್ಲ. ನೀವು ಹಲವು ಸಂಪುಟಗಳ ದಾಖಲೆ ನೀಡಿದ್ದೀರಿ. ನಾನು ಎಲ್ಲವನ್ನು ಪರಿಶೀಲಿಸಿಬೇಕಿದೆ. ಹೀಗಾಗಿ ನೀವು ಶೀಘ್ರ ವಾದ ಮಂಡನೆ ಮುಗಿಸಬೇಕು ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು. ಸೆಪ್ಟೆಂಬರ್ 9ರಂದು ವಾದ ಮಂಡಿಸುವುದಾಗಿ ಎಜೆ ಶಶಿಕಿರಣ್ ಶೆಟ್ಟಿ ತಿಳಿಸಿದ್ದು, ಸೆ.12 ಅಥವಾ 21ರಂದು ವಾದಿಸುವುದಾಗಿ ಸಿದ್ದರಾಮಯ್ಯ ಪರ ವಕೀಲರಾದ ಸಿಂಘ್ವಿ ತಿಳಿಸಿದ್ದು, ಸೆಪ್ಟೆಂಬರ್ 9ರ ಮಧ್ಯಾಹ್ನ 2.30ಕ್ಕೆ ಮತ್ತೆ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.