ಲಕ್ನೋ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಪಾಲಿಗೆ ಇದು ಕೊನೆಯ ಐಪಿಎಲ್ ಋತು ಎಂದೇ ಎಲ್ಲೆಡೆ ಸುದ್ದಿಯಾಗುತ್ತಿದೆ. ಮಾಧ್ಯಮಗಳಲ್ಲೂ ಆಗಾಗ ಈ ಕುರಿತ ಸುದ್ದಿ ಬಿತ್ತರಗೊಳ್ಳುತ್ತಿದೆ.
ಧೋನಿ ಮಾತ್ರ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬುಧವಾರದ ಪಂದ್ಯದ ಟಾಸ್ ವೇಳೆ ಡ್ಯಾನಿ ಮಾರಿಸನ್ ಇಂಥದೇ ಒಂದು ಪ್ರಶ್ನೆ ಎಸೆದಾಗ ಧೋನಿ ಸಮಾಧಾನಕರ ಉತ್ತರವೊಂದನ್ನು ನೀಡಿದ್ದು, ಇದೀಗ ದೊಡ್ಡ ಸುದ್ದಿಯಾಗಿದೆ. “ಇದು ನಿಮ್ಮ ಕೊನೆಯ ಐಪಿಎಲ್ ಸೀಸನ್ ಆಗಿದ್ದು, ನೀವಿದನ್ನು ಹೇಗೆ ಸಂಭ್ರಮಿಸುತ್ತೀರಿ?’ ಎಂಬುದು ಮಾರಿಸನ್ ಪ್ರಶ್ನೆಯಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಧೋನಿ, “ಸರಿ… ಹಾಗಾದರೆ ಇದು ನನ್ನ ಕೊನೆಯ ಐಪಿಎಲ್ ಸೀಸನ್ ಎಂದು ನೀವು ಭಾವಿಸಿದ್ದೀರಾ?’ ಎಂದು ನಗುತ್ತ ಕೇಳಿದರು.
“ಹಾಗಾದರೆ ನೀವು ಆಡಲು ಮತ್ತೆ ಬರಲಿದ್ದೀರಿ ಎಂದಾಯಿತು. ಧೋನಿ ಮುಂದಿನ ಸೀಸನ್‌ನಲ್ಲೂ ಆಡಲಿದ್ದಾರೆ’ ಎಂದು ಮಾರಿಸನ್ ಪ್ರಕಟನೆ ಹೊರಡಿಸಿಯೇ ಬಿಟ್ಟರು. ಆಗ ಧೋನಿ ನಗುತ್ತ ನಿಂತಿದ್ದರು!