ವರದಿ: ಬಸವರಾಜ ಹೊಂಗಲ್
ಧಾರವಾಡ: ಅರೆಮಲೆನಾಡಿನಲ್ಲಿ ನಳನಳಿಸುತ್ತಿರುವ ಭತ್ತ, ಕಬ್ಬು, ಸೋಯಾ ಅವರೆ, ಬೆಳವಲದಲ್ಲಿ ಅರ್ಧ ಹುಟ್ಟಿ ಮೇಲೆದ್ದ ಬೆಳೆಗಳಿಗೆ ಸಿಕ್ಕ ಮಳೆಯ ಚೈತನ್ಯ, ರಭಸವಾಗಿ ಸುರಿದ ಮಳೆಗೆ ಒಡ್ಡು ಸೇರಿ ನೀರುಪಾಲಾದ ಆಗಷ್ಟೇ ಬಿತ್ತಿದ ಬೀಜಗಳು, ಒಟ್ಟಿನಲ್ಲಿ ಮೃಗಶಿರನ ಕೃಪೆ ಜಿಲ್ಲಾದ್ಯಂತ ಪಸರಿಸಿದ್ದು, ಆರಿದ್ರಾ ಅಥವಾ ಆಶ್ಲೇಷ ಮಳೆ ಮಾಡಬೇಕಾದ ಕೆಲಸವನ್ನು ಮೃಗಶಿರನೇ ಮಾಡಿ ಮುಗಿಸಿದ್ದಕ್ಕೆ ಸಾಕ್ಷಿಯಾದ ಹಳ್ಳ-ಕೊಳ್ಳ, ಕೆರೆ-ಕುಂಟೆಗಳಲ್ಲಿನ ಮಳೆನೀರು ವೈಭವ.
ಹೌದು, ಸತತ ಮೂರನೇ ವರ್ಷವೂ ಜಿಲ್ಲೆಯಲ್ಲಿ ಮಳೆಗಾಲ ಉತ್ತಮ ಆರಂಭ ಪಡೆದುಕೊಂಡಿದೆ. ಜುಲೈ ತಿಂಗಳಿನಲ್ಲಿ ಕಳೆಕಟ್ಟುತ್ತಿದ್ದ ವರುಣ ವೈಭವ ಇದೀಗ ಜೂನ್ ಎರಡು ಮೂರನೇ ವಾರದಲ್ಲಿಯೇ ರಂಗೇರಿದೆ. ವಾಡಿಕೆಗಿಂತಲೂ ದ್ವಿಗುಣ ಮಳೆ ಸುರಿದಿದೆ. ಹಳ್ಳಗಳು ತುಂಬಿ ಹರಿದರೆ, ಕೆರೆಯಂಗಳದಲ್ಲಿ ಹೊಸ ನೀರು ಕಾಣಿಸುತ್ತಿದೆ.
ಜಿಲ್ಲೆಯಲ್ಲಿ 2.35 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಇದ್ದು, ಈಗಾಗಲೇ 2.1 ಹೆಕ್ಟೇರ್ ಭೂಮಿ ಬಿತ್ತನೆಯಾಗಿದೆ. 20,268 ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಿಸಲಾಗಿದೆ.
ಇನ್ನುಳಿದಂತೆ ಹಂಗಾಮು ಹದ ಸಿಕ್ಕದೆ 10 ಸಾವಿರ ಹೆಕ್ಟೇರ್‌ನಷ್ಟು ಭೂಮಿ ಬಿತ್ತನೆಯಾಗಿಲ್ಲ. ಬಿತ್ತನೆ ಪೂರ್ವದಲ್ಲಿಯೇ ಅಲ್ಲಲ್ಲಿ ಹಸಿಮಳೆಯಾಗದ ರೈತರು ಮಾತ್ರ ವಿಳಂಬ ಬಿತ್ತನೆಯಿಂದಾಗಿ ತೊಂದರೆಗೆ ಸಿಲುಕಿದ್ದು ಬಿಟ್ಟರೆ ಮೃಗಶಿರ ಮಳೆ ಜಿಲ್ಲೆಯ ಬೆಳೆಗಳಿಗೆ ಉತ್ತಮ ಹಸಿ ತಂದಿದೆ. ಆದರೆ ಇದೀಗ ಚೊಕ್ಕಟವಾಗಿ ಮಳೆ ಹೊಳವಿ, ಹೊಲದ ಹಂಗಾಮಿಗೆ ಸೂರ್ಯದೇವ ಒಂದು ವಾರ ಸತತ ಆಗಮಿಸಿದರೆ ರೈತರ ಸಂತಸ ಇಮ್ಮಡಿಯಾಗಲಿದೆ.