Advertisement

ಐಷಾರಾಮಿ ಬದುಕು ತೊರೆದ ಸಂಸದರ ಪುತ್ರಿ ಸೇನೆಗೆ ಸೇರ್ಪಡೆ

06:00 AM Apr 02, 2018 | Team Udayavani |

ಡೆಹ್ರಾಡೂನ್‌: ಸಾಮಾನ್ಯವಾಗಿ ರಾಜಕಾರಣಿಗಳು ಸೇನೆಯನ್ನು, ಯೋಧರನ್ನು ಗುಣಗಾನ ಮಾಡುವುದುಂಟು. ಆದರೆ ಸೇನೆಗೆ ತಮ್ಮ ಮಕ್ಕಳನ್ನು ಸೇರಿಸುವ ವಿಚಾರ ಬಂದಾಗ ಮೌನಿಯಾಗುತ್ತಾರೆ. ಆದರೆ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹಾಗೂ ಹರಿದ್ವಾರದ ಬಿಜೆಪಿ ಸಂಸದ ರಮೇಶ್‌ ಪೋಖೀಯಾಲ್‌ ಅವರ ಪುತ್ರಿ ಡಾ. ಶ್ರೇಯಸಿ ನಿಶಾಂಕ್‌ ಶನಿವಾರ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ರೂರ್ಕಿಯಲ್ಲಿನ ಸೇನಾ ಆಸ್ಪತ್ರೆಯಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಈ ಮೂಲಕ ರಾಜಕಾರಣಿಗಳ ಮೇಲಿನ ಆರೋಪವನ್ನು ಸುಳ್ಳಾಗಿಸಿದ್ದಾರೆ.

Advertisement

ಈ ಬಗ್ಗೆ ಟ್ವಿಟರ್‌ನಲ್ಲಿ ಸಂಸದ ರಮೇಶ್‌ ಬರೆದುಕೊಂಡಿದ್ದು, ಪುತ್ರಿಯೊಂದಿಗಿನ ಚಿತ್ರವನ್ನೂ ಪ್ರಕಟಿಸಿದ್ದಾರೆ. ಸೇನಾ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೇಯಸಿಗೆ ಸ್ಟಾರ್‌ ತೊಡಿಸಿ, ವಿದ್ಯುಕ್ತವಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಸೇನೆಯ ವೈದ್ಯಕೀಯ ತುಕಡಿಯಲ್ಲಿ ಅವರು ಸೇವೆ ಸಲ್ಲಿಸಲಿದ್ದಾರೆ. ಶ್ರೇಯಸಿ ಅವರು ಹೃಷಿಕೇಶದಲ್ಲಿ ಎಂಬಿಬಿಎಸ್‌ ಹಾಗೂ ಮಾರಿಷಸ್‌ನಲ್ಲಿ ಉನ್ನತ ಅಧ್ಯಯನ ನಡೆಸಿದ್ದಾರೆ.

ನನ್ನ ಪುತ್ರಿ ಸೇನೆಗಾಗಿ ಕೆಲಸ ಮಾಡುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಕುಟುಂಬದಲ್ಲಿ ಇದೇ ಮೊದಲ ಬಾರಿಗೆ ನನ್ನ ಪುತ್ರಿ ಸೇನೆಗೆ ಸೇರಿದ್ದಾಳೆ. ನನ್ನ ಕುಟುಂಬದಲ್ಲಿ ಯಾರಾದರೂ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂದು ನಾನು ಬಯಸಿದ್ದೆ. ಇದು ನನ್ನ ಪುತ್ರಿಯ ಮೂಲಕ ಸಾಧ್ಯವಾಯಿತು. ಇದಕ್ಕಿಂತ ಹೆಮ್ಮೆ ಬೇರೆ ಇನ್ನೇನಿಲ್ಲ ಎಂದು ರಮೇಶ್‌ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next