Advertisement

ಎಂಟಿಬಿ ಸೈಕ್ಲಿಂಗ್ : ಸ್ಪರ್ಧಾಳು ಸಂಖ್ಯೆ ಹೆಚ್ಚಳ

07:19 PM Feb 18, 2021 | Team Udayavani |

ಗದಗ: 17ನೇ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ಗೆ ಸಮೀಪದ ಬಿಂಕದಕಟ್ಟಿ ಸಸ್ಯೋದ್ಯಾನದಲ್ಲಿ ಅಖಾಡ ಸಿದ್ಧವಾಗಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಎಂಟಿಬಿ ಸೈಕ್ಲಿಂಗ್‌ನಲ್ಲಿ ಸ್ಪರ್ಧಾಳುಗಳ ಸಂಖ್ಯೆ 400ರ ಗಡಿ ತಲುಪಿದ್ದರೆ, ವಿವಿಧ ಸೇನಾ ಪಡೆಗಳ ಮೂರು ತಂಡಗಳು ಹಾಗೂ 25  ರಾಜ್ಯಗಳ ಸೈಕ್ಲಿಸ್ಟ್‌ಗಳು ಆಗಮಿಸಿರುವುದು ಗಮನ ಸೆಳೆಯುತ್ತಿದೆ.

Advertisement

ರಾಜ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನ ಐತಿಹಾಸಿಕ ಕ್ಷಣಕ್ಕೆ ಇಲ್ಲಿನ ಬಿಂಕದಕಟ್ಟಿ ಸಸ್ಯೋದ್ಯಾನ ಸಾಕ್ಷಿಯಾಗುತ್ತಿದೆ. ಈ ಹಿಂದಿನ ಸ್ಪರ್ಧೆಗಳಲ್ಲಿ 300-350 ಇರುತ್ತಿದ್ದ ಸ್ಪರ್ಧಾಳುಗಳ ಸಂಖ್ಯೆ ಈ ಬಾರಿ 400 ಜನರು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ 386 ಸ್ಪರ್ಧಾಳುಗಳು ವಿವಿಧ ವಿಭಾಗಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಗುರುವಾರ ಸಂಜೆ ವೇಳೆಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. ಈ ಬಾರಿ ರಾಷ್ಟ್ರೀಯ ಎಂಟಿಬಿ ಸ್ಪರ್ಧೆಯಲ್ಲಿ ಸೈಕ್ಲಿಸ್ಟ್‌ಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿವೆ. ಲೇ-ಲಡಾಖ್‌, ತ್ರಿಪುರ, ಸಿಕ್ಕಿಂ, ಮೇಘಾಲಯ ರಾಜ್ಯಗಳ ಸ್ಪರ್ಧಾಳುಗಳು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಎಂಟಿಬಿ ಚಾಂಪಿಯನ್‌ ಶಿಪ್‌ಗೆ ಪ್ರವೇಶ ಪಡೆದಿದ್ದಾರೆ. ಇತರೆ ರಾಜ್ಯಗಳಿಂದಲೂ ಹೆಚ್ಚಿನ ಸ್ಪರ್ಧಾಳುಗಳು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಎಸ್‌ಎಸ್‌ಬಿ, ಭಾರತೀಯ ವಾಯುಪಡೆ ಹಾಗೂ ಆರ್ಮಿ ಅಡ್ವೆಂಚರ್‌ ವಿಂಗ್‌ ಪಡೆಗಳ ಸೈಕ್ಲಿಸ್ಟ್‌ಗಳು ಪಾಲ್ಗೊಂಡಿರುವುದು ವಿಶೇಷ.

