Advertisement

 ಎಂಆರ್‌ಎಫ್ ಘಟಕ: ರಾಜ್ಯದ ಮೊದಲ ಪ್ರಯೋಗ ಉಡುಪಿ ಜಿಲ್ಲೆಯಲ್ಲಿ

09:13 PM Jul 22, 2021 | Team Udayavani |

ಉಡುಪಿ: ರಾಜ್ಯದ ನಾಲ್ಕು ಕಡೆಗಳಲ್ಲಿ ಪೈಲೆಟ್‌ ಪ್ರಾಜೆಕ್ಟ್ ಆಗಿ ಆರಂಭಿಸಲಾಗುತ್ತಿರುವ ಮೆಟೀರಿಯಲ್‌ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಘಟಕಗಳಲ್ಲಿ ಮೊದಲ ಘಟಕ ಉಡುಪಿ ಜಿಲ್ಲೆಯಲ್ಲಿ ಶೀಘ್ರವೇ ಕಾರ್ಯಾರಂಭ ಮಾಡಲಿದೆ.

Advertisement

ಈಗಾಗಲೇ ಗ್ರಾ.ಪಂ. ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಘನ ಮತ್ತು ದ್ರವ್ಯ ಸಂಪನ್ಮೂಲ ನಿರ್ವಹಣೆ (ಎಸ್‌ಎಲ್‌ಆರ್‌ಎಂ) ವ್ಯವಸ್ಥೆಗೆ ಪೂರಕವಾಗಿ, ಮತ್ತಷ್ಟು ವೈಜ್ಞಾನಿಕವಾಗಿ ಎಂಆರ್‌ಎಫ್ ಮೂಡಿ ಬರಲಿದೆ. ಎಸ್‌ಎಲ್‌ಆರ್‌ಎಂನಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಸಂಗ್ರಹಿಸಲಾಗುತ್ತಿದೆ. ಇವುಗಳಲ್ಲಿ ಪ್ಲಾಸ್ಟಿಕ್‌, ಪೇಪರ್‌, ಕಬ್ಬಿಣ, ಥರ್ಮೋಕೋಲ್‌, ಬಟ್ಟೆ, ಚಪ್ಪಲಿ ಇತ್ಯಾದಿ ಒಣ ಕಸವನ್ನು ಮಾತ್ರ ವಿಂಗಡಿಸಿ ಇವುಗಳ ವಿಲೇವಾರಿ ಮಾಡುವ ಯೋಜನೆ ಇದಾಗಿದೆ.

ಉಡುಪಿ, ದ.ಕ., ರಾಮನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪೈಲೆಟ್‌ ಪ್ರಾಜೆಕ್ಟ್ ಯೋಜಿಸಲಾಗಿದೆ. ಇವುಗಳಲ್ಲಿ ಕಾರ್ಯಾರಂಭ ಮಾಡುವ ಹಂತದಲ್ಲಿರುವುದು ಉಡುಪಿ ಜಿಲ್ಲೆಯ ನಿಟ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ. ಇಲ್ಲಿ ಸುಮಾರು 10,000 ಚದರಡಿಯ ಕಟ್ಟಡದ ಕೆಲಸ ಅಂತಿಮ ಹಂತದಲ್ಲಿದೆ. ದ.ಕ. ಜಿಲ್ಲೆಯ ಗಂಜೀಮಠದಲ್ಲಿ ಕಟ್ಟಡದ ಕೆಲಸ ಆರಂಭವಾಗಬೇಕಾಗಿದೆಯಷ್ಟೆ. ಇಲ್ಲಿ ಇನ್ನು ಆರೆಂಟು ತಿಂಗಳುಗ ಳಲ್ಲಿ ಕಟ್ಟಡ ನಿರ್ಮಾಣ ಆಗುವ ನಿರೀಕ್ಷೆ ಇದೆ. ರಾಮನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಇನ್ನಷ್ಟು ವಿಳಂಬವಾಗಬಹುದು.

ನಿಟ್ಟೆಯ ಎಂಆರ್‌ಎಫ್ ಘಟಕದಲ್ಲಿ ಕಾಪು ಮತ್ತು ಕಾರ್ಕಳ ತಾಲೂಕಿನ ಸುಮಾರು 40 ಗ್ರಾ.ಪಂ.ಗಳ ಒಣ ತ್ಯಾಜ್ಯಗಳನ್ನು ಸಂಗ್ರಹಿಸಿ ಸಂಸ್ಕರಿಸಲಾಗುತ್ತದೆ. ಭವಿಷ್ಯದಲ್ಲಿ 2-3 ತಾಲೂಕುಗಳ ಗ್ರಾ.ಪಂ.ಗಳ ಒಣಕಸಗಳನ್ನು ಎಂಆರ್‌ಎಫ್ ಘಟಕಗಳ ಮೂಲಕ ವಿಲೇವಾರಿ ಮಾಡುವ ಗುರಿ ಇದೆ.

ಒಣಕಸ ಗಾತ್ರ  ತಗ್ಗಿಸುವ ಪ್ರಯೋಗ :

Advertisement

ಎಂಆರ್‌ಎಫ್ ಘಟಕದಲ್ಲಿ ಕನ್ವೇಯರ್‌ ಬೆಲ್ಟ್ ಮತ್ತು ಬೇಲಿಂಗ್‌ ಮೆಶಿನ್‌ ಎಂಬ ಎರಡು ಯಂತ್ರಗಳನ್ನು ಅಳವಡಿಸಲಾಗುವುದು. ಎಲ್ಲ ಬಗೆಯ ಒಣಕಸಗಳನ್ನು ನಿರ್ದಿಷ್ಟಪಡಿಸಿದ ಗ್ರಾ.ಪಂ.ಗಳಿಂದ ಸಂಗ್ರಹಿಸಿ ಎಂಆರ್‌ಎಫ್ ಘಟಕಕ್ಕೆ ಕಳುಹಿಸಲಾಗುವುದು. ಅಲ್ಲಿ ಮೊದಲು ಕನ್ವೇಯರ್‌ ಬೆಲ್ಟ್ ಸಹಾಯದಿಂದ ಕಬ್ಬಿಣ, ಪ್ಲಾಸ್ಟಿಕ್‌, ಪೇಪರ್‌ ಇತ್ಯಾದಿಗಳನ್ನು ವಿಂಗಡಿಸಲಾಗುವುದು. ಅನಂತರ

ಆಯಾ ತ್ಯಾಜ್ಯಗಳನ್ನು ಬೇಲಿಂಗ್‌ ಯಂತ್ರಕ್ಕೆ  ಹಾಕಿ ಅವುಗಳ ಗಾತ್ರವನ್ನು ಪ್ರಶರ್‌ (ಕಂಪ್ರಸ್‌) ಮೂಲಕ  ಕುಗ್ಗಿಸಲಾಗುತ್ತದೆ. ತ್ಯಾಜ್ಯಗಳಲ್ಲಿ ಬಟ್ಟೆ, ಚಪ್ಪಲಿ, ತೆಳುವಾದ ಪ್ಲಾಸ್ಟಿಕ್‌ ಸಾಮಗ್ರಿಗಳು ಪುನರುಪಯೋಗ ಮಾಡಲಾಗುವುದಿಲ್ಲ. ಪುನರುಪಯೋಗ ಮಾಡುವ ಸಾಮಗ್ರಿಗಳನ್ನು ವಿವಿಧೆಡೆ ಕಳುಹಿಸಲಾಗುವುದು. ಪುನರುಪಯೋಗ ಮಾಡಲಾಗದ ವಸ್ತುಗಳು ಕೇವಲ ಸಿಮೆಂಟ್‌ ಫ್ಯಾಕ್ಟರಿಗಳಲ್ಲಿ ಮಾತ್ರ ಬಳಕೆಯಾಗುತ್ತದೆ. ರಾಜ್ಯದಲ್ಲಿ ಸಿಮೆಂಟ್‌ ಫ್ಯಾಕ್ಟರಿಗಳು ಇರುವುದು ಬೆಳಗಾವಿ ಮತ್ತು ಕಲಬುರ್ಗಿಗಳಲ್ಲಿ ಮಾತ್ರ. ಒಂದು ಲೋಡ್‌ನ‌ಲ್ಲಿ 10-14 ಟನ್‌ ಕಳುಹಿಸಬೇಕಾಗುತ್ತದೆ. ಹೀಗಾಗಿ ತ್ಯಾಜ್ಯಗಳ ಗಾತ್ರಗಳನ್ನು ಕಿರಿದು ಗೊಳಿಸಲಾಗುತ್ತದೆ. ಇದು ಸಾಗಣೆಗೆ ಅನುಕೂಲವಾಗುತ್ತದೆ. ಈ ಮೂಲಕ ತ್ಯಾಜ್ಯಗಳ ಹೊರೆಯನ್ನು ಕಡಿಮೆ ಮಾಡುವ ಇರಾದೆ ಸರಕಾರದ್ದು.

ನಿಟ್ಟೆಯಲ್ಲಿ ಕಾರ್ಕಳ ಮತ್ತು ಕಾಪು ತಾಲೂಕಿನ ಗ್ರಾ.ಪಂ.ಗಳ ಒಣ ತ್ಯಾಜ್ಯಗಳನ್ನು ಸಂಸ್ಕರಿಸಿ ವಿಲೇವಾರಿ ಮಾಡುವ ಎಂಆರ್‌ಎಫ್ ಘಟಕದ ಕಾರ್ಯಾಚರಣೆ ಶೀಘ್ರದಲ್ಲಿ ಆರಂಭವಾಗಲಿದೆ. ಮುಂದಿನ ತಿಂಗಳು ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಡಾ| ನವೀನ್‌ ಭಟ್‌,  ಜಿ.ಪಂ. ಸಿಇಒ, ಉಡುಪಿ

ರಾಜ್ಯದಲ್ಲಿ 100 ಕಡೆ ಎಂಆರ್‌ಎಫ್ ಘಟಕಗಳನ್ನು ಸ್ಥಾಪಿಸುವ ಗುರಿ ಸರಕಾರಕ್ಕೆ ಇದೆ. ಇದು ಮೂರು ವರ್ಷಗಳ ಯೋಜನೆ. ಈಗ ಪೈಲೆಟ್‌ ಪ್ರಾಜೆಕ್ಟ್ ಆಗಿ ನಾಲ್ಕು ಕಡೆ ಆರಂಭಿಸಲಾಗುತ್ತಿದೆ. ಮುಂದಿನ ವರ್ಷ ಎಲ್ಲ ಜಿಲ್ಲೆಗಳಲ್ಲಿ, ಅನಂತರದ ಎರಡು ವರ್ಷದಲ್ಲಿ ವರ್ಷಕ್ಕೆ ತಲಾ 30 ಕಡೆ ಆರಂಭಿಸಲಾಗುವುದು.  ಮೂರ್ತಿ, ಹಿರಿಯ ವ್ಯವಸ್ಥಾಪಕರು, ಸಾಹಸ್‌ ವೇಸ್ಟ್‌  ಮೆನೇಜ್ಮೆಂಟ್‌ ಪ್ರೈ.ಲಿ., ಬೆಂಗಳೂರು 

ಮಟಪಾಡಿ ಕುಮಾರಸ್ವಾಮಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next