Advertisement

ಮೋದಿಗಾಗಿ ಬಿಜೆಪಿ ಕಾರ್ಯಕರ್ತರಿಂದ ದೇಶಾದ್ಯಂತ ಯಾಗ : ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ

09:46 PM Jan 06, 2022 | Team Udayavani |

ನವದೆಹಲಿ : ಪಂಜಾಬ್‌ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಾದ ಲೋಪದ ಸಂಬಂಧ ದೇಶಾದ್ಯಂತ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲಿ ಹ್ಯಾಷ್‌ಟ್ಯಾಗ್‌, ಪ್ರಧಾನಿಯವರ ಸುದೀರ್ಘ‌ ಜೀವನಕ್ಕಾಗಿ ಮಹಾಮೃತ್ಯುಂಜಯ ಹೋಮ, ಪ್ರತಿಭಟನೆಗಳಂಥ ಕ್ರಮಕ್ಕೆ ಕಾರ್ಯಕರ್ತರು ಮುಂದಾಗಿದ್ದಾರೆ.

Advertisement

ರಾಜಕೀಯ ಉದ್ದೇಶಕ್ಕಾಗಿಯೇ ಪ್ರಧಾನಿಯವರ ಭದ್ರತಾ ಲೋಪ ಮಾಡಲಾಗಿದೆ ಎಂಬುದು ಬಿಜೆಪಿಯ ನೇರ ಆರೋಪ. ಈ ಸಂಬಂಧ ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಿದ್ದು, ಸದ್ಯದಲ್ಲೇ ಭದ್ರತಾ ಲೋಪಕ್ಕೆ ಕಾರಣರಾದವರ ವಿರುದ್ಧ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ದೇಶಾದ್ಯಂತ ಹೋಮ

ಮಧ್ಯ ಪ್ರದೇಶ ಮೊದಲ್ಗೊಂಡು ದೇಶಾದ್ಯಂತ ಮೋದಿ ಹೆಸರಲ್ಲಿ ಮಹಾಮೃತ್ಯುಂಜಯ ಯಾಗ ನಡೆಸಲಾಗಿದೆ. ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ನೇತೃತ್ವದಲ್ಲಿಯೇ ಯಾಗ ನಡೆದಿದೆ. ಇದರಂತೆಯೇ ಉಳಿದ ಕಡೆಗಳಲ್ಲೂ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ, ವಿಶೇಷ ಹೋಮ, ಪೂಜೆಗಳನ್ನು ನಡೆಸಲಾಗಿದೆ. ಹಾಗೆಯೇ 12 ಜ್ಯೋತಿರ್ಲಿಂಗಗಳು ಇರುವ ದೇಗುಲಗಳಲ್ಲೂ ವಿಶೇಷ ಪೂಜೆ ನಡೆಸಲಾಗಿದೆ.

ಈ ಮಧ್ಯೆ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದು ಬೇಕೆಂದೇ ಭದ್ರತಾ ಲೋಪ ಮಾಡಲಾಗಿದೆ. ಇದೊಂದು ನಾಚಿಕೆಗೇಡಿನ ಸಂಗತಿಯಾಗಿದ್ದು, ಈ ಘಟನೆಯಾದ ಮೇಲೆ ಪ್ರಧಾನಿ ವಿರುದ್ಧ ಕೀಳುಮಟ್ಟದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಉತ್ತರಕಾಶಿಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನ್ಯಾಯಾಂಗ ತನಿಖೆಗೆ ಎನ್‌ಸಿಪಿ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪ ವಿಚಾರ ಅತ್ಯಂತ ಗಂಭೀರವಾಗಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಎನ್‌ಸಿಪಿ ಆಗ್ರಹಿಸಿದೆ. ಅಲ್ಲದೇ, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

ಇದನ್ನೂ ಓದಿ : ದಾಳಿಕೋರರ ಮೇಲೆ ಎರಗಿ ತನ್ನ ಮಾಲೀಕನ ಅಪಹರಣ ತಪ್ಪಿಸಿದ ನಾಯಿ

ಮೋದಿ ಅಲ್ಲಿಗೆ ಹೋಗಬಾರದಿತ್ತು

ಪಂಜಾಬ್‌ನಲ್ಲಿ ಘಟನೆ ಬಗ್ಗೆ ಮಾತನಾಡಿದ ರೈತ ಮುಖಂಡ ರಾಕೇಶ್‌ ಟಿಕಾಯತ್‌, ರೈತರ ಪ್ರತಿಭಟನೆ ಬಗ್ಗೆ ಅರಿವಿದ್ದೂ ಮೋದಿ ಅವರು, ಅಲ್ಲಿಗೆ ತೆರಳಬಾರದಿತ್ತು ಎಂದಿದ್ದಾರೆ. ಅಲ್ಲದೆ, ಇದರಲ್ಲಿ ರೈತರ ತಪ್ಪಿಲ್ಲ, ಕೇಂದ್ರ ಮತ್ತು ರಾಜ್ಯ  ಸರ್ಕಾರಗಳೇ ಭದ್ರತಾ ಲೋಪಕ್ಕೆ ಹೊಣೆ ಎಂದು ಹೇಳಿದ್ದಾರೆ.

ಚುನಾಯಿತ ಸರ್ಕಾರದ ವಿರುದ್ಧ ಪ್ರಹಾರ

ಬುಧವಾರದ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಚರಣ್‌ಜಿತ್‌ ಚನ್ನಿ, ಭದ್ರತಾ ಲೋಪವೊಡ್ಡಿ ಚುನಾಯಿತ ಸರ್ಕಾರವೊಂದನ್ನು ಉರುಳಿಸಲು ಬಿಜೆಪಿ ಸಂಚು ಮಾಡಿದೆ ಎಂದು ಆರೋಪಿಸಿದ್ದಾರೆ. ಫಿರೋಜ್‌ಪುರ ರ್ಯಾಲಿಯಲ್ಲಿ ಜನ ಸೇರದೇ ಇರುವುದರಿಂದ ರದ್ದು ಮಾಡಲಾಗಿದೆ. ಆದರೆ, ಈಗ ಭದ್ರತಾ ಲೋಪವೊಡ್ಡಿ ರ್ಯಾಲಿಯನ್ನು ರದ್ದು ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಪ್ರಧಾನಿಗಳು ದೇಶದ ಅತ್ಯಂತ ಗೌರವಾನ್ವಿತ ವ್ಯಕ್ತಿ. ಅವರು ಕೀಳುಮಟ್ಟದ ಪ್ರಚಾರ ಮಾಡಬಾರದು ಎಂದು ಹೇಳಿದ್ದಾರೆ.

ದಲಿತ ಸಿಎಂ ಗುರಾಣಿ

ಪಂಜಾಬ್‌ನಲ್ಲಿನ ಘಟನೆ ಬಗ್ಗೆ ಬಿಜೆಪಿ 13 ಅಂಶಗಳ ಕಾರ್ಯಕ್ರಮ ರೂಪಿಸಿದ್ದು, ಕಾಂಗ್ರೆಸ್‌ ವಿರುದ್ಧ ಎಲ್ಲ ಕೋನಗಳಿಂದಲೂ ಹೋರಾಟ ನಡೆಸಲು ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌, ದಲಿತ ಸಿಎಂ ಅಸ್ತ್ರ ಮುಂದಿಟ್ಟುಕೊಂಡು ತಿರುಗೇಟು ನೀಡಿದೆ. ಪಂಜಾಬ್‌ನಲ್ಲಿ ದಲಿತ ಸಿಎಂ ಆಡಳಿತದಲ್ಲಿ ಇರುವುದು ಸಹಿಸದೇ ಬಿಜೆಪಿ ಈ ರೀತಿ ಭದ್ರತಾ ಲೋಪದ ಗೂಬೆ ಕೂರಿಸುವ ಯತ್ನ ನಡೆಸುತ್ತಿದೆ ಎಂದು ಆರೋಪಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next