ಅಹ್ಮದಾಬಾದ್: ಭಾರೀ ಮಳೆಯಿಂದಾಗಿ ಸೋಮವಾರಕ್ಕೆ ಮುಂದೂಡಲ್ಪಟ್ಟ ಐಪಿಎಲ್ ಫೈನಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದಡಿ 5 ವಿಕೆಟ್ಗಳಿಂದ ಸೋಲಿಸಿದೆ,
ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 4 ವಿಕೆಟಿಗೆ 214 ರನ್ ಪೇರಿಸಿತ್ತು, ಆದರೆ ಚೆನ್ನೈ ಚೇಸಿಂಗ್ ವೇಳೆ ಮಳೆಯ ಆಗಮನವಾಗಿದೆ. ಚೆನ್ನೈ ಕೇವಲ 3 ಎಸೆತಗಳನ್ನಷ್ಟೇ ಎದುರಿಸಿದ್ದು, ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದೆ. ಸುಮಾರು ಎರಡು ತಾಸುಗಳ ಬಳಿಕ ಆಟ ಪುನರಾರಂಭಗೊಂಡಾಗ ಚೆನ್ನೈಗೆ 15 ಓವರ್ಗಳಲ್ಲಿ 171 ರನ್ ಗಳಿಸುವ ಗುರಿಯನ್ನು ನೀಡಲಾಗಿತ್ತು. ಮಳೆ ನಿಂತ ಬಳಿಕ ಆಟ ಮುಂದುವರಿಸಿದ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಮತ್ತು ಡೇವನ್ ಕಾನ್ವೇ ಭರ್ಜರಿ ಆರಂಭ ಒದಗಿಸಿದ್ದು ಮೊದಲ ವಿಕೆಟಿಗೆ 6.3 ಓವರ್ಗಳಲ್ಲಿ 74 ರನ್ ಪೇರಿಸಿದ್ದರು. ಅವರಿಬ್ಬರ ಬಳಿಕ ಉಳಿದ ಆಟಗಾರರೆಲ್ಲರೂ ಸಿಕ್ಸರ್ಗಳ ಸುರಿಮಳೆ ಸುರಿಸಿದರು,
ನಡೆಯದ ಮೋಹಿತ್ ಮ್ಯಾಜಿಕ್ ಅಂತಿಮ ಓವರಿನಲ್ಲಿ ಚೆನ್ನೈ ಗೆಲ್ಲಲು 13 ರನ್ ಗಳಿಸಬೇಕಿತ್ತು. ಮೋಹಿತ್ ಶರ್ಮ ಎಸೆದ ಈ ಓವರಿನ ಮೊದಲ ನಾಲ್ಕು ಎಸೆತಗಳಲ್ಲಿ ತಂಡ ಕೇವಲ ಮೂರು ರನ್ ಗಳಿಸಿತ್ತು, ಇದರಿಂದಾಗಿ ಗುಜರಾತ್ ಗೆಲ್ಲುವ ಆಸೆ ಬಲವಾಯಿತು. ಆದರೆ ಗುಜರಾತ್ನ ಈ ಕನಸನ್ನು ರವೀಂದ್ರ ಜಡೇಜಾ ನುಚ್ಚುನೂರು ಮಾಡಿದರು. ಅಂತಿಮ ಎರಡು ಎಸೆತದಲ್ಲಿ 10 ರನ್ ಗಳಿಸಬೇಕಿತ್ತು, ಜಡೇಜ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಚೆನ್ನೈ ತಂಡದ ಗೆಲುವನ್ನು ಸಾರಿದರು. ಮಾತ್ರವಲ್ಲದೇ ವಿದಾಯದ ಸನಿಹದಲ್ಲಿರುವ ಧೋನಿ ಅವರಿಗೆ ಐಪಿಎಲ್ ಪ್ರಶಸ್ತಿಯನ್ನು ಸಮರ್ಪಿಸಲು ಯಶಸ್ವಿಯಾದರು.