ಮಹೇಂದ್ರ ಸಿಂಗ್ ಧೋನಿ ತಮ್ಮ ನಾಯಕತ್ವದ ಜಾರ್ಖಂಡ್ ತಂಡವನ್ನು ಕಟ್ಟಿಕೊಂಡು ಆಗ್ನೇಯ ರೈಲ್ವೆಯ ಕ್ರಿಯಾಯೋಗ ಎಕ್ಸ್‌ಪ್ರಸ್‌ನಲ್ಲಿ ಪಯಣಿಸಿದರು. 13 ವರ್ಷಗಳ ನಂತರ ಧೋನಿ ಮಾಡಿದ ರೈಲು ಪ್ರಯಾಣವಿದು ಎನ್ನುವುದು ಇಲ್ಲಿನ ವಿಶೇಷ.ಯಾವ ಹಮ್ಮುಬಿಮ್ಮುಗಳಿಲ್ಲದೇ ಸ್ವಯಿಚ್ಛೆಯಿಂದಲೇ ಧೋನಿ ರೈಲು ಯಾನ ನಡೆಸಿದರು. ಯಾವುದೇ ಹೆಚ್ಚುವರಿ ಸೌಲಭ್ಯಗಳನ್ನು ಕೇಳಲಿಲ್ಲ
ಎನ್ನುವುದು ಅವರ ಸರಳತೆಗೆ ಸಾಕ್ಷಿ.
Advertisement
ಧೋನಿ ಇತ್ತೀಚೆಗಷ್ಟೇ ವಿಜಯ್ ಹಜಾರೆ ಟ್ರೋಫಿಯಲ್ಲಿ ಪಾಲ್ಗೊಳ್ಳಲಿರುವ ಜಾರ್ಖಂಡ್ ಏಕದಿನ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ ಅವರು ಮಂಗಳವಾರ ರಾತ್ರಿ ರಾಂಚಿಯಲ್ಲಿ ಟ್ರೈನ್ ಹತ್ತಿದರು. ಬೆಳಗ್ಗೆ ಹೌರಾದಲ್ಲಿಳಿದರು. ಫೆ.25ರಂದು ಕೋಲ್ಕತಾದಲ್ಲಿ ನಡೆಯುವ ವಿಜಯ್ ಹಜಾರೆ ಪಂದ್ಯದಲ್ಲಿ ಅವರ ನೇತೃತ್ವದ ಜಾರ್ಖಂಡ್ ತಂಡ ಕರ್ನಾಟಕ ತಂಡವನ್ನು ಎದುರಿಸಲಿದೆ. ಈ ವೇಳೆ ಎಂದಿನಂತೆ ತಂಡದೊಂದಿಗಿರುವ ಸೆಲ್ಫಿ ತೆಗೆದುಕೊಂಡರು. ತಂಡದ ಸದಸ್ಯರು ಧೋನಿಯ ಸರಳತೆಯನ್ನು ನೋಡಿದಂಗಾದರು. ಸ್ವಾರಸ್ಯವೆಂದರೆ ಇದೇ ಆಗ್ನೇಯ ವಿಭಾಗದಲ್ಲಿ ಖರಗ್‌ಪುರ ರೈಲು ನಿಲ್ದಾಣದಲ್ಲಿ ಧೋನಿ ಟಿಕೆಟ್ ಕಲೆಕ್ಟರ್ ಆಗಿ 5 ವರ್ಷ ಉದ್ಯೋಗ ನಿರ್ವಹಿಸಿದ್ದರು. ಒಂದು ಕಾಲದಲ್ಲಿ ಕೆಲಸ ನೀಡಿದ್ದ ಸಂಸ್ಥೆ ಇದೀಗ ಧೋನಿ ತಮ್ಮ ರೈಲನ್ನು ಹತ್ತುವುದನ್ನೇ ಒಂದು ಸೌಭಾಗ್ಯವೆಂದು ಭಾವಿಸಿದೆ.