ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಹೈಕೋರ್ಟ್ ತೀರ್ಪು ನೀಡಿದೆ. ಹಾಗಾಗಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್ ನಗರ ಘಟಕದ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ಕೈಯಲ್ಲಿ ಹಲವು ಫಲಕಗಳನ್ನು ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಸಿದ್ದರಾಮಯ್ಯ ಹೈಕೋರ್ಟ್ ಆದೇಶವನ್ನು ಧಿಕ್ಕರಿಸದೆ ಕೂಡಲೇ ರಾಜೀನಾಮೆ ಸಲ್ಲಿಸಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಸಿದ್ದರಾಮಯ್ಯನವರ ಪತ್ನಿ ಹೆಸರಿಗೆ ಮುಡಾದ 2 ನಿವೇಶನಗಳ ಬದಲಾಗಿ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಇಲ್ಲಿ ಅವರ ಪ್ರಭಾವವಿದೆ. ಈ ಬಗ್ಗೆ ಸಮಗ್ರ ತನಿಖೆ ಅಗತ್ಯವಿದೆ ಎಂದರು.
ಮೇಲ್ಮನೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಟಿ.ಎ. ಶರವಣ ಮಾತನಾಡಿ, ಸಿದ್ದರಾಮಯ್ಯಗೆ ಹೈಕೋರ್ಟ್ ಛೀಮಾರಿ ಹಾಕಿದೆ. ರಾಜೀನಾಮೆ ಕೊಡದೇ ಬೇರೆ ದಾರಿಯೇ ಇಲ್ಲ ಎಂದು ಹೇಳಿದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ರಮೇಶ್ ಗೌಡ ಮಾತನಾಡಿ, ಸಿದ್ದರಾಮಯ್ಯ ಭಂಡತನ ಬಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ವಿಧಾನಸೌಧ ಚಲೋಗೆ ಮುಂದಾದ ಕಾರ್ಯಕರ್ತರು ಹಾಗೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದರು.