Advertisement

ಮಿಸ್ಟರ್ ಸವದಿ ಕಾಂಗ್ರೆಸ್ ಕಾರ್ಯಕರ್ತರ ಸುದ್ದಿಗೆ ಬರಬೇಡಿ: ಮಾಜಿ ಸಚಿವೆ ಉಮಾಶ್ರೀ ಕಿಡಿ

07:40 PM Feb 25, 2023 | Team Udayavani |

ರಬಕವಿ-ಬನಹಟ್ಟಿ: ಮಿಸ್ಟರ್ ಸಿದ್ದು ಸವದಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಮತ್ತು ನಾಯಕರ ಸುದ್ದಿಗೆ ಬಂದರೆ, ಪ್ರಕರಣ ದಾಖಲೆ ಮಾಡಿದರೆ ಅವರ ಭಾವನೆಗಳಿಗೆ ಉರಿ ಹಚ್ಚಿದರೆ ಇಡೀ ತೇರದಾಳ ಕಾಂಗ್ರೆಸ್ ಹೊತ್ತಿ ಉರಿಯುತ್ತಿದೆ ಎಚ್ಚರವಿರಲಿ ಎಂದು ಮಾಜಿ ಸಚಿವೆ ಉಮಾಶ್ರೀ ಬಿಜೆಪಿ ಶಾಸಕ ಸಿದ್ದು ಸವದಿಯವರಿಗೆ ಶನಿವಾರ ಎಚ್ಚರಿಕೆ ನೀಡಿದ್ದಾರೆ.

Advertisement

ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಶಾಸಕ ಸಿದ್ದು ಸವದಿಯವರು ಧಾರವಾಡ, ಬೆಳಗಾವಿ, ರಾಮದುರ್ಗ ಸೇರಿದಂತೆ ಇನ್ನೀತರ ಕಡೆಗಳಲ್ಲಿ ಆಕ್ರಮವಾಗಿ 150 ಕ್ಕೂ ಹೆಚ್ಚು ಎಕರೆ ಭೂಮಿಯನ್ನು ತಮ್ಮ ಸಂಬಂಧಿಕರ ಹೆಸರಿನಲ್ಲಿ ಪಡೆದುಕೊಂಡಿದ್ದಾರೆ. ಶಾಸಕ ಸವದಿಯವರು ಪೊಲೀಸ್ ಹಾಗೂ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಮುಖಂಡರ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿರುವುದು ಖಂಡನೀಯವಾಗಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದರು.

ಹಳಿಂಗಳಿ ಗ್ರಾಮದ ಕಾಂಗ್ರೆಸ್ ಮುಖಂಡ ರಾಜು ನಂದೆಪ್ಪನವರ ಹಾಕಿದ ಸವಾಲಿಗೆ ಸವಾಲು ಹಾಕಿ ತಕ್ಕ ಉತ್ತರವನ್ನು ನೀಡಬೇಕಾಗಿದೆ. ಸವದಿಯವರ ಅಧಿಕಾರ ಅವಧಿಯಲ್ಲಿ ಕ್ಷೇತ್ರದ ಜನರು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸವದಿ ಕ್ಷೇತ್ರದಲ್ಲಿ ರಾಜಕೀಯವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ ಪಕ್ಷ ಶುದ್ಧ ಆಡಳಿತ ಮತ್ತು ಶುದ್ಧ ರಾಜಕೀಯವನ್ನು ಮಾಡಿದೆ. ನಿಮ್ಮದು ಜನ ವಿರೋಧಿ ಸರ್ಕಾರವಾಗಿದೆ. ನಿಮ್ಮ ನಡುವಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಮಾಜಿ ಸಚಿವೆ ಉಮಾಶ್ರೀ ತಿಳಿಸಿದರು.

ಹಳಿಂಗಳಿ ಗ್ರಾಮದ ಕಾಂಗ್ರೆಸ್ ಮುಖಂಡ ರಾಜು ನಂದೆಪ್ಪನವರ ಮಾತನಾಡಿ, ಹಳಿಂಗಳಿ ಗ್ರಾಮ ಪಂಚಾಯ್ತಿಯಲ್ಲಿ ರೂ. 80 ಲಕ್ಷದಷ್ಟು ಬಿಲ್ ಗಳು ಬಾಕಿ ಇವೆ. ಅದೇ ರೀತಿಯಾಗಿ ಕಾಂಗ್ರೆಸ್ ಆಡಳಿತದಲ್ಲಿರುವ ಪಂಚಾಯ್ತಿಗಳಿಗೆ ಅನುದಾನ ನೀಡುತ್ತಿಲ್ಲ. ಕ್ಷೇತ್ರದ ಅಧಿಕಾರಿಗಳು ಅವರ ಸಂಬಂಧಿಕರೇ ಆಗಿದ್ದಾರೆ. ಅದೇ ರೀತಿಯಾಗಿ ಇಲ್ಲಿಯ ಗುತ್ತಿಗೆದಾರರು ಅವರಿಗೆ ಬೇಕಾದವರು ಇದ್ದಾರೆ. ಸವದಿಯವರು ಕ್ಷೇತ್ರದಲ್ಲಿ ಕೈಗೊಂಡ ಕಾಮಗಾರಿಗಳ ಕುರಿತು ತನಿಖೆ ಆಗಬೇಕು. ಶಾಸಕ ಸವದಿ ಕ್ಷೇತ್ರದಲ್ಲಿ ಹಿಟ್ಲರ್ ಸಂಸ್ಕೃತಿಯ ಆಡಳಿತ ನಡೆಸುತ್ತಿದ್ದಾರೆ ಮತ್ತು ವೈರತ್ವದ ರಾಜಕೀಯ ಮಾಡುತ್ತಿದ್ಧಾರೆ ಎಂದು ಆರೋಪಿಸಿದರು.

Advertisement

ಡಾ.ಪದ್ಮಜೀತ ನಾಡಗೌಡ ಪಾಟೀಲ ಮಾತನಾಡಿ, ಕ್ಷೇತ್ರದ ಬಿಜೆಪಿ ಶಾಸಕ ಸವದಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಶಾಸಕ ಸವದಿಯವರ ಭ್ರಷ್ಟಾಚಾರಕ್ಕೆ ಸ್ವಪಕ್ಷದ ಮುಖಂಡರಿಂದಲೇ ಮಾಹಿತಿಯಿದ್ದು, ತಕ್ಷಣವೇ ಬಂಧಿಸದಿದ್ದಲ್ಲಿ ದೇಶಬಿಟ್ಟು ತೆರಳಲಿದ್ದಾರೆಂದು ಹೇಳಿರುವದೇ ಸಾಕ್ಷಿಯಾಗಿದೆ. ಅಲ್ಲದೇ ಸಚಿವ ಡಾ.ಅಶ್ವಥನಾರಾಯಣ ಕೂಡಾ ಸಿದ್ಧರಾಮಯ್ಯನವರ ವಿರುದ್ಧ ಮಾತನಾಡಿರುವುದು ಕೂಡಾ ಖಂಡನೀಯವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶಂಕರ ಸೋರಗಾವಿ, ಸಿದ್ದು ಕೊಣ್ಣೂರ, ನೀಲಕಂಠ ಮುತ್ತೂರ, ರಾಹುಲ ಕಲೂತಿ ಸೇರಿದಂತೆ ಅನೇಕರು ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಬಕವಿ ಬನಹಟ್ಟಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ ಅವರಿಗೆ ಶಾಸಕ ಸಿದ್ದು ಸವದಿ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದರು.

ಲಕ್ಷಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ನೇಮಣ್ಣ ಸಾವಂತನವರ, ಸಂಜಯ ಅಮ್ಮಣಗಿಮಠ, ಹಾರೂನ್ ಸಾಂಗ್ಲಿಕರ್, ಸಾಗರ ಚವಾಜ, ರಾಹುಲ ಕಲಾಲ, ಸತ್ಯಪ್ಪ ಮಗದುಮ್, ರಮೇಶ ಸವದಿ, ಸುಕುಮಾರ ಪಾಟೀಲ, ನಿಲೇಶ ದೇಸಾಯಿ, ಶಂಕರ ಜಾಲಿಗಿಡದ, ಶ್ರೀಶೈಲ ದಳವಾಯಿ ಸೇರಿದಂತೆ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next