Advertisement

ಮಟ್ಟು ಗ್ರಾಮಸ್ಥರಿಗೆ ಮಳೆಗಾಲದ ನೆರೆ ಭೀತಿ

12:29 PM May 06, 2022 | Team Udayavani |

ಕಟಪಾಡಿ: ಮಳೆಗಾಲ ಸಮೀಪಿಸು ತ್ತಿದ್ದಂತೆ ಮಟ್ಟು ಭಾಗದ ಗ್ರಾಮಸ್ಥರು, ಕೃಷಿಕರು ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಗೆ ಹೆಸರುವಾಸಿಯಾಗಿರುವ ಮಟ್ಟು ಗ್ರಾಮವು ಸದಾ ನೆರೆ ಪೀಡಿತ ಪ್ರದೇಶವಾಗಿ ಗುರುತಿಸಿಕೊಳ್ಳುತ್ತಿದ್ದು ಇಲ್ಲಿ ಹರಿಯುತ್ತಿರುವ ಪಿನಾಕಿನಿ ಹೊಳೆಯು ತನ್ನ ಹರಿಯುವ ಪಥವನ್ನು ಬದಲಿಸಿ ಕೃಷಿ ಗದ್ದೆಗಳು, ತೋಟಗಳು, ಮನೆಗಳತ್ತ ನುಗ್ಗಿ ಬರಲಿದೆ ಎಂಬ ಭೀತಿ ಈ ಪ್ರದೇಶದ ಜನತೆಯನ್ನು ಕಾಡುತ್ತಿದೆ.

Advertisement

ಮಟ್ಟು ಗ್ರಾಮದ ರಾಜಪಥವಾಗಿ ತೆರೆದು ಕೊಳ್ಳಬೇಕಿದ್ದ ಮಟ್ಟು ನೂತನ ಸೇತುವೆಯ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಸೇತುವೆ ನಿರ್ಮಾಣಕ್ಕಾಗಿ ಹೊಳೆಯನ್ನು ಮಣ್ಣಿನಿಂದ ತುಂಬಿಸಲಾಗಿದೆ, ಪಿನಾಕಿನಿ ಹೊಳೆಯ ನೀರು ಸರಾಗವಾಗಿ ಹರಿಯದಂತೆ ತಡೆಯೊಡ್ಡಲಾಗಿದೆ.

ನಿರ್ಮಾಣಗೊಂಡ ಸೇತುವೆಯ ಕೆಲವು ಕಿಂಡಿಗಳ ತಳಭಾಗದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಇನ್ನುಳಿದಂತೆ ಸುಮಾರು 4 ಕಿಂಡಿಗಳ ಭಾಗದಲ್ಲಿ ತುಂಬಿಸಿರುವ ಮಣ್ಣನ್ನು ತೆರವುಗೊಳಿಸಿಲ್ಲ.

ಹಾಗಾಗಿ ಈ ಬಾರಿಯ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಮಟ್ಟು ಪಿನಾಕಿನಿ ಹೊಳೆಯಲ್ಲಿ ಹರಿಯಬೇಕಾದ ನೀರು ನದಿತಟವನ್ನು ದಾಟಿ ಗದ್ದೆ, ತೋಟಗಳತ್ತ ಹಾಗೂ ವಾಸ್ತವ್ಯದ ಮನೆಗಳತ್ತ ಮುನ್ನುಗ್ಗಲಿದೆ ಎಂಬ ಭೀತಿ ತೀರದ ನಿವಾಸಿಗಳದ್ದು. ಅದರೊಂದಿಗೆ ಕೃಷಿ ಹಾನಿಯಾಗುವ, ತೋಟಗಾರಿಕೆ ಬೆಳೆಯು ವಿನಾಶದತ್ತ ಸಾಗುವ ಭೀತಿಯನ್ನು ವ್ಯಕ್ತಪಡಿಸುತ್ತಿದ್ದು, ಹಳ್ಳ ಹಿಡಿಯುತ್ತಿರುವ ಬೃಹತ್‌ ಯೋಜನೆಯ ಇಂತಹ ಅವ್ಯವಸ್ಥೆಯ ವಿರುದ್ಧ ಆಕ್ರೋಶವನ್ನು ಕೃಷಿಕರು ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಎಂಜಿನಿಯರ್‌, ಸ್ಥಳಕ್ಕಾಗಮಿಸಿದ್ದ ಕೆಆರ್‌ಡಿಸಿಎಲ್‌ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದರೂ ಕೊಟ್ಟಿದ್ದ ಮಣ್ಣು ತೆರವಿನ ಭರವಸೆ ಪೊಳ್ಳಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜಿಲ್ಲಾಡಳಿತ ಎಚ್ಚೆತ್ತು ಸೇತುವೆ ನಿರ್ಮಾಣಕ್ಕಾಗಿ ತಳಭಾಗದಲ್ಲಿ ಹೊಳೆಯನ್ನು ಮುಚ್ಚಿದ ಮಣ್ಣನ್ನು ತೆರವುಗೊಳಿಸುವಂತೆ ಸ್ಥಳೀಯರು, ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Advertisement

ಮಣ್ಣನ್ನು ತೆರವುಗೊಳಿಸಿ

ಸೇತುವೆ ನಿರ್ಮಾಣದ ಹಂತದಲ್ಲಿ ಸಾಕಷ್ಟು ಭಾರಿ ನೆರೆಪೀಡಿತವಾಗಿದ್ದರೂ ಬೃಹತ್‌ ಯೋಜನೆಯ ಅನುಷ್ಠಾನಕ್ಕಾಗಿ ಸೈರಿಸಿಕೊಂಡು, ಬೆಳೆ ನಷ್ಟವನ್ನು ಅನುಭವಿಸಿಕೊಂಡು ಸಂಕಷ್ಟ ಪಟ್ಟ ರೈತರು, ಸಂತ್ರಸ್ತರು ಇದೀಗ ತಾಳ್ಮೆಯನ್ನು ಕಳೆದುಕೊಂಡಿರುತ್ತಾರೆ. ಕೂಡಲೇ ಸೇತುವೆ ತಳಭಾಗದಲ್ಲಿ ಪೇರಿಸಿಟ್ಟ ಮಣ್ಣನ್ನು ತೆರವುಗೊಳಿಸಿ ಪಿನಾಕಿನಿ ಹೊಳೆಯ ಸರಾಗ ಹರಿಯುವಿಕೆಗೆ ಅವಕಾಶ ಮಾಡಿಕೊಡಬೇಕಾದ ಆವಶ್ಯಕತೆ ಇದೆ. ಇಲ್ಲವಾದಲ್ಲಿ ಮಳೆಗಾಲದಲ್ಲಿ ಸಂಭಾವ್ಯ ಅನಾಹುತಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳು, ಜಿಲ್ಲಾಡಳಿತವೇ ಹೊಣೆ ಹೊರಬೇಕಿದೆ. – ರತ್ನಾಕರ ಕೋಟ್ಯಾನ್‌, ರಮೇಶ್‌ ಪೂಜಾರಿ, ಸದಸ್ಯರು, ಕೋಟೆ ಗ್ರಾ.ಪಂ.

ನೆರೆ ಬಾಧೆಯಿಂದ ನಷ್ಟ

ಕಳೆದ 5 ವರ್ಷಗಳಿಂದ ಪ್ರಕೃತಿ ವಿಕೋಪ ಸಹಿತ ನೆರೆ ಬಾಧೆಯಿಂದ ಮಟ್ಟು ಹೊಳೆಯ ಭಾಗವು ನೆರೆ ಪೀಡಿತ ಪ್ರದೇಶವಾಗಿ ರೈತರು, ಬೆಳೆಗಾರರು ಸಾಕಷ್ಟು ನಷ್ಟವನ್ನು ಅನುಭವಿಸುವಂತಾಗಿತ್ತು. ಈ ಬಾರಿಯ ಮಳೆಗಾಲಕ್ಕೂ ಮುನ್ನವೇ ಅಧಿಕಾರಿಗಳು, ಜನಪ್ರತಿನಿಧಿಗಳು, ಜಿಲ್ಲಾಡಳಿತ ಎಚ್ಚೆತ್ತು ಮಟ್ಟು ಹೊಳೆಗೆ ತುಂಬಿಸಿಟ್ಟ ಮಣ್ಣನ್ನು ತೆರವುಗೊಳಿಸಿ ರೈತರು, ಸ್ಥಳೀಯರಿಗೆ ನೆಮ್ಮದಿಯ ವಾತಾವರಣ ಕಲ್ಪಿಸುವಂತೆ ಆಗ್ರಹಿಸುತ್ತಿದ್ದೇವೆ. – ಯಶೋಧರ, ಹರೀಶ್‌ ರಾಜು ಪೂಜಾರಿ, ಮಟ್ಟು, ಕೃಷಿಕರು

 ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next