Advertisement

ಇಲ್ಲಿನ ಸಂಚಾರವೇ ಬಹು ದೊಡ್ಡ ಸಾಹಸ!

09:55 AM Aug 01, 2022 | Team Udayavani |

ಪುತ್ತೂರು: ಈ ರಸ್ತೆಯಲ್ಲಿ ಮಳೆಗಾಲದಲ್ಲಿ ಸಂಚರಿಸುವುದೆಂದರೆ ದೇವರೇ ಕಾಪಾಡಬೇಕು ಅನ್ನುವ ಸ್ಥಿತಿ. ಆದರೂ ಹಲವು ದಶಕಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ದುಸ್ಥಿತಿ ಇಲ್ಲಿನ ನಿವಾಸಿಗಳದ್ದು!

Advertisement

ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಸಂಪರ್ಕ ರಸ್ತೆಯ ಹಲವು ದಶಕಗಳ ಗೋಳು ಇದು. ರಸ್ತೆ ಅಭಿವೃದ್ಧಿ ಅನ್ನುವುದು ಬರೀ ಭರವಸೆಯ ಮಾತಾಗಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ ಅನ್ನುವ ಆಕ್ರೋಶ ಸ್ಥಳೀಯರದ್ದು.

ದೇವಾಲಯದ ಸಂಪರ್ಕ ರಸ್ತೆ

ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯ, ಕಂಡಿಪ್ಪಾಡಿ, ಸಂಕೇಶ, ಪೂವಾಜೆ ಮೊದಲಾದ ಭಾಗಗಳಿಗೆ ಸಂಪರ್ಕ ರಸ್ತೆ ಇದಾಗಿದೆ. ಹಲವು ದಶಕಗಳಿಂದ ಈ ರಸ್ತೆ ಅಭಿವೃದ್ಧಿಗೆ ಸ್ಥಳೀಯರು ಬೇಡಿಕೆ ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ. ನೀರ್ಕಜೆ ಯಿಂದ ಕವಲೊಡೆದಿರುವ ಈ ರಸ್ತೆಗೆ ಕುಡ್ತಡ್ಕದಿಂದ-ಜಾಲ್ಪನೆ ತನಕ ಅರ್ಧ ಡಾಮರು, ಅರ್ಧ ಕಾಂಕ್ರೀಟ್‌ ಕಾಮಗಾರಿ ಆಗಿದೆ. ಜಾಲ್ಪನೆ ಕೊರಗರ ಕಾಲನಿಯಿಂದ ಸ್ವಲ್ಪ ದೂರ ಕಲ್ಲು ತುಂಬಿರುವ ಕಚ್ಚಾ ರಸ್ತೆ, ಅನಂತರ ಕುವೆತಡ್ಕ ತನಕ ಶಾಸಕರ ಅನುದಾನದಲ್ಲಿ ಕಾಂಕ್ರೀಟ್‌ ಆಗಿದೆ. ಅಲ್ಲಿಂದ ದೇವಾಲಯದ ತನಕ 1 ಕಿ.ಮೀ. ಮಣ್ಣಿನ ರಸ್ತೆ ಇದೆ.

ಮಳೆಗಾಲದಲ್ಲಿ ಜಾರು ಬಂಡಿ

Advertisement

ಮಳೆಗಾಲ ಬಂತೆಂದರೆ ಕುವೆತಡ್ಕದಿಂದ ಪೆರುವೋಡಿ ದೇವಾಲಯದ ತನಕ ರಸ್ತೆ ಜಾರು ಬಂಡಿಯಾಗಿ ಬದಲಾಗುತ್ತದೆ. ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡು ರಸ್ತೆ ದಾಟಿಸುವ ಸ್ಥಿತಿ ಇದೆ. ಇಂತಹ ಪರಿಸ್ಥಿತಿ ಹಲವು ಬಾರಿ ಎದುರಾಗಿದೆ. ಕೃಷಿಕರೇ ಹೆಚ್ಚಾಗಿ ಇರುವ ಇಲ್ಲಿ ಕೃಷಿ ಉತ್ಪನ್ನ ಸಾಗಾಟಕ್ಕೆ ಪರದಾಡುವ ಪರಿಸ್ಥಿತಿ ಇದೆ. ದೇವಾಲಯಕ್ಕೆ ಬರುವ ಭಕ್ತರಿಗೂ ಸಂಚಾರ ಸವಾಲಾಗಿದೆ. ಈ ರಸ್ತೆಯ ಕಂಡಿಪ್ಪಾಡಿ ತಿರುವಿನ ಕುವೆತಡ್ಕ ಬಳಿ ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಯಲ್ಲಿ ತುಂಬಿ ನಡೆದಾಡಲು ಸಾಧ್ಯವಾಗದ ಸ್ಥಿತಿ ಉಂಟಾಗುತ್ತದೆ. ವಾಹನಗಳು ಇಲ್ಲಿ ಹೂತು ಹೋಗಿ ಎಳೆದೊಯ್ದ ಅನೇಕ ನಿದರ್ಶನಗಳು ಇವೆ. ಇಕ್ಕೆಲಗಳಲ್ಲಿ ಮಳೆ ನೀರು ಹರಿಯುವ ಚರಂಡಿ ನಿರ್ಮಿಸಿ ಮೋರಿ ಅಳವಡಿಸಬೇಕಿದೆ. ಆ ಬಗ್ಗೆ ಕೂಡ ಗಮನ ಹರಿಸಿಲ್ಲ.

ಅನುದಾನ ಭರವಸೆಯಷ್ಟೇ

ಅನುದಾನ ಅನ್ನುವುದು ಇಲ್ಲಿ ಭರವಸೆ ಗಷ್ಟೇ ಸೀಮಿತ. ಅದು ಕಾರ್ಯರೂಪಕ್ಕೆ ಬಂದಿಲ್ಲ. ಲಕ್ಷಗಟ್ಟಲೆ ರೂಪಾಯಿ ಅನುದಾನ ಇದೆ ಎನ್ನುತ್ತಾರೆ. ಇಂತಹ ಆಶ್ವಾಸನೆಗೆ ಹಲವು ವರ್ಷಗಳು ಕಳೆದಿವೆ. ಆದರೆ ಅಭಿವೃದ್ಧಿ ಆಗಿಲ್ಲ ಅನ್ನುತ್ತಾರೆ ಸ್ಥಳೀಯರು.

ಸವಾಲಿನ ಸಂಚಾರ

ಕೊರಗ ಸಮುದಾಯದ ಹಲವು ಕುಟುಂಬಗಳು ಜಾಲ್ಪಣೆಯಲ್ಲಿ ವಾಸಿಸುತ್ತಿದ್ದು ಅವರಿಗೇ ಇದೇ ರಸ್ತೆ ಸಂಪರ್ಕ ರಸ್ತೆಯಾಗಿದೆ. ಈ ಭಾಗದಿಂದ ಬೆಳ್ಳಾರೆ, ಕಾಣಿಯೂರು, ಸುಳ್ಯ, ಪುತ್ತೂರು ತಾಲೂಕಿನ ವಿದ್ಯಾಸಂಸ್ಥೆಗಳಿಗೆ ವಿದ್ಯಾರ್ಥಿಗಳು ಹೋಗುತ್ತಿದ್ದು ದೈನಂದಿನ ಸಂಚಾರ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ ಎನ್ನುತ್ತಾರೆ ರಸ್ತೆ ಫ‌ಲಾನುಭವಿ ರಮೇಶ್‌ ಕುವೆತಡ್ಕ

Advertisement

Udayavani is now on Telegram. Click here to join our channel and stay updated with the latest news.

Next