Advertisement

ವಿಜಯ ಹಜಾರೆ:  ಧೋನಿ ತಂಡಕ್ಕೆ 3ನೇ ಜಯ

03:45 AM Mar 02, 2017 | |

ಕೋಲ್ಕತ್ತಾ: ವರುಣ್‌ ಏರಾನ್‌, ರಾಹುಲ್‌ ಶುಕ್ಲಾ ಮಾರಕ ದಾಳಿಯ ನೆರವಿನಿಂದ ಧೋನಿ ನೇತೃತ್ವದ ಜಾರ್ಖಂಡ್‌ ತಂಡ ವಿಜಯ ಹಜಾರೆ ಟ್ರೋಫಿಯಲ್ಲಿ ಸೌರಾಷ್ಟ್ರ ವಿರುದ್ಧ 42 ರನ್‌ ಅಂತರದಿಂದ ಜಯ ಸಾಧಿಸಿದೆ. ಅಲ್ಪ ಮೊತ್ತ ದಾಖಲಿಸಿದರೂ ಚುರುಕಿನ ಬೌಲಿಂಗ್‌ ದಾಳಿಯ ನೆರವಿನಿಂದ ಜಾರ್ಖಂಡ್‌ ಜಯಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕೂಟದಲ್ಲಿ ಧೋನಿ ತಂಡ 1 ಸೋಲು 3 ಜಯ ಸಾಧಿಸಿದೆ.

Advertisement

ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಎರಡೂ ತಂಡದ ಬೌಲರ್‌ಗಳದ್ದೇ ಮೇಲುಗೈ. ಬ್ಯಾಟ್ಸ್‌ಮನ್‌ಗಳು ರನ್‌ ಬಾರಿಸಿಲು ಪರದಾಡಬೇಕಾಯಿತು. ಮೊದಲು ಬ್ಯಾಟ್‌ ಮಾಡಿದ ಜಾರ್ಖಂಡ್‌ 27.3 ಓವರ್‌ನಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು 125 ರನ್‌ ಬಾರಿಸಿತ್ತು. ಸುಲಭ ರನ್‌ ಗುರಿ ಬೆನ್ನುಹತ್ತಿದ ಸೌರಾಷ್ಟ್ರಕ್ಕೆ ಜಾರ್ಖಂಡ್‌ನ‌ ಬೌಲರ್‌ಗಳು ಮಾರಕವಾದರು. ಒಬ್ಬರ ಹಿಂದೆ ಒಬ್ಬರಂತೆ ಸರದಿ ಸಾಲಿನಲ್ಲಿ ಪೆವಿಲಿಯನ್‌ ಸೇರತೊಡಗಿದರು. ಇದರ ಪರಿಣಾಮ ಸೌರಾಷ್ಟ್ರ ಕೇವಲ 25.1 ಓವರ್‌ಗೆ 83 ರನ್‌ಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು. ಸೌರಾಷ್ಟ್ರ ಪರ ಶೆಲ್ಡಾನ್‌ ಜಾಕ್ಸನ್‌ (20) ಬಾರಿಸಿದ್ದೆ ದೊಡ್ಡ ಮೊತ್ತವಾಯಿತು. ಜಾರ್ಖಂಡ್‌ ಪರ ಮಾರಕ ದಾಳಿ ನಡೆಸಿದ ವರುಣ್‌ ಏರಾನ್‌  ಮತ್ತು ರಾಹುಲ್‌ ಶುಕ್ಲಾ ತಲಾ 4 ವಿಕೆಟ್‌ ಪಡೆದರು.

ಜಾರ್ಖಂಡ್‌ಗೆ ಇಶಾನ್‌, ಧೋನಿ ಆಸರೆ:
ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಜಾರ್ಖಂಡ್‌ ತಂಡ ಕೂಡ ಶೌರ್ಯ ಸನದಿಯಾ ಮತ್ತು ಕುಶಂಗ್‌ ಪಟೇಲ್‌ ದಾಳಿಗೆ ತುತ್ತಾಯಿತು. ಆದರೆ ತಂಡಕ್ಕೆ ಅಲ್ಪ ಚೇತರಿಕೆ ನೀಡಿದ್ದು, ಇಶಾನ್‌ ಕಿಶನ್‌ (53) ಮತ್ತು ನಾಯಕ ಧೋನಿ (23) ಮಾತ್ರ. ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಸಂಗ್ರಹಿಸುವಲ್ಲಿ ವಿಫ‌ಲರಾದರು. ಮೂವರು ಬ್ಯಾಟ್ಸ್‌ಮನ್‌ಗಳು ಶೂನ್ಯ ಮೊತ್ತಕ್ಕೆ, ಇಬ್ಬರು 1 ರನ್‌ಗೆ ವಿಕೆಟ್‌ ಒಪ್ಪಿಸಿದ್ದು, ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣವಾಯಿತು. ಸೌರಾಷ್ಟ್ರ ಪರ ಶೌರ್ಯ ಸನದಿಯಾ 5 ವಿಕೆಟ್‌ ಪಡೆದರೆ, ಕುಶಂಗ್‌ ಪಟೇಲ್‌ 4 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌:
ಜಾರ್ಖಂಡ್‌ 27.3 ಓವರ್‌ಗೆ 125/10 (ಇಶಾನ್‌ ಕಿಶನ್‌ 53, ಧೋನಿ 23, ಶೌರ್ಯ 47ಕ್ಕೆ 5, ಕುಶಂಗ್‌ 39ಕ್ಕೆ 4), ಸೌರಾಷ್ಟ್ರ 25.1 ಓವರ್‌ಗೆ 83/10 (ಶೆಲ್ಡಾನ್‌ ಜಾಕ್ಸನ್‌ 20, ವರುಣ್‌ ಏರಾನ್‌ 20ಕ್ಕೆ 4, ರಾಹುಲ್‌ ಶುಕ್ಲಾ 32ಕ್ಕೆ 4).

Advertisement

Udayavani is now on Telegram. Click here to join our channel and stay updated with the latest news.

Next