Advertisement

ಎಂಆರ್‌ಪಿಎಲ್‌: ಸಂಸ್ಕರಿತ ಒಳಚರಂಡಿ ನೀರಿನ ಬಳಕೆ ಹೆಚ್ಚಿಸಲು ಯೋಜನೆ

12:57 AM Oct 14, 2019 | Sriram |

ಮಹಾನಗರ: ಕರ್ನಾಟಕ ಕರಾವಳಿಯ ಪ್ರತಿಷ್ಠಿತ ಉದ್ಯಮ ಎಂಆರ್‌ಪಿಎಲ್‌ (ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌) ನೇತ್ರಾವತಿ ನದಿ ನೀರಿನ ಬಳಕೆ ಕಡಿತಗೊಳಿಸಿ, ಪರ್ಯಾಯ ನೀರಿನ ಬಳಕೆಗೆ ಮುಂದಾಗಿದೆ. ಇದರಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಒಳಚರಂಡಿ ನೀರನ್ನು ಸಂಸ್ಕರಿಸಿ ಬಳಕೆ ಮಾಡುವ ಪ್ರಮಾಣವನ್ನು ಮುಂದಿನ ವರ್ಷದಿಂದ ದುಪ್ಪಟ್ಟು ಮಾಡಲು ತೀರ್ಮಾನಿಸಿದೆ.

Advertisement

ನೇತ್ರಾವತಿಯಿಂದ ಬಂಟ್ವಾಳ ಸಮೀಪ ವಿರುವ ಎಎಂಆರ್‌ ಡ್ಯಾಂ ಪಕ್ಕದ ಡ್ಯಾಂನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ ನೀರು ಸದ್ಯ ಸರಬರಾಜಾಗುತ್ತಿದೆ.

ಮಾತುಕತೆ
ಮನಪಾ ವ್ಯಾಪ್ತಿಯ ಕಾವೂರು ಒಳಚರಂಡಿ ಸಂಸ್ಕರಣಾ ಘಟಕದಿಂದ ಪ್ರತೀದಿನ ಸುಮಾರು 2ರಿಂದ 3 ಮಿಲಿಯನ್‌ ಗ್ಯಾಲನ್‌ ನೀರು ಎಂಆರ್‌ಪಿಎಲ್‌ಗೆ ಲಭ್ಯವಾಗುತ್ತಿದೆ. ಜತೆಗೆ ಎಸ್‌ಇಝಡ್‌ನಿಂದಲೂ ಇದೇ ಪ್ರಮಾಣದಲ್ಲಿ ನೀರು ಎಂಆರ್‌ಪಿಎಲ್‌ಗೆ ಹೋಗುತ್ತಿದೆ. ಈ ಎರಡರ ಸದ್ಯದ ಪ್ರಮಾಣವನ್ನು ಮುಂದಿನ ವರ್ಷದಿಂದ ದುಪ್ಪಟ್ಟು ಮಾಡುವ ಬಗ್ಗೆ ಎಂಆರ್‌ಪಿಎಲ್‌ ತೀರ್ಮಾನಿಸಿದ್ದು, ಮನ ಪಾ ಹಾಗೂ ಎಸ್‌ಇಝಡ್‌ ಜತೆಗೆ ಮಾತುಕತೆ ಶೀಘ್ರದಲ್ಲಿ ಅಂತಿಮಗೊಳ್ಳಲಿದೆ.

ಮುಂದಿನ ತಿಂಗಳು ದ.ಕ. ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ವಿಚಾರ ಮುನ್ನೆಲೆಗೆ ಬರುವ ಸಾಧ್ಯತೆಯಿದೆ.

ಕುದ್ರೋಳಿ, ಪಾಂಡೇಶ್ವರ, ಪಡೀಲ್‌, ಎಕ್ಕೂರು, ಕೊಟ್ಟಾರಚೌಕಿ ಸಹಿತ ಮಂಗ ಳೂರಿನ ಒಟ್ಟು 22 ಕಡೆಗಳಲ್ಲಿ ಮಂಗಳೂರು ಪಾಲಿಕೆಯು ವೆಟ್‌ವೆಲ್‌ ನಿರ್ಮಿಸಿದೆ. ಅಂದರೆ, ಶೌಚಾಲಯ, ಪಾತ್ರೆ ತೊಳೆಯುವ ನೀರು ಒಳಚರಂಡಿಯ ಮೂಲಕ ಮ್ಯಾನ್‌ಹೋಲ್‌ (ಒಟ್ಟು 24,365) ದಾಟಿ, ವೆಟ್‌ವೆಲ್‌ಗೆ ಹರಿಯುತ್ತದೆ. ಅಲ್ಲಿಂದ ನಗ ರದ ನಾಲ್ಕು ಕಡೆಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಎಸ್‌ಟಿಪಿಗೆ (ಸಂಸ್ಕರಣೆ ಘಟಕ) ಬರುತ್ತದೆ. 16 ಎಂಎಲ್‌ಡಿ ಸಾಮರ್ಥ್ಯದ ಸುರತ್ಕಲ್‌ ಎಸ್‌ಟಿಪಿ, 20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿ, 44.4 ಎಂಎಲ್‌ಡಿಯ ಕಾವೂರು ಎಸ್‌ಟಿಪಿ ಹಾಗೂ 8.7 ಎಂಎಲ್‌ಡಿ ಸಾಮರ್ಥ್ಯದ ಪಚ್ಚನಾಡಿ ಎಸ್‌ಟಿಪಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತದೆ. ಇದರಲ್ಲಿ ಕಾವೂರು ಎಸ್‌ಟಿಪಿಯ ನೀರನ್ನು ಸದ್ಯ ಎಂಆರ್‌ಪಿಎಲ್‌ ಪಡೆದುಕೊಳ್ಳುತ್ತಿದೆ.

Advertisement

ಮುಂದಿನ ವರ್ಷ ಉಪ್ಪು ನೀರು ಸಂಸ್ಕರಣೆ
ಈ ಮಧ್ಯೆ, ಎಂಆರ್‌ಪಿಎಲ್‌ಗೆ ನೀರಿನ ಸಮಸ್ಯೆ ಮುಂಬರುವ ದಿನಗಳಲ್ಲಿ ಎದುರಾಗಬಾರದು ಎಂಬ ಕಾರಣದಿಂದ ತಣ್ಣೀರುಬಾವಿಯಲ್ಲಿ ರಾಜ್ಯದ ಮೊದಲ ಸಮುದ್ರ ನೀರು ಸಂಸ್ಕರಣಾ ಘಟಕ (ಡಿಸಲೈನೇಶನ್‌ ಪ್ಲಾಂಟ್‌) ನಿರ್ಮಾಣ ಕಾಮಗಾರಿ ಈಗಾಗಲೇ ನಡೆಯುತ್ತಿದ್ದು, 2020 ಆಗಸ್ಟ್‌ನೊಳಗೆ ಪೂರ್ಣಗೊಳ್ಳಲಿದೆ. ಇದು ಪೂರ್ಣವಾದ ಅನಂತರ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸುವುದರಿಂದ ಪ್ರತಿ ದಿನ 5 ಮಿ. ಗ್ಯಾಲನ್‌ ನೀರು ಎಂಆರ್‌ಪಿಎಲ್‌ಗೆ ಲಭ್ಯವಾಗಲಿದೆ. ಹೀಗಾಗಿ ನೇತ್ರಾವತಿ ನದಿಯನ್ನು ಎಂಆರ್‌ಪಿಎಲ್‌ ಆಶ್ರಯಿಸಬೇಕಾದ ಅನಿವಾರ್ಯತೆ ತಪ್ಪಲಿದೆ.

ಎಂಆರ್‌ಪಿಎಲ್‌ಗೆ ನೀರು; ಬಳಕೆ ಯಾಕಾಗಿ?
ಎಂಆರ್‌ಪಿಎಲ್‌ ರಿಫೈನರಿಯನ್ನು ಚಲಾಯಿಸುವುದಕ್ಕೆ ಪ್ರತಿದಿನ 6 ಎಂಜಿಡಿಯಷ್ಟು ನೀರು ಬೇಕಾಗುತ್ತದೆ. ಇದರಲ್ಲಿರುವ ಕ್ಯಾಪ್ಟಿವ್‌ ಪವರ್‌ ಪ್ಲಾಂಟ್‌ ಮೂಲಕ ವಿದ್ಯುತ್‌ ಉತ್ಪಾದಿಸಲು ನೀರು ಬೇಕು. ಅತ್ಯಧಿಕ 300, 400 ಡಿಗ್ರಿ ಸೆಲ್ಸಿಯಸ್‌ ಉಷ್ಣತೆಯಲ್ಲಿ ಕಚ್ಚಾ ತೈಲವನ್ನು ಸಂಸ್ಕರಿಸಲಾಗುತ್ತಿದ್ದು ಅದನ್ನು ತಣಿಸುವುದಕ್ಕೆ ಮತ್ತೆ ಭಾರೀ ಪ್ರಮಾಣದ ನೀರಿನ ಅಗತ್ಯವಿದೆ. ಇದಕ್ಕಾಗಿ ನೇತ್ರಾವತಿ ನದಿ ಹಾಗೂ ಕಾವೂರು ಒಳಚರಂಡಿ ಸಂಸ್ಕರಣೆ ಘಟಕದಿಂದ ನೀರು ಪಡೆಯುತ್ತಿದೆ.

ನದಿ ನೀರು ಬಳಕೆ ಕಡಿತ ತೀರ್ಮಾನ
ಎಂಆರ್‌ಪಿಎಲ್‌ಗೆ ಸದ್ಯ ಮಂಗಳೂರು ವ್ಯಾಪ್ತಿಯಿಂದ ಸಿಗುತ್ತಿರುವ ಸಂಸ್ಕರಿತ ಒಳಚರಂಡಿ ನೀರಿನ ಪ್ರಮಾಣವನ್ನು ಮುಂದಿನ ವರ್ಷದಿಂದ ದುಪ್ಪಟ್ಟು ಮಾಡುವ ನೆಲೆಯಲ್ಲಿ ಮಾತುಕತೆ ನಡೆಸಲಾಗುತ್ತಿದೆ. ಜತೆಗೆ ಉಪ್ಪು ನೀರು ಸಂಸ್ಕರಣಾ ಘಟಕ ಮುಂದಿನ ವರ್ಷ ಆರಂಭವಾಗಲಿದೆ. ಈ ಮೂಲಕ ನದಿ ನೀರನ್ನು ಆಶ್ರಯಿಸುವ ಪ್ರಮಾಣವನ್ನು ಕಡಿತ ಮಾಡಲು ನಿರ್ಧರಿಸಲಾಗಿದೆ.
 - ಎಂ.ವೆಂಕಟೇಶ್‌, ,
ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್‌.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next