ಗೌರಿಬಿದನೂರು: ಹೊಸ ತಳಿಯ ಮೆಣಸಿನಕಾಯಿ ಬೆಳೆಯ ಪ್ರಾತ್ಯಕ್ಷಿಕೆಯ ಬೆಳೆಯನ್ನು ಲಾಭದಾಯಕವಾಗಿ ಬೆಳೆ ಯುವ ಮೂಲಕ ಗೌರಿಬಿದನೂರು ತಾಲೂಕಿನ ಹೊಸೂರು ಹೋಬಳಿ ಆನೂಡಿಯ ಪ್ರಗತಿಪರ ರೈತ ನರಸಿಂಹಮೂರ್ತಿ ಇತರರ ರೈತರಿಗೆ ಮಾದರಿ ಹಾಗೂ ಪ್ರೇರಣೆಯಾಗಿ ಹೊರಹೊಮ್ಮಿದ್ದಾರೆ.
ಇತ್ತೀಚಿನ ದಶಕಗಳಲ್ಲಿ ಕೃಷಿ ಎಂದರೆ ಮೂಗುಮುರಿಯುವವರೇ ಹೆಚ್ಚು. ಶಿಕ್ಷಣ ನಂತರ ನಗರ ಪ್ರದೇಶದಲ್ಲಿ ಉದ್ಯೋಗಕ್ಕೆ ತಮ್ಮ ಮನೋಸ್ಥೈರ್ಯ ವನ್ನು ಹೊಂದಿಸಿಕೊಂಡಿರುವ ರೈತರು ಲಾಭದಾಯಕ ಬೆಳೆಗಳನ್ನು ಬೆಳೆಯುವ ಭರವಸೆಯನ್ನೇ ಕಳೆದುಕೊಂಡಿದ್ದಾರೆ ಎನ್ನಬಹುದು.
ಉತ್ತಮ ಲಾಭ: ಗೌರಿಬಿನದೂರು ತಾಲೂಕಿನಲ್ಲಿ ಕಳೆದ 20 ವರ್ಷಗಳಿಂದ ಸಮರ್ಪಕ ಮಳೆ ಬಾರದೇ, 1500 ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಬಾರದೇ ವ್ಯವಸಾಯ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ನರಸಿಂಹಮೂರ್ತಿ ಯವರು ಧೃತಿಗೆಡದೆ ತಮ್ಮ ಎರಡು ಎಕರೆ ಜಮೀನಿನಲ್ಲಿ ಹೊಸ ಮೆಣಸಿನ ಕಾಯಿ ತಳಿಯಾದ ದ್ಯೇಯ ಎಫ್-1 ಹೊಸ ಮಾದರಿಯ ತಳಿಯನ್ನು ಪ್ರಾತ್ಯಕ್ಷಿಕೆ ತಳಿಯಾಗಿ ಬೆಳೆದಿದ್ದು, ಉತ್ತಮ ಲಾಭ ನೀಡುತ್ತಿರುವ ಬಗ್ಗೆ ವಿವರಿಸಿದ್ದಾರೆ.
ಹೊಸ ತಳಿ ಬಿಡುಗಡೆ: 2007ರಲ್ಲಿ ಡೆಮನ್ (ಆಕಾಶ್ ಮೆಣಸಿನಕಾಯಿ ತಳಿ ಎಂದೂ ಕರೆಯುತ್ತಾರೆ) ಬಿಡುಗಡೆ ಮಾಡಿದಾಗ ಹೆಚ್ಚು ಹೆಚ್ಚು ರೈತರು ಇದನ್ನು ಬೆಳೆಯುತ್ತಿದ್ದರು. ಕ್ರಮೇಣ ವಾಗಿ ಈ ತಳಿಯನ್ನು ಮೆಣಸಿನಕಾಯಿ ಹಣ್ಣಾಗುವವರೆಗೂ ಬಿಡಿಸಲು ಆಗುತ್ತಿರ ಲಿಲ್ಲ. ಕೂಲಿ ಹೆಚ್ಚಾಗುತ್ತಿತ್ತು, ರೈತನಿಗೆ ನಷ್ಟವಾಗುತ್ತಿದ್ದರಿಂದ ಬೆಳೆಯುವುದನ್ನೇ ಕಡಿಮೆ ಮಾಡಿದ್ದರು. ಇದನ್ನು ಅರಿತ ಈಸ್ಟ್‌ವೆಸ್ಟ್ ಕಂಪನಿ 2019ರ ಹೊಸ ತಳಿಯನ್ನು ಬಿಡುಗಡೆ ಮಾಡಿದ್ದು, ಈ ತಳಿಯನ್ನು ನರಸಿಂಹೂರ್ತಿ ತಮ್ಮ ಜಮೀನಿನಲ್ಲಿ ಬೆಳೆದಿದ್ದು, ಲಾಭದಾಯಕವಾಗಿದೆ ಎಂದಿದ್ದಾರೆ.
ಈ ತಳಿಯ ವೈಶಿಷ್ಟ್ಯವೆಂದರೆ ಬುಡದಿಂದ ಸುಳಿಯವರೆಗೂ ಕಾಯಿ ಬಿಡುತ್ತದೆ. ಕಾಯಿ ಕೆಳಕ್ಕೆ ಬಾಗುತ್ತದೆ. ಯಾವಾಗ ಬೇಕಾದರೂ ಕಾಯಿಯನ್ನು ಬಿಡಿಸಬಹುದು.
ನಾಟಿ ಮಾಡುವ ವಿಧಾನ: ಸಾಲಿನಿಂದ ಸಾಲಿಗೆ 3.5 ಅಡಿ ಮತ್ತು ಗಿಡದಿಂದ ಗಿಡಕ್ಕೆ 1.5 ಅಡಿ ಅಂತರ ಬಿಡಬೇಕು ಎನ್ನುವ ಅವರು, ಮೇ ತಿಂಗಳ ಭರಣಿ ಮಳೆಯಲ್ಲಿ ಇದನ್ನು ನಾಟಿ ಮಾಡಲು ಪ್ರಾರಂಭಿಸುತ್ತೇವೆ. ಎರಡು ತಿಂಗಳ ನಂತರ ಇಳುವರಿ ಪ್ರಾರಂಭವಾಗುತ್ತದೆ.
ಈಗಾಗಲೇ ಕೆ.ಜಿ.ಗೆ 60, 50 ಹಾಗೂ 40 ರೂ. ಲಾಭ ಸಿಗುತ್ತಿದು, ಐದು ತಿಂಗಳ ಕಾಲ ಬೆಳೆಯಬಹುದು. ಸುಮಾರು 5 ಟನ್ ಬೆಳೆ ಪಡೆಯಲಾಗಿದೆ. ಖರ್ಚುಗಳೆಲ್ಲವೂ ಸೇರಿ 1.5 ಲಕ್ಷ ವೆಚ್ಚ ಮಾಡಿದರೆ 3.5 ಲಕ್ಷ ನಿವ್ವಳ ಲಾಭ ಬರಲಿದ್ದು, 5 ಲಕ್ಷ ರೂ. ವಹಿವಾಟು ನಡೆಸಬಹುದಾಗಿದೆ ಎನ್ನುತ್ತಾರೆ ನರಸಿಂಹಮೂರ್ತಿ. ಹೊಸ ಮೆಣಸಿನಕಾಯಿ ತಳಿಯು ತಾಲೂಕಿನ ರೈತರಿಗೆ ಹೊಸ ಆದಾಯದ ಭರವಸೆಯನ್ನು ಮೂಡಿಸಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ
● ವಿ.ಡಿ.ಗಣೇಶ್