ಬೆಂಗಳೂರು: ಮುಡಾ ಪ್ರಕರಣದಲ್ಲಿ ಖಾಸಗಿ ದೂರು ಆಧರಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡುತ್ತಿದ್ದಂತೆ ರಾಜ್ಯಾದ್ಯಂತ ನಡೆಸಿದ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ರಾಜ್ಯಪಾಲರು ಮಾಡಿರುವ ಕೆಲಸ ವನ್ನು ನಮ್ಮ ನಾಯಕರು ಟೀಕಿಸಿದರೆ ಅವರನ್ನು ಅವಮಾನಿಸಿದಂತೆ ಆಗುತ್ತ ದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿ ದರೆ, ರಾಜ್ಯಪಾಲರು ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸಿಗರು ದೂರುತ್ತಿದ್ದಾರೆ ಎನ್ನುವುದು ಸುಳ್ಳು ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯಪಾಲರ ಕ್ರಮವನ್ನು ನಮ್ಮ ನಾಯಕರು ಟೀಕಿಸಿದ್ದಾರೆ ಅಷ್ಟೇ ಎಂದು ಸಮರ್ಥಿಸಿಕೊಂಡರು.
“ರಾಜ್ಯಪಾಲರ ಹುದ್ದೆ ಸಾಂವಿಧಾನಿಕ ವಾದುದು, ಅದರ ಬಗ್ಗೆ ಗೌರವ ಇದೆ. ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಕೆಲಸ ಮಾಡಬೇಕು ಎಂದು ನಾವು ಹೇಳುತ್ತೇವೆ. ಅವರು ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಕೆಲಸ ಮಾಡುವುದು ಬೇಡ. ನನ್ನ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ತಾರತಮ್ಯ ಎಸಗಿದ್ದಾರೆ’ ಎಂದು ಸಿಎಂ ಆರೋಪಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯಪಾಲರು ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸಿಗರು ದೂರುತ್ತಿದ್ದಾರೆ ಎನ್ನುವುದು ಸುಳ್ಳು ಆರೋಪ. ರಾಜ್ಯಪಾಲರನ್ನು ಕಾಂಗ್ರೆಸ್ ಆ ಹುದ್ದೆಗೆ ಏರಿಸಿಲ್ಲ. ಸಂವಿಧಾನ ಆ ಕೆಲಸ ಮಾಡಿದೆ. ಯಾವುದೇ ಜಾತಿಯ ಆಧಾರದಲ್ಲಿ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ರಾಜ್ಯಪಾಲರನ್ನಾಗಿ ಮಾಡಿಲ್ಲ. ಇಂತಹ ಸಣ್ಣತನವನ್ನು ಬಿಜೆಪಿ ನಾಯಕರು ಬಿಡಬೇಕು ಎಂದು ತಿರುಗೇಟು ನೀಡಿದ್ದಾರೆ.