ಬೆಂಗಳೂರು: ರಾಜ್ಯ ರಾಜ ಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಮೈಸೂರಿನ ಮುಡಾ ನಿವೇಶನ ಹಂಚಿಕೆ ವಿವಾದ ಸಂಬಂಧ ರಾಜ್ಯಪಾಲರು ನೀಡಿ ರುವ ವಿಚಾರಣೆಗೆ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ಗುರುವಾರ ಮತ್ತೆ ವಿಚಾರಣೆಗೆ ಬರಲಿದ್ದು, ಆಡಳಿತ ಹಾಗೂ ವಿಪಕ್ಷದ ನಾಯಕ ರನ್ನು ತುದಿಗಾಲ ಮೇಲೆ ನಿಲ್ಲಿಸಿದೆ.ಟಿ.ಜೆ. ಅಬ್ರಾಹಂ, ಸ್ನೇಹಮಯಿ ಕೃಷ್ಣ, ಪ್ರದೀಪ್ ಅವರು ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಖಾಸಗಿ ದೂರು ಸಲ್ಲಿಸಿದ್ದರು.
ಅದರ ಅನ್ವಯ ಸಿದ್ದರಾಮಯ್ಯ ವಿರುದ್ಧ ಸಮರ್ಪಕ ತನಿಖೆ ಅಗತ್ಯವಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ಆದರೆ ಸಂಪುಟದ ಸಲಹೆಯನ್ನು ಧಿಕ್ಕರಿಸಿ ಸೆಕ್ಷನ್ 17 (ಎ) ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 128 ಅನ್ವಯ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ ಎಂದು ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ ಪರ ಸುಪ್ರೀಂ ಕೋರ್ಟ್‌ನ ಖ್ಯಾತ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದು, ರಾಜ್ಯಪಾಲರ ಪರವಾಗಿ ಕೇಂದ್ರ ಸರಕಾರದ ಸಾಲಿಸಿಟ್ ಜನರಲ್ ತುಷಾರ್ ಮೆಹ್ತಾ ಪ್ರತಿನಿಧಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿನ ವಿಶೇಷ ಪೀಠದಲ್ಲಿ ನ್ಯಾ| ನಾಗಪ್ರಸನ್ನ ಈ ಪ್ರಕರಣದ ವಿಚಾರಣೆ ನಡೆಸಲಿದ್ದು, ಭಾರೀ ಕಾನೂನು ಸಮರದ ನಿರೀಕ್ಷೆ ಇದೆ. ಸಿದ್ದರಾಮಯ್ಯ ಪಾಲಿಗೆ ಗುರುವಾರ ಅತ್ಯಂತ ಮಹತ್ವದ ದಿನವಾಗಿದೆ.
ಏನಿದು ಪ್ರಕರಣ?
-ಮೈಸೂರಿನ ಕೆಸರೆ ಗ್ರಾಮದಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಲ್ಲಿ ಇದ್ದ 3.16 ಎಕರೆ ಜಾಗ
-ಅಭಿವೃದ್ಧಿಗಾಗಿ ವಶಕ್ಕೆ ಪಡೆದಿದ್ದ ಮುಡಾ
-ಪರ್ಯಾಯವಾಗಿ ಮೈಸೂರಿನ ವಿಜಯನಗ ರದಲ್ಲಿ ಪಾರ್ವತಿಗೆ 14 ನಿವೇಶನ ಮಂಜೂರು
-ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವಬೀರಿದ್ದಾರೆಂಬ ಆರೋಪ
-ರಾಜ್ಯಪಾಲರಿಂದ ಸಿಎಂ ವಿಚಾರಣೆಗೆ ಅನುಮತಿ. ರದ್ದತಿಗೆ ಸಿದ್ದರಾಮಯ್ಯರಿಂದ ಪ್ರತಿ ಅರ್ಜಿ