ಕ್ಯಾಲಿಫೋರ್ನಿಯ : 26ರ ಹರಯದ ತೆಲಂಗಾಣ ಮೂಲದ ವಿದ್ಯಾರ್ಥಿ ಮುಬೀನ್ ಆಹ್ಮದ್ ಎಂಬಾತನ ಮೇಲೆ ಕಳೆದ ಶನಿವಾರ ಇಲ್ಲಿ ಗುಂಡೆಸೆಯಲಾದ ಘಟನೆ ತಡವಾಗಿ ವರದಿಯಾಗಿದೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯವರಾದ ಮುಬೀನ್ ಅಹ್ಮದ್ ಗೆ ಗಂಭೀರ ಗಾಯವಾಗಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಮುಬೀನ್ ಸ್ಥಿತಿ ಚಿಂತಾಜನಕವಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆಯಲು ಮುಬೀನ್ ಅಹ್ಮದ್ 2015ರಲ್ಲಿ ಅಮೆರಿಕಕ್ಕೆ ಹೋಗಿದ್ದರು. ಖಾಸಗಿ ಸ್ಟೋರ್ ಒಂದರಲ್ಲಿ ಅವರು ತಾತ್ಕಾಲಿಕ ಉದ್ಯೋಗದಲ್ಲಿದ್ದು ಅಲ್ಲೇ ಅವರ ಮೇಲೆ ಗುಂಡೆಸೆಯಲಾಗಿದೆ.
ಈ ಘಟನೆ ನಡೆದದ್ದು ಜೂ.4ರಂದು ಸಂಜೆ ಆರು ಗಂಟೆಗೆ. ಜೂ.5ರಂದು ಮುಬೀನ್ ಅವರ ಕುಟುಂಬದವರಿಗೆ ಈ ವಿಷಯವನ್ನು ತಿಳಿಸಲಾಯಿತು. ಮುಬೀನ್ ಅವರ ತಂದೆ ಮುಜೀಬ್ ಅವರು ಮಾಧ್ಯಮಕ್ಕೆ ಹೇಳಿರುವುದು ಇಷ್ಟು : ಜೂನ್ 5ರಂದು ಆಸ್ಪತ್ರೆ ಅಧಿಕಾರಿಗಳು ನನಗೆ ಫೋನ್ ಮಾಡಿ ನಿಮ್ಮ ಮಗ ಐಸಿಯು ನಲ್ಲಿ ಇದ್ದಾನೆ; ಆತನ ಸ್ಥಿತಿ ಗಂಭೀರವಿದೆ’.
ಅಮೆರಿಕದಲ್ಲಿ ಭಾರತೀಯರು ಹತ್ಯೆಗೀಡಾಗುವುದು ಹೊಸದೇನಲ್ಲ; ಮೇ ತಿಂಗಳ ಆದಿಯಲ್ಲಿ ಅಮೆರಿಕದ ಮಿಶಿಗನ್‌ನಲ್ಲಿ ಭಾರತೀಯ ಅಮೆರಿಕನ್ ವೈದ್ಯ ಡಾ. ರಮೇಶ್ ಕುಮಾರ್ ಅವರು ತಮ್ಮ ಕಾರಿನಲ್ಲಿ ಶವವಾಗಿ ಪತ್ತೆಯಾಗಿರುವುದು ತಾಜಾ ಉದಾಹರಣೆಯಾಗಿದೆ.