ಯಾವ ರಾಜ್ಯದಿಂದ ಎಷ್ಟು ಜನ: ಈ ಪೈಕಿ ಕೇರಳಾ-40, ಹಿಮಾಚಲ ಪ್ರದೇಶ-24, ಹರ್ಯಾಣ-27, ಕರ್ನಾಟಕ-35, ಮಹಾರಾಷ್ಟ್ರ-35, ರಾಜಸ್ತಾನ್‌-34, ಜಮ್ಮು ಮತ್ತು ಕಾಶ್ಮೀರ-17, ಡಿಎಚ್‌ ರೈಡರ್‌-19, ಅರುಣಾಚಲ ಪ್ರದೇಶ, ಗುಜರಾತ್‌ನಿಂದ ತಲಾ 8, ಏರ್‌ ಫರ್ಸ್‌-7, ಆರ್ಮಿ ಅಡ್ವೆಂಚರ್‌ ವಿಂಗ್‌, ಎಸ್‌ಬಿ ಯಿಂದ ತಲಾ 6, ಮಧ್ಯಪ್ರದೇಶ, ಅಸ್ಸಾಂ, ಬಿಹಾರದಿಂದ ತಲಾ 4, ಜಾರ್ಖಂಡ್‌, ಲಡಾಕ್‌ (ಕೆಎಚ್‌)-2, ಸಿಎಫ್‌ಐ(ಎಪಿ) ಮತ್ತು ಸಿಎಫ್‌ ಐ(ಸಿಕ್ಕಿಂ)ನಿಂದ ತಲಾ ಒಬ್ಬರು ಈಗಾಗಲೇ ರಾಷ್ಟ್ರೀಯ ಎಂಟಿಬಿ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಕೆಲವರು ಕಳೆದ 15 ದಿನಗಳಿಂದ ಗದಗಿನಲ್ಲಿ ಸ್ವಂತ ಖರ್ಚಿನಲ್ಲೇ ಬೀಡುಬಿಟ್ಟಿದ್ದಾರೆ.

ಪ್ರತಿನಿತ್ಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಗುಡ್ಡಗಾಡು ಸೈಕ್ಲಿಂಗ್‌ ಸ್ಪರ್ಧೆಗೆ ತಾಲೀಮು ನಡೆಸುತ್ತಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ ಕನಸು ಹೊತ್ತಿರುವ ಸೈಕ್ಲಿಸ್ಟ್‌ಗಳು ದಿನಕ್ಕೆ ಐದಾರು ಗಂಟೆಗಳ ಕಾಲ ಸಾಲುಮರದ ತಿಮ್ಮಕ್ಕ ಉದ್ಯಾನದ ಬೆಟ್ಟದಲ್ಲಿ ಬೆವರು ಸುರಿಸುತ್ತಿದ್ದಾರೆ.

ದೇಶದಲ್ಲೇ ಅತ್ಯುತ್ತಮ ಟ್ರ್ಯಾಕ್‌!: ದೇಶದ ವಿವಿಧೆಡೆಯಿಂದ ಆಗಮಿಸಿರುವ ಸೈಕ್ಲಿಸ್ಟ್‌ಗಳು ಇಲ್ಲಿನ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಎಂಟಿಬಿ ಟ್ರ್ಯಾಕ್‌ ಅನ್ನು ಮೆಚ್ಚುಕೊಂಡಿದ್ದಾರೆ. ಕಳೆದ ಬಾರಿ ಉತ್ತರಾಖಂಡ್‌ನ‌ಲ್ಲಿ ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ನಡೆದಿತ್ತು. ಅಲ್ಲಿಗಿಂತಲೂ ಬಿಂಕದಕಟ್ಟಿಯ ಟ್ರ್ಯಾಕ್‌ ಅತ್ಯುತ್ತಮವಾಗಿದೆ. ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಗುರುತಿಸಿರುವ ಟ್ರ್ಯಾಕ್‌ ರಾಷ್ಟ್ರೀಯ ಸೈಕ್ಲಿಂಗ್‌ಗೆ ಹೇಳಿ ಮಾಡಿಸಿದಂತಿದೆ. ಹಲವೆಡೆ ದಿಬ್ಬ, ತಗ್ಗು, ಎತ್ತರ ಮತ್ತು ಇಳಿಜಾರು ಹೊಂದಿದ್ದು, ಸೈಕ್ಲಿಸ್ಟ್‌ಗಳಿಗೆ ಹೆಚ್ಚಿನ ಸವಾಲೊಡ್ಡಲಿದೆ. ಇದು ಸೈಕ್ಲಿಸ್ಟ್‌ಗಳ ಪ್ರತಿಭೆ, ದೈಹಿಕ ಸಾಮರ್ಥ್ಯ ಹಾಗೂ ಚಾಕಚಕ್ಯತೆಯನ್ನು ಓರೆಗೆ ಹಚ್ಚುತ್ತದೆ ಎನ್ನುತ್ತಾರೆ ಸೈಕ್ಲಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮಣೆಂದರ್‌ ಪಾಲ್‌ ಸಿಂಗ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next