Advertisement

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

10:21 AM Sep 21, 2024 | Team Udayavani |

ಮಂಗಳೂರು : ಭವಿಷ್ಯದ ಇಂಧನ ಎಂದೇ ಹೆಸರಾಗಿರುವ ಗ್ರೀನ್‌ ಹೈಡ್ರೋಜನ್‌ ಉತ್ಪಾದನೆಗೆ ಮಂಗಳೂರಿನಲ್ಲಿ ಘಟಕ ಸ್ಥಾಪನೆ ಅಂತಿಮಗೊಂಡಿದೆ.

Advertisement

ಗ್ರೀನ್‌ ಹೈಡ್ರೋಜನ್‌ ಕ್ಲಸ್ಟರ್‌ ಆಗಿ ಗುರುತಿಸಲ್ಪಟ್ಟಿರುವ ಮಂಗಳೂರಿನಲ್ಲಿ ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್‌ (ಎಂಆರ್‌ಪಿಎಲ್‌) ತನ್ನ ಪರಿಸರದಲ್ಲೇ 2026ರ ವೇಳೆಗೆ ವಾರ್ಷಿಕ 500 ಟನ್‌ ಲಿಕ್ವಿಡ್‌ ಹೈಡ್ರೋಜನ್‌ ಉತ್ಪಾದಿಸುವ ಸ್ಥಾವರ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.

ಗ್ರೀನ್‌ ಹೈಡ್ರೋಜನ್‌ ನೀತಿಯನ್ವಯ ನವೀಕರಿಸಬಹುದಾದ ಇಂಧನದಿಂದ ನೀರಿನ ಎಲೆಕ್ಟ್ರಾಲಿಸಿಸ್‌ ನಡೆಸಿ ಪಡೆಯುವ ಹೆಡ್ರೋಜನ್‌ ಅನ್ನು ಹಸುರು ಹೆಡ್ರೋಜನ್‌ ಎಂದು ವ್ಯಾಖ್ಯಾನಿಸಲಾಗಿದೆ. ಇದೇ ನೀತಿಯ ಅನ್ವಯ ರಿಫೈನರಿಗಳಿಗೆ ಈ ಹಸುರು ಹೈಡ್ರೋಜನ್‌ ಅನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನೀಡಲಾಗಿದೆ.

ನೀರಿನ ಎಲೆಕ್ಟ್ರಾಲಿಸಿಸ್‌ ನಡೆಸುವ ಮೂಲಕ ನಿರಂತರವಾಗಿ ಹೈಡ್ರೋಜನ್‌ ಉತ್ಪಾದಿಸಿ ಎಂಆರ್‌ಪಿಎಲ್‌ಗೆ ಪೂರೈ ಸುವುದಕ್ಕಾಗಿ ಎಂಆರ್‌ಪಿಎಲ್‌ ಈಗಾ
ಗಲೇ ಟೆಂಡರ್‌ ಆಹ್ವಾನಿಸಿದೆ. ಪ್ರಸ್ತುತ ಎಂಆರ್‌ಪಿಎಲ್‌ ತನ್ನ ಆವರಣದೊಳ ಗೆಯೇ ಈ ವ್ಯವಸ್ಥೆಗೆ ಸ್ಥಳ ಒದಗಿಸಲಿದೆ. ಈ ರೀತಿ ಉತ್ಪಾದನೆಗೊಳ್ಳುವ ಹೈಡ್ರೋ ಜನ್‌ ಅನ್ನು ರಿಫೈನರಿಯಲ್ಲಿ ಉತ್ಪಾದಿಸುವ ಹೈಡ್ರೋಜನ್‌ ಜತೆ ಸೇರಿಸಿ ಬಳಸುವುದು ಎಂಆರ್‌ಪಿಎಲ್‌ ಉದ್ದೇಶ.

ಗ್ರೀನ್‌ ಹೈಡ್ರೋಜನ್‌ ಕ್ಲಸ್ಟರ್‌ ಮಂಗಳೂರು
ಬೆಂಗಳೂರಿನಲ್ಲಿ ನಡೆದಿದ್ದ “ಇನ್‌ವೆಸ್ಟ್‌ ಕರ್ನಾಟಕ 2022′ ಹೂಡಿಕೆದಾರರ ಸಮಾವೇಶದಲ್ಲಿ ಗ್ರೀನ್‌ ಹೈಡ್ರೋಜನ್‌ ಕ್ಷೇತ್ರಕ್ಕೆ ಹೆಚ್ಚಿನ ಆಸ್ಥೆ ಕಂಡುಬಂದಿತ್ತು. ಬಹುತೇಕ ಪ್ರಸ್ತಾವನೆಗಳೂ ಈ ಕ್ಷೇತ್ರಕ್ಕೇ ಬಂದಿದ್ದವು. ಸುಮಾರು 2.86 ಲಕ್ಷ ಕೋಟಿ ರೂ.ಯ 9 ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿತ್ತು. ಅದರಲ್ಲೂ ಸುವ್ಯವಸ್ಥಿತ ಸಂಪರ್ಕ ವ್ಯವಸ್ಥೆ, ರಫ್ತು ಮಾಡುವುದಕ್ಕೆ ಬಂದರು ಇರುವಂತಹ ಮಂಗಳೂರಿಗೇ ಇವು ಬಂದಿದ್ದು, ಮಂಗಳೂರನ್ನು ಗ್ರೀನ್‌ ಹೈಡ್ರೋಜನ್‌ ಕ್ಲಸ್ಟರ್‌ ಮಾಡುವ ಉದ್ದೇಶ ಹಾಕಿಕೊಳ್ಳಲಾಗಿತ್ತು. ಅದರಲ್ಲಿ ಈಗ ಎಂಆರ್‌ಪಿಎಲ್‌ನವರೇ ಮುಂದಡಿ ಇಟ್ಟಿರುವುದು ಮಹತ್ವದ ಬೆಳವಣಿಗೆ.

Advertisement

ಹಿನ್ನೆಲೆಯೇನು?
ಜಗತ್ತಿನಲ್ಲಿಯೇ ಹೈಡ್ರೋಕಾರ್ಬನ್‌ (ಪೆಟ್ರೋಲಿಯಂ ಉತ್ಪನ್ನಗಳು) ಬಳಕೆ ಪ್ರಮಾಣವನ್ನು ಕಡಿಮೆ ಮಾಡುವ ಗುರಿ ಹಾಕಿಕೊಳ್ಳಲಾಗುತ್ತಿದೆ. ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ವಿಶ್ವದೆಲ್ಲೆಡೆ ಪಳೆಯುಳಿಕೆ ಇಂಧನಗಳ ದಹಿಸುವಿಕೆ ಶೂನ್ಯ ಪ್ರಮಾಣಕ್ಕೆ ಇಳಿಸುವ “ನೆಟ್‌ ಝೀರೋ’ ಪರಿಕಲ್ಪನೆ ಬಂದಿದೆ. ಎಂದರೆ ದೇಶವೊಂದರಲ್ಲಿ ಕೈಗಾರಿಕೆ, ವಾಹನಗಳು ಹೊರಸೂಸುವ ಕಾರ್ಬನ್‌ ಪ್ರಮಾಣಕ್ಕಿಂತ ಅದು ಪರಿಸರದಿಂದ ಕಡಿತಗೊಳಿಸುವ ಪ್ರಮಾಣ ಹೆಚ್ಚಬೇಕು.

ಇದಕ್ಕೆ ಬೇರೆ ಬೇರೆ ದೇಶಗಳು ಪ್ರತ್ಯೇಕ ಗುರಿ ಹಾಕಿಕೊಂಡಿವೆ. ಅದರಂತೆ ಭಾರತದಲ್ಲಿ 2070ರ ವೇಳೆಗೆ ನೆಟ್‌ಝೀರೋ ಮಾಡುವ ಉದ್ದೇಶವಿದೆ. ಇದರ ಭಾಗವಾಗಿಯೇ ಕೇಂದ್ರ ಸರಕಾರ ಗ್ರೀನ್‌ ಹೈಡ್ರೋಜನ್‌ ಉತ್ಪಾದನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಾಕಿ ಕೊಂಡಿದ್ದು, ಅದರಂತೆ ರಿಫೈನರಿಗಳಿಗೆ ಗ್ರೀನ್‌ ಹೈಡ್ರೋಜನ್‌ ಉತ್ಪಾದಿಸಿ ಬಳಸುವಂತೆ ತಿಳಿಸಿದೆ.

ಸದ್ಯಕ್ಕೆ ರಿಫೈನರಿಗಳು ಮಿಥೇನ್‌, ನೈಸರ್ಗಿಕ ಅನಿಲಗಳನ್ನು ಬಳಸಿಕೊಂಡು ಹೈಡ್ರೋಜನ್‌ ತಯಾರಿಸುತ್ತಿದ್ದು, ಇದರ ಉತ್ಪಾದನ ವೆಚ್ಚ ಕಡಿಮೆ. ಆದರೆ ಇವು ಹೊರಸೂಸುವ ಕಾರ್ಬನ್‌ ಮಾತ್ರ ಪರಿಸರದ ಮೇಲೆ ಪರಿಣಾಮ ಬೀರು ತ್ತದೆ. ಹಸುರು ಹೈಡ್ರೋಜನ್‌ನಲ್ಲಿ ಶೂನ್ಯ ಹೊರಸೂಸುವಿಕೆ. ಆದರೆ ಸದ್ಯಕ್ಕೆ ವೆಚ್ಚದಾಯಕವಾಗಿದೆ. ಆದರೂ ಸದ್ಯ ರಿಫೈನರಿಗಳಾದ ಎಂಆರ್‌ಪಿಎಲ್‌, ಐಒಸಿಎಲ್‌, ಗೈಲ್‌, ಬಿಪಿಸಿಎಲ್‌, ಒಎನ್‌ಜಿಸಿ ಮುಂತಾದ ಕಂಪೆನಿಗಳಿಗೆ ಗ್ರೀನ್‌ ಹೈಡ್ರೋಜನ್‌ ಉತ್ಪಾದಿಸುವಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ.

ಇದನ್ನೂ ಓದಿ: Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next