Advertisement
“ಉದಯವಾಣಿ’ಗೆ ನೀಡಿದ ನೇರಾನೇರ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಹತ್ತು-ಹದಿನೈದು ವರ್ಷದಿಂದ ಹಂತಹಂತವಾಗಿ ಹೊಂಚು ಹಾಕಿ ಸಿದ್ದರಾಮಯ್ಯ ಈ ಭೂಮಿ ಹೊಡೆದುಕೊಂಡಿದ್ದಾರೆ. ಈ ಕಲಿಯುಗದಲ್ಲಿ ಯಾರಾದರೂ ಅರಿಸಿನ-ಕುಂಕುಮಕ್ಕೆ ಮೂರು ಎಕ್ರೆ ದಾನ ಕೊಡುತ್ತಾರೆ ಎಂದರೆ ನಂಬಲು ಸಾಧ್ಯವೇನ್ರೀ ? ಸಿದ್ದರಾಮಯ್ಯನವರೇ ನಿಮ್ಮ ರಾಜಕಾರಣದ ಸಂಧ್ಯಾ ಕಾಲದಲ್ಲಿ ಕಳಂಕ ಅಂಟಿದೆ. ರಾಜ್ಯದ ಜನತೆಯ ದಾರಿ ತಪ್ಪಿಸದೇ ಖುರ್ಚಿ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಈಗ ಮೂರು ವಿಚಾರ ನಿಮ್ಮ ಮುಂದೆ ಇದೆ. ಒಂದು ಮುಡಾ, ಇನ್ನೊಂದು ವಾಲ್ಮೀಕಿ, ಇನ್ನೊಂದು ಎಸ್‌ಸಿ ಎಸ್‌ಪಿ, ಟಿಎಸ್‌ಪಿ. ಇದು ಮೂರು ಕೂಡ ಸಿದ್ದರಾಮಯ್ಯನವರ ಸುತ್ತಲೇ ಸುತ್ತುತ್ತಿದೆ.ಇದನ್ನು ಹೇಗೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೀರಿ ?
ಯಾವುದೇ ಸರಕಾರ ಬಂದಾಗ ಒಂದು ವರ್ಷ ಹನಿಮೂನ್ ಪೀರಿಯಡ್ ಇರುತ್ತದೆ. ಸಾಮಾನ್ಯವಾಗಿ ಆಗ ಯಾವುದೇ ತಪ್ಪು ಮಾಡುವುದಿಲ್ಲ. ಹಗರಣ, ವಸೂಲಿ ಇತ್ಯಾದಿ ವಿಚಾರಕ್ಕೆ ಕೈ ಹಾಕುವುದಿಲ್ಲ. ಹೊಸದಾಗಿ ಚುನಾಯಿತರಾಗಿದ್ದೇವೆ ಎಂಬ ಭಯ ಇರುತ್ತದೆ. ಆದರೆ ಈ ಕಾಂಗ್ರೆಸ್ ಸರಕಾರ ಬಂದ ಮೇಲೆ ಹದಿನಾಲ್ಕು ತಿಂಗಳಲ್ಲಿ ಮೂರು ದೊಡ್ಡ ಹಗರಣವನ್ನು ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದಷ್ಟು ದೊಡ್ಡ ಪ್ರಕರಣ ಕರ್ನಾಟಕದ ಇತಿಹಾಸದಲ್ಲೇ ನಡೆದಿಲ್ಲ. ಸ್ವತಃ ಮುಖ್ಯಮಂತ್ರಿ ತನ್ನ ಕುಟುಂಬಕ್ಕೆ 14 ನಿವೇಶನ ಹಂಚಿಕೆ ಮಾಡಿಕೊಂಡಿದ್ದು ಇದೇ ಮೊದಲು. ಅವರ ಹಿಂಬಾಲಕರಿಗೂ ನೂರಾರು ಸೈಟ್ ಹಂಚಿಕೆಯಾಗಿದೆ. ಮುಡಾದಲ್ಲಿ 85 ಸಾವಿರ ಜನ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಅವರಿಗೆ ಇಲ್ಲ ಎಂದು ಹೇಳಿ ಇವರಿಗೆ ಹೇಗೆ ಕೊಟ್ಟರು ?ಅದು ಕೂಡ ಇಷ್ಟು ಹಳೆ ಲೇಔಟ್‌ನಲ್ಲಿ ! ಹತ್ತು ಹದಿನೈದು ವರ್ಷದಿಂದ ಯಾಕೆ ಇಷ್ಟು ಸೈಟ್ ಉಳಿಸಿಕೊಂಡಿದ್ದರು ?
ಅಂದರೆ ಸಿದ್ದರಾಮಯ್ಯನವರಿಗೆ ಕೊಡುವುದಕ್ಕಾಗಿ ಮುಡಾ ಈ ನಿವೇಶನಗಳನ್ನು ಉಳಿಸಿಕೊಂಡಿತ್ತಾ?
ಹೌದು. ಹೊಂಚು ಹಾಕಿ ಸಿದ್ದರಾಮಯ್ಯನವರು ಈ ಭೂಮಿ ಹೊಡೆದಿದ್ದಾರೆ. ಈ ಯೋಜನೆ ಪ್ರಾರಂಭವಾಗಿದ್ದು ಸಿದ್ದರಾಮಯ್ಯ ಮೊದಲ ಬಾರಿಗೆ ಉಪಮುಖ್ಯಮಂತ್ರಿಯಾಗಿದ್ದಾಗ. ಅಲ್ಲಿಂದ ಹಂತಹಂತವಾಗಿ ಹೆಜ್ಜೆ ಇಟ್ಟು ಹೊಡೆದುಕೊಂಡಿದ್ದಾರೆ. ಯಾವನದೋ ಜಮೀನು. ಅದನ್ನು ಖರೀದಿಸಿ ಡಿನೋಟಿಫಿಕೇಶನ್ ಮಾಡಿಸುತ್ತಾರೆ. ಅಮಾಯಕ ದಲಿತ ಅರ್ಜಿ ಹಾಕಿದೇ ಇದ್ದರೂ ಮುಡಾದವರು ದುಡೂx ಕಟ್ಟಿರುತ್ತಾರೆ. ಡಿನೋಟಿಫೈ ಆದ ಮೇಲೆ ಮತ್ತೆ ಹೇಗೆ ಕನ್‌ವರ್ಶನ್ ಮಾಡಲು ಸಾಧ್ಯ ? ಅನಂತರ ಅವರ ಪತ್ನಿಯ ಸೋದರನಿಗೆ ವರ್ಗಾವಣೆಯಾಗಿ ಇವರಿಗೆ ಅರಿಸಿನ-ಕುಂಕುಮದ ರೂಪದಲ್ಲಿ ಬರುತ್ತದೆ. ಅವನಿಗೆ ಸಾಕಷ್ಟು ಆಸ್ತಿ ಇದ್ದು ಎಲ್ಲರಿಗೂ ಅರಿಸಿನ ಕುಂಕುಮ ಕೊಟ್ಟರೆ ಒಂದು ಲೆಕ್ಕ.
ಈ ಕಲಿಯುಗದಲ್ಲಿ ಅರಿಸಿನ -ಕುಂಕುಮಕ್ಕೆ ಮೂರೂವರೆ ಎಕ್ರೆ ಕೊಡುವುದು ಅನುಮಾನ ಬರುತ್ತದೆ. ಅದು ಕೂಡ ಮುಖ್ಯಮಂತ್ರಿಯಾದವರ ಪತ್ನಿಗೆ ಅರಿಸಿನ-ಕುಂಕುಮಕ್ಕೆ ಹಣ ಕೊಡುತ್ತಾರೆಂದರೆ ನಂಬಲು ಸಾಧ್ಯವೇ ? ಇದೆಲ್ಲ ಸುಮ್ಮನೆ ಕತೆ. ಅತ್ಯಂತ ಯೋಜಿತವಾಗಿ ಮೊದಲಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಆ ಜಾಗವನ್ನು ತಮ್ಮ ಕುಟುಂಬದ ಹೆಸರಿಗೆ ಮಾಡಿಕೊಳ್ಳಬೇಕೆಂಬುದೇ ಈ ಎಲ್ಲ ಪ್ರಹಸನಗಳ ಹಿಂದಿನ ಉದ್ದೇಶವಾಗಿದೆ.
ಇದಕ್ಕೆ ಸಂಬಂಧಪಟ್ಟಂತೆ ಬಿಜೆಪಿಯ ಹೋರಾಟದ ಸ್ವರೂಪ ಏನು ?
ಕಳೆದ ಒಂದು ತಿಂಗಳಿಂದ ಹೋರಾಟ ನಡೆಸುತ್ತಿದ್ದೇವೆ. ಇದು ಟಚ್ ಆಂಡ್ ಗೋ ಹೋರಾಟ ಅಲ್ಲ. ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ನಾವು ಹೋರಾಟ ಕೈಗೆತ್ತಿಕೊಂಡ ಮೇಲೆ ವಾಲ್ಮೀಕಿ ನಿಗಮದ ಹಗರಣದಲ್ಲಿ ಒಬ್ಬ ಸಚಿವರ ರಾಜೀನಾಮೆಯಾಗಿದೆ. ಮುಡಾದಲ್ಲೂ ಮುಖ್ಯಮಂತ್ರಿ ರಾಜೀನಾಮೆ ಕೊಡಿಸಬೇಕೆಂಬುದೇ ನಮ್ಮ ಉದ್ದೇಶ. ಗುರುವಾರ ಮತ್ತೆ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ. ರಾಜ್ಯಾದ್ಯಂತ, ನಿಗಮಗಳ ಮುಂದೆ ಹೋರಾಡಿದ್ದೇವೆ. ಮೈಸೂರು ಚಲೋ ಮಾಡಿದ್ದೇವೆ. ಸಿಎಂ ಮನೆಗೆ ಮುತ್ತಿಗೆ ಹಾಕಿದ್ದೇವೆ. ಯಾವುದಾದರೊಂದು ವಿಚಾರಕ್ಕೆ ಬಿಜೆಪಿ ಇಷ್ಟೊಂದು ಹೋರಾಟ ಮಾಡಿದ ಇತಿಹಾಸವೇ ಇಲ್ಲ. ಹೈಯೆಸ್ಟ್ ಹೋರಾಟ ಮಾಡಿದ್ದೇವೆ. ನಿಲ್ಲಿಸುವುದಿಲ್ಲ.
ಹಿಂದೆ ಭೂ ಹಗರಣದ ಆರೋಪ ಬಂದಾಗ ಖಾಸಗಿ ಕಂಪ್ಲೇಟ್ ಹಾಕಿ ಯಡಿಯೂರಪ್ಪನವರನ್ನು ಕಟಕಟೆಗೆ ತರಲಾಗಿತ್ತು. ರಾಜ್ಯದ ದೃಷ್ಟಿಯಿಂದ ಮತ್ತು ಮುಡಾದಲ್ಲಿ ಅರ್ಜಿ ಸಲ್ಲಿಸಿದ 86 ಸಾವಿರ ಜನರ ಹಿತದೃಷ್ಟಿಯಿಂದ ಬಿಜೆಪಿ ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸುತ್ತದೆಯೇ ? ಅಥವಾ ಖಾಸಗಿ ದೂರು ಕೊಡುತ್ತೀರಾ ?
ಹಿಂದೆ ಕೂಡ ಖಾಸಗಿಯಾಗಿ ದೂರು ಸಲ್ಲಿಕೆಯಾಗಿತ್ತು. ಯಾವುದೇ ರಾಜಕೀಯ ಪಕ್ಷ ಇದರಲ್ಲಿ ಭಾಗಿಯಾಗಿರಲಿಲ್ಲ. ಈಗಲೂ ಖಾಸಗಿ ದೂರು ರಾಜ್ಯಪಾಲರನ್ನು ತಲುಪಿದೆ ಎಂಬ ಮಾಹಿತಿ ನನಗಿದೆ. ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ಇದನ್ನು ನಾವು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿರುವುದರಿಂದ ಎಲ್ಲ ರೀತಿಯಲ್ಲೂ ಹೋರಾಟ ಮಾಡುತ್ತೇವೆ.
ಈ ವಿಚಾರ ಮೊದಲು ಮಾಧ್ಯಮಗಳಲ್ಲಿ ಬಂತು. ಆದರೆ ವಿಪಕ್ಷಗಳು ಈ ಬಗ್ಗೆ ನಿರೀಕ್ಷಿತ ಹೋರಾಟ ನಡೆಸಲಿಲ್ಲ ಎಂಬ ಟೀಕೆಗಳು ಕೇಳಿ ಬಂದವು. ಹೈಕಮಾಂಡ್ ಮಧ್ಯಪ್ರವೇಶ ಕೂಡಾ ಆಗಿದೆ ಎಂಬ ಮಾತಿದೆ. ನಿಜವೇ ?
ನಮಗೆ ಹೈಕಮಾಂಡ್‌ನಿಂದ ಇದುವರೆಗೆ ಯಾವುದೇ ಫೋನ್ ಬಂದಿಲ್ಲ. ಮಾಧ್ಯಮದಲ್ಲಿ ಬಂದ ತತ್‌ಕ್ಷಣ ಸ್ಪಂದಿಸಿದ್ದೇವೆ. ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದೇವೆ. ನಿಗಮದ ವಿರುದ್ಧವೂ ಹೋರಾಟ ಮಾಡಿದ್ದೇವೆ. ಶಾಸಕರು ಮುತ್ತಿಗೆ ಹಾಕಿದ್ದೇವೆ. ಈಗ ವಿಧಾನಸಸಭೆಯಲ್ಲೂ ಹೋರಾಟ ಮಾಡುತ್ತಿದ್ದೇವೆ. ಮುಡಾಕ್ಕೆ ಸಂಬಂಧಪಟ್ಟಂತೆ ಇಂಚಿಂಚು ಮಾಹಿತಿಯನ್ನು ಇಲ್ಲಿ ಬಿಚ್ಚಿಡುತ್ತೇವೆ. ನಾನು ಮೂರೂವರೆ ಗಂಟೆಗೂ ಹೆಚ್ಚು ಕಾಲ ವಾಲ್ಮೀಕಿ ಹಗರಣದ ಬಗ್ಗೆ ಮಾತನಾಡಿದ್ದೇನೆ. 12 ದಾಖಲೆ ಪತ್ರ ಇಟ್ಟಿದ್ದೇನೆ. ಬಿಡುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ಸರಕಾರ ಈ ಇಕ್ಕಳದಿಂದ ತಪ್ಪಿಸಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಜನರ ಮುಂದೆ ಅಪರಾಧಿ ಸ್ಥಾನದಲ್ಲಿ ಕಾಂಗ್ರೆಸ್ ನಿಂತಿದೆ. ದಲಿತರ ಚಾಂಪಿಯನ್ ಎಂದುಕೊಳ್ಳುತ್ತಿದ್ದರು. ಅದು ಈಗ ಅಳಿಸಿಹೋಗಿದೆ.
ನಿಮ್ಮ ಮೇಲೆ ಹೊಂದಾಣಿಕೆ ಆರೋಪ ಬಂದಿದೆ. ಇದನ್ನು ಒಪ್ಪಿಕೊಳ್ಳುತ್ತೀರಾ ?
ಇಲ್ಲ. ಈ ಮೂರು ವಿಚಾರಕ್ಕೆ ಸಂಬಂಧಪಟ್ಟಂತೆ ನಮ್ಮ ಹೋರಾಟದ ಬಗ್ಗೆ ಕಿಂಚಿತ್ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಇದನ್ನು ರಾಜ್ಯದ ಜನ ಹಾಗೂ ಮಾಧ್ಯಮ ನೋಡುತ್ತಿದೆ. ಮೊನ್ನೆ ನಾನು ಎಲ್ಲರ ಕಣ್ಣುತಪ್ಪಿಸಿ ಮೈಸೂರಿಗೆ ಹೋದೆ. ನಾಗಮಂಗಲದಿಂದ ಮೈಸೂರಿನವರೆಗೆ ಸುಮಾರು ಮೂರು ಗಂಟೆ ಕಾಲ ಗೂಡ್ಸ್ ಆಟೋದಲ್ಲಿ ಬಚ್ಚಿಟ್ಟುಕೊಂಡು ಮೈಸೂರಿಗೆ ಬಂದೆ. ನಮಗೆ ಹೋರಾಟದ ಕಿಚ್ಚಿದೆ. ಇಲ್ಲವಾದರೆ ಎಲ್ಲೋ ಒಂದು ಕಡೆ ನಿಂತು ಧಿಕ್ಕಾರ ಕೂಗಿ ವಾಪಾಸ್ ಬರುತ್ತಿದ್ದೆ. ಆದರೆ ನಾನು ಹಾಗೆ ಮಾಡಿಲ್ಲ. ಎಲ್ಲರ ಕಣ್ಣು ತಪ್ಪಿಸಿ ಮೈಸೂರಿಗೆ ಹೋಗಿ ಹೋರಾಟ ಮಾಡಿ ಬಂಧನಕ್ಕೆ ಒಳಗಾಗಿದ್ದೇನೆ. ಈ ಸರಕಾರ ಮಾಡಿದ ತಪ್ಪಿಗೆ ಶಿಕ್ಷಯಾಗುವವರೆಗೂ ಹೋರಾಟ ಮಾಡುತ್ತೇವೆ.
ಗ್ರೇಟರ್ ಬೆಂಗಳೂರು, ಬ್ರ್ಯಾಂಡ್ ಬೆಂಗಳೂರಿನ ನಡುವೆ ಬೆಂಗಳೂರು ವಿಭಜನೆಯ ಪ್ರಸ್ತಾವವೂ ಮುನ್ನೆಲೆಗೆ ಬಂದಿದೆ. ಮಸೂದೆ ಮಂಡನೆ ಸಾಧ್ಯತೆಯೂ ಇದೆ. ವಿಭಜನೆಗೆ ನಿಮ್ಮ ಸಹಮತ ಇದೆಯೇ ?
ಹಿಂದೆಯೂ ವಿರೋಧಿಸಿದ್ದೆ. ಈಗಲೂ ವಿರೋಧಿಸುತ್ತಿದ್ದೇನೆ. ಮುಂದೆಯೂ ವಿರೋಧಿಸುತ್ತೇನೆ. ಬೆಂಗಳೂರಿಗೆ ತನ್ನದೇ ಆದ ವೈಚಾರಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಒಡೆಯುವ ಯಾವುದೇ ಪ್ರಯತ್ನವನ್ನು ಬಿಜೆಪಿ ಬೆಂಬಲಿಸುವುದಿಲ್ಲ. ಆಡಳಿತಾತ್ಮಕ ಬದಲಾವಣೆಯನ್ನು ಬೇಕಾದರೆ ಮಾಡಿಕೊಳ್ಳಿ. ದಿಲ್ಲಿಯಲ್ಲಿ ಮೂರು ಭಾಗ ಮಾಡಿ ಮತ್ತೆ ಒಂದೇ ಪಾಲಿಕೆ ಬಂದಿದೆ. ಪ್ರಧಾನಿ ಒಂದು ದೇಶವನ್ನು, ಮುಖ್ಯಮಂತ್ರಿ ಒಂದು ರಾಜ್ಯವನ್ನು ಆಳುವುದಕ್ಕೆ ಸಾಧ್ಯವಾದರೆ, ಒಂದು ಕೋಟಿ ಜನಸಂಖ್ಯೆ ಇರುವ ಬಿಬಿಎಂಪಿಯನ್ನು ಒಬ್ಬ ಮೇಯರ್ ಆಡಳಿತ ಮಾಡುವುದಕ್ಕೆ ಯಾಕೆ ಸಾಧ್ಯವಿಲ್ಲ ?
ಹಾಗಾದರೆ ಡಿ.ಕೆ.ಶಿವಕುಮಾರ್ ಬೆಂಗಳೂರನ್ನು ಪ್ರಯೋಗಶಾಲೆ ಮಾಡಿಕೊಂಡಿದ್ದಾರಾ ?
ಬೆಂಗಳೂರು ಡಿ.ಕೆ.ಶಿವಕುಮಾರ್ ಪಾಲಿಗೆ ಪ್ರಯೋಗಶಾಲೆ ಮಾತ್ರವಲ್ಲ. ಬ್ಯುಸಿನೆಸ್ ಬೆನಿಫಿಟ್ ಕೂಡ ಆಗಿದೆ.
ಒಂದೊಮ್ಮೆ ಸರಕಾರ ಈ ಪ್ರಯತ್ನಕ್ಕೆ ಮುಂದಾದರೆ?
ನಾವು ಪ್ರತಿಭಟಿಸುತ್ತೇವೆ.
ತುಂಬಾ ದಿನದಿಂದ ನೀವು ಇದು ಪೂರ್ಣಾವಧಿ ಸರಕಾರ ಅಲ್ಲ ಎಂದು ಹೇಳುತ್ತಿದ್ದೀರಿ. ಆ ಮಾತಿಗೆ ಈಗಲೂ ಬದ್ಧರಾಗಿದ್ದೀರಾ ? ಸರಕಾರ ಯಾರಿಂದ ಪತನವಾಗಲಿದೆ ?
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ಕೋಲ್ಡ್ ವಾರ್ ನಡೆಯುತ್ತಿದೆ. ಯಾವಾಗ ಯಾರ ಕೈ ಮೇಲಾಗುತ್ತದೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಸರಕಾರ ಒಳಜಗಳದಿಂದ ಬೀಳುವುದು ಗ್ಯಾರಂಟಿ.
ಕಸದ ವಿಚಾರದಲ್ಲಿ 45 ಸಾವಿರ ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಹದಿನೈದು ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆಂದು ಕುಮಾರಸ್ವಾಮಿ ಮಾಡಿರುವ ಆರೋಪ ನಿಮ್ಮ ಗಮನಕ್ಕೆ ಇದೆಯೇ ?
ಆ ಮಾಹಿತಿ ನನಗೂ ಇದೆ. ಇದೇನಾದರೂ ಆದರೆ ಬೆಂಗಳೂರಿಗೆ ಆಗುವ ಅನಾಹುತವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಒಬ್ಬ ಚುನಾಯಿತ ಪ್ರತಿನಿಧಿಗೆ ಇರುವುದೇ ಐದು ವರ್ಷದ ಅವಧಿ. ಆದರೆ ಯಾವುದೋ ಬೇನಾಮಿ ಕಂಪೆನಿಗೆ 30 ವರ್ಷಕ್ಕೆ ಲೀಸ್ ಕೊಡುತ್ತಾರೆ ಎಂದರೆ ಏನರ್ಥ? ಇದು ಕಮಿಷನ್ ಹೊಡೆಯುವುದಕ್ಕೆ ಮಾಡುತ್ತಿರುವ ಪ್ಲ್ರಾನ್. ಇದು ಜಾರಿಯಾದರೆ ಬೆಂಗಳೂರಿಗೆ ವಿಷ ಕೊಟ್ಟಂತೆ. ಈಗಾಗಲೇ ಕಸ ವಿಷವಾಗಿದೆ. ಈ ಸ್ಕ್ಯಾಂಡಲ್ ಕಾಂಗ್ರೆಸ್ ಮಾಡುವ ಅತೀದೊಡ್ಡ ಪಾಪದ ಕಾರ್ಯವಾಗಲಿದೆ.
ರಾಜಕಾರಣದಲ್ಲಿ ಸಮೀಕರಣಗಳು ನಿತ್ಯ ಕೆಲಸ ಮಾಡುತ್ತವೆ. ಕುಮಾರಸ್ವಾಮಿ ಜತೆ ಮೈತ್ರಿ ಮಾಡಿಕೊಂಡ ಬಳಿಕ ಬಿಜೆಪಿಯ ಒಕ್ಕಲಿಗ ನಾಯಕರಿಗೆ ವರಿಷ್ಠರು ನೀಡುವ ಆದ್ಯತೆ ಕಡಿಮೆಯಾಗಿದೆ ಎಂಬ ಮಾತಿದೆ…
ಹಾಗೇನೂ ಇಲ್ಲ. ಈ ತರದ ಸುದ್ದಿ ಹರಡುವುದಕ್ಕೆ ಯಾರೋ ಕೆಲವರು ಪ್ರಯೋಜಕತ್ವ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಹಾಯ ಜೆಡಿಎಸ್‌ಗೆ, ಜೆಡಿಎಸ್ ಸಹಾಯ ನಮಗೆ ಸಿಕ್ಕಿದೆ. ಕಳೆದ ಬಾರಿ ನಾವು 25 ಸ್ಥಾನ ಗೆದ್ದಿದ್ದೆವು. ಈ ಬಾರಿ 19 ಗೆದ್ದಿದ್ದೇವೆ. ಈ ಬಾರಿ ಬೆಂಗಳೂರು ಗ್ರಾಮಾಂತರ ಗೆದ್ದಿದ್ದೇವೆ. ಕೋಲಾರದಲ್ಲಿ ಕಳೆದ 25 ವರ್ಷದಿಂದಲೂ ಜೆಡಿಎಸ್ ಮೂರನೇ ಸ್ಥಾನದಲ್ಲಿರುತ್ತಿತ್ತು. ಈ ಬಾರಿ ನಾವು ಬೆಂಬಲಿಸಿದ್ದರಿಂದ ಜೆಡಿಎಸ್ ಗೆಲ್ಲುವುದಕ್ಕೆ ಸಾಧ್ಯವಾಯ್ತು. ಕರ್ನಾಟಕದಲ್ಲಿ ಮೋದಿ ಅಲೆ ಹಾಗೂ ಬಿಜೆಪಿ ಕೇಡರ್ ಪ್ರಬಲವಾಗಿದೆ. ಬಿಜೆಪಿಯ ಒಕ್ಕಲಿಗ ನಾಯಕತ್ವವೂ ಪ್ರಬಲವಾಗಿದೆ. ಸಿದ್ದರಾಮಯ್ಯ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಬಿಬಿಎಂಪಿ ಚುನಾವಣೆಯನ್ನು ನಾವು ಗೆದ್ದಿದ್ದೆವು. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 17 ಕಡೆ ನಾವು ಗೆದ್ದಿದ್ದೆವು.
ಉದಯವಾಣಿ ಸಂದರ್ಶನ
ರಾಘವೇಂದ್ರ ಭಟ